ಕಬ್ಬಿನ ಬಾಕಿ ಬಿಲ್ ಪಾವತಿಗೆ ಆಗ್ರಹಿಸಿ ಸಿಎಂಗೆ ಮುತ್ತಿಗೆ ಯತ್ನ: ರೈತರನ್ನು ವಶಕ್ಕೆ ಪಡೆದ ಪೊಲೀಸರು

Update: 2021-06-04 13:09 GMT

ಬೆಳಗಾವಿ, ಜೂ 4: ಕಬ್ಬಿನ ಬಾಕಿ ಬಿಲ್ ಪಾವತಿಸುವಂತೆ ಒತ್ತಾಯಿಸಿ ಬೆಳಗಾವಿಯ ಸುವರ್ಣಸೌಧದ ಬಳಿ ಪ್ರತಿಭಟನೆಗೆ ಮುಂದಾದ ರೈತರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ.

ಕೋವಿಡ್ ನಿಯಂತ್ರಣ ಹಾಗೂ ಅಭಿವೃದ್ಧಿ ವಿಷಯಗಳ ಕುರಿತು ಶುಕ್ರವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸುವರ್ಣಸೌಧದಲ್ಲಿ ಹಮ್ಮಿಕೊಳ್ಳಲಾದ ಪರಿಶೀಲನಾ ಸಭೆಗೆ ಆಗಮಿಸುವ ಮೊದಲೆ ರೈತ ಮುಖಂಡರು, ಕಬ್ಬಿನ ಬಾಕಿ ಬಿಲ್ ಕೊಡಿಸುವಂತೆ ಸುವರ್ಣ ಸೌಧದ ಬಳಿ ಪ್ರತಿಭಟನೆಗೆ ಮುಂದಾದರು.

ಇದೇ ಸಂದರ್ಭದಲ್ಲಿ ಪೊಲೀಸರು ಅವರನ್ನು ತಡೆಯಲು ಯತ್ನಿಸಿದಾಗ ರೈತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಕಬ್ಬಿನ ಬಾಕಿ ಬಿಲ್ ಕೊಡಿಸುವಂತೆ ಮುಖ್ಯಮಂತ್ರಿ ಅವರನ್ನು ಕೇಳಲು ಬಂದಿದ್ದೇವೆ. ಅಂದಾಜು 1500 ಕೋಟಿ ಕಬ್ಬಿನ ಬಿಲ್ ಬಾಕಿಯಿದೆ. ರೈತರು ಲಾಕ್‍ಡೌನ್ ಸಂದರ್ಭದಲ್ಲಿ ತೀರ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ನಾವು ನಮ್ಮ ಕಷ್ಟವನ್ನು ಯಾರಿಗೆ ಹೇಳಬೇಕು. ಮುಖ್ಯಮಂತ್ರಿಗಳ ಭೇಟಿಗೆ ಅವಕಾಶ ಮಾಡಿಕೊಡಿ ಎಂದು ರೈತರು ತಿಳಿಸಿದರು.

ಬಳಿಕ ಸರಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಇದೇ ಸಂದರ್ಭದಲ್ಲಿ ಪ್ರತಿಭಟನಾನಿರತ ರೈತರನ್ನು ತಡೆದು ಪೊಲೀಸರು ವಶಕ್ಕೆ ಪಡೆದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News