ಮೈಸೂರು ಡಿಸಿ ವರ್ಗಾವಣೆ ವಿಚಾರ: ಹೈಕೋರ್ಟ್ ಮೆಟ್ಟಿಲೇರಿದ ಐಎಎಸ್ ಅಧಿಕಾರಿ ಬಿ.ಶರತ್
ಬೆಂಗಳೂರು, ಜೂ 4: ಮೈಸೂರು ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಕಿರುಕುಳ ಆರೋಪ ಮಾಡಿ ಐಎಎಸ್ ಅಧಿಕಾರಿ ಶಿಲ್ಪಾ ನಾಗ್ ರಾಜೀನಾಮೆ ನೀಡಿದ ಬೆನ್ನಲ್ಲೇ ಇತ್ತ ಐಎಎಸ್ ಅಧಿಕಾರಿ ಬಿ.ಶರತ್ ಅವರು ತಮ್ಮನ್ನು ಮೈಸೂರು ಡಿಸಿ ಹುದ್ದೆಯಿಂದ ಅವಧಿಪೂರ್ವ ವರ್ಗಾವಣೆ ಮಾಡಿರುವ ಕ್ರಮ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇದೇ ವೇಳೆ ಸಿಎಟಿ ನೀಡಿರುವ ಆದೇಶ ಪ್ರಶ್ನಿಸಿ ಸರಕಾರವೂ ಕೂಡ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದೆ.
ವರ್ಗಾವಣೆ ಪ್ರಶ್ನಿಸಿ ಐಎಎಸ್ ಅಧಿಕಾರಿ ಬಿ.ಶರತ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾ. ಅರವಿಂದ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ಈ ವೇಳೆ ಸರಕಾರದ ಪರ ವಕೀಲರು ಪೀಠಕ್ಕೆ ಮನವಿ ಮಾಡಿ, ರಾಜ್ಯ ಸರಕಾರ ಹಾಗೂ ಸರಕಾರದ ಹಿರಿಯ ಅಧಿಕಾರಿಗಳು ಎಲ್ಲರೂ ಕೊರೋನ ನಿಯಂತ್ರಣ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಹೀಗಾಗಿ ಅರ್ಜಿಗೆ ಪ್ರತಿಕ್ರಿಯಿಸಲು ಹೆಚ್ಚಿನ ಕಾಲಾವಕಾಶ ಬೇಕಿದೆ. ಆದುದರಿಂದ, ಪ್ರಕರಣದ ವಿಚಾರಣೆಯನ್ನು ಮುಂದೂಡಬೇಕು ಎಂದು ಪೀಠಕ್ಕೆ ಮನವಿ ಮಾಡಿದರು.
ಹೆಚ್ಚಿನ ಕಾಲಾವಕಾಶ ನೀಡಲು ನಿರಾಕರಿಸಿದ ನ್ಯಾಯಪೀಠ, ವಿಚಾರಣೆಯನ್ನು ಜೂ.7ಕ್ಕೆ ಮುಂದೂಡಿ ಅಷ್ಟರೊಳಗೆ ಸರಕಾರ ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿತು.
ರಾಜ್ಯ ಸರಕಾರ ರೋಹಿಣಿ ಸಿಂಧೂರಿ ಅವರನ್ನು ಮೈಸೂರು ಡಿಸಿ ಹುದ್ದೆಗೆ ನಿಯೋಜಿಸಲು ಬಿ. ಶರತ್ ಅವರನ್ನು ವರ್ಗಾವಣೆ ಮಾಡಿತ್ತು. 2020ರ ಆಗಸ್ಟ್ ನಲ್ಲಿ ಮೈಸೂರು ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಬಿ.ಶರತ್ ಅವರನ್ನು ಒಂದು ತಿಂಗಳ ಅವಧಿಗೆ ಮೊದಲೇ ಸೆಪ್ಟೆಂಬರ್ ತಿಂಗಳಲ್ಲಿ ವರ್ಗಾವಣೆ ಮಾಡಿತ್ತು. ಸರಕಾರದ ಈ ಕ್ರಮ ಪ್ರಶ್ನಿಸಿ ಬಿ. ಶರತ್ ಕೇಂದ್ರ ಆಡಳಿತಾತ್ಮಕ ನ್ಯಾಯಾಧಿಕರಣಕ್ಕೆ(ಸಿಎಟಿ) ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ್ದ ಸಿಎಟಿ ತೀರ್ಪು ಪ್ರಕಟಿಸಲು ವಿಳಂಬ ಮಾಡಿತ್ತು. ತೀರ್ಪು ಪ್ರಕಟಿಸುವಂತೆ ಹೈಕೋರ್ಟ್ ನಿರ್ದೇಶನ ನೀಡಿದ ಬಳಿಕ ಬಿ. ಶರತ್ ಅವರ ವರ್ಗಾವಣೆ ವಿಚಾರವಾಗಿ ಸಕ್ಷಮ ಪ್ರಾಧಿಕಾರವೇ ನಿರ್ಣಯಿಸುವಂತೆ ಸೂಚಿಸಿ, ವರ್ಗಾಯಿಸಿತ್ತು. ಈ ಹಿನ್ನೆಲೆಯಲ್ಲಿ ಸರಕಾರದ ವರ್ಗಾವಣೆ ಕ್ರಮ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿರುವ ಐಎಎಸ್ ಅಧಿಕಾರಿ ಬಿ. ಶರತ್, ಸಿಎಟಿ ಆದೇಶವನ್ನು ಕೂಡ ರದ್ದುಗೊಳಿಸಬೇಕು ಎಂದು ಕೋರಿದ್ದಾರೆ. ಹಾಗೆಯೇ, ರೋಹಿಣಿ ಸಿಂಧೂರಿ ನೇಮಕ ರದ್ದುಗೊಳಿಸುವಂತೆಯೂ ಮನವಿ ಮಾಡಿದ್ದಾರೆ.
ಇನ್ನು ಅಧಿಕಾರಿಗಳ ವರ್ಗಾವಣೆಗೆ ಮಂಡಳಿ ರಚಿಸಲು ನೀಡಿದ್ದ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರಕಾರವೂ ಅರ್ಜಿ ಸಲ್ಲಿಸಿದೆ.