ಜನರ ಜೀವನೋಪಾಯಕ್ಕಾಗಿ ಸಮಗ್ರ, ಪರಿಣಾಮಕಾರಿ ಪ್ಯಾಕೇಜ್ ಘೋಷಿಸಿ: ಜನಾಗ್ರಹ ಆಂದೋಲನ ಆಗ್ರಹ

Update: 2021-06-04 15:27 GMT

ಬೆಂಗಳೂರು, ಜೂ. 4: ಕೋವಿಡ್ ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನರ ಜೀವಕ್ಕೆ ಭರವಸೆ ದೊರಕಬೇಕಾದರೆ, ಜನರ ಜೀವನೋಪಾಯಕ್ಕೆ ಆಸರೆ ಸಿಗಬೇಕಾದರೆ, ಬರಲಿರುವ 3ನೆ ಅಲೆಗೆ ಸಜ್ಜುಗೊಳಿಸಬೇಕಾದರೆ ಸರಕಾರ ಸಮಗ್ರವಾದ ಮತ್ತು ಪರಿಣಾಮಕಾರಿಯಾದ ಮೂರನೆ ಪ್ಯಾಕೇಜನ್ನು ಘೋಷಿಸಲೇಬೇಕು ಎಂದು 'ಜನಾಗ್ರಹ ಆಂದೋಲನ' ರಾಜ್ಯ ಸರಕಾರವನ್ನು ಆಗ್ರಹಿಸಿದೆ.

ಶುಕ್ರವಾರ ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಆಂದೋಲನದ ಮುಖಂಡರಾದ ಮಾವಳ್ಳಿ ಶಂಕರ್, ಕೆ.ಎಲ್.ಅಶೋಕ್, ರಾಜ್ಯದಲ್ಲಿ ಸುಮಾರು 70 ಲಕ್ಷದಷ್ಟಿರುವ ಎಲ್ಲ ಬಿಪಿಎಲ್ ಕುಟುಂಬಗಳಿಗೂ ಸಮಗ್ರ ಆಹಾರದ ಕಿಟ್ ಮತ್ತು ಮಾಸಿಕ 5 ಸಾವಿರ ರೂ.ಆರ್ಥಿಕ ನೆರವನ್ನು ನೀಡಬೇಕು. ಕೋವಿಡ್‍ನಿಂದಾಗಿ ಅನಾಥಗೊಂಡಿರುವ ಕುಟುಂಬಗಳಿಗೆ ಬದುಕು ಕಟ್ಟಿಕೊಳ್ಳಲು 5 ಲಕ್ಷ ರೂ.ಪರಿಹಾರ ಧನ ನೀಡಬೇಕು. ರೈತರ ಮುಂಗಾರು ಬಿತ್ತನೆಯ ಗೊಬ್ಬರ ಮತ್ತು ಬೀಜಕ್ಕೆ ವಿಶೇಷ ಸಬ್ಸಿಡಿ ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ.

ಇಡೀ ರಾಜ್ಯದ ವೈದ್ಯಕೀಯ ವ್ಯವಸ್ಥೆಯನ್ನು ಬಲಪಡಿಸಬೇಕು, ಕೋವಿಡ್ ಚಿಕಿತ್ಸೆಯನ್ನು ಸಂಪೂರ್ಣ ಉಚಿತಗೊಳಿಸಬೇಕು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿರುವ ಸ್ಥಳಗಳಲ್ಲೆಲ್ಲಾ ಕೋವಿಡ್ ಆರೈಕೆ ಕೇಂದ್ರಗಳನ್ನು ಪ್ರಾರಂಭಿಸಬೇಕು. ಎಲ್ಲ ವಯಸ್ಸಿನವರಿಗೂ ಕೂಡಲೇ ಉಚಿತ ವ್ಯಾಕ್ಸಿನ್ ವ್ಯವಸ್ಥೆ ಮಾಡಬೇಕು. ಯಾವುದೇ ಗೊಂದಲ, ಅಸ್ಪೃಶ್ಯತೆ ಮತ್ತು ಭೇದಭಾವಕ್ಕೆ ಅವಕಾಶ ಕೊಡದೆ, ಎಷ್ಟು ದಿನದೊಳಗೆ ಹಾಗೂ ಯಾವ ರೀತಿಯ ಪ್ರಕ್ರಿಯೆ ಅಳವಡಿಸಿ ಇದನ್ನು ಪೂರ್ಣಗೊಳಿಸಲಾಗುವುದು ಎಂಬುದನ್ನು ಸರಕಾರ ಜನತೆಗೆ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ 70 ಲಕ್ಷ ಬಡ ಕುಟುಂಬಗಳಿವೆ. ಸರಕಾರದ ಪ್ಯಾಕೇಜ್ 5 ಲಕ್ಷ ಜನರನ್ನೂ ಉದ್ದೇಶಿಸಿಲ್ಲ. ಹಲವು ದುಡಿವ ಜನ ವಿಭಾಗಗಳ ಹೆಸರನ್ನು ತೆಗೆದುಕೊಂಡಿದ್ದರೂ ಅದರಲ್ಲಿ ನೋಂದಾಯಿಸಿಕೊಂಡವರಿಗೆ ಮಾತ್ರ ಅದು ಸಿಗಲಿದೆ. ನಮ್ಮಲ್ಲಿನ ಬಹುತೇಕ ಶ್ರಮಿಕರಿಗೆ ಯಾವ ನೋಂದಾವಣಿಯೂ ಇಲ್ಲ. ಅದು ಕೊಡುತ್ತಿರುವ ನೆರವು ಮೂರು ತಿಂಗಳಿಗೆ 2 ಅಥವಾ 3 ಸಾವಿರ ರೂ. ಅತಿದೊಡ್ಡ ಶ್ರಮಿಕ ವರ್ಗವಾದ ಗ್ರಾಮೀಣ ಕೂಲಿ ಕಾರ್ಮಿಕರನ್ನು, ಅತಿಸಣ್ಣ ಮತ್ತು ಸಣ್ಣ ರೈತರನ್ನು ಸರಕಾರ ಪರಿಗಣನೆಗೇ ತೆಗೆದುಕೊಂಡಿಲ್ಲ. ಇನ್ನು ವಲಸೆ ಕಾರ್ಮಿಕರ, ಅಲೆಮಾರಿಗಳ, ಆದಿವಾಸಿಗಳ ಕತೆ ಏನು? ಎಂದು ಪ್ರಶ್ನಿಸಲಾಗಿದೆ.

ಆಂದೋಲನವು ಜವಾಬ್ದಾರಿಯೊಂದಿಗೆ ಮತ್ತು ಎಲ್ಲ ಸಾಧ್ಯಸಾಧ್ಯತೆಗಳನ್ನು ಪರಿಶೀಲಿಸಿ ಮೇಲ್ಕಂಡ ಕ್ರಮಗಳಿಗಾಗಿ ಒತ್ತಾಯಿಸುತ್ತಿದೆ. ಜನಪರ ಆರ್ಥಿಕ ತಜ್ಞರು ಈ ಕ್ರಮಗಳಿಗಾಗಿ ತಗಲುವ ಒಟ್ಟು ವೆಚ್ಚವಷ್ಟು? ಮತ್ತು ಇದಕ್ಕಾಗಿ ಸಂಪನ್ಮೂಲ ಕ್ರೋಡೀಕರಣದ ಮಾರ್ಗಗಳು ಯಾವುವು? ಎಂಬ ಪ್ರಸ್ತಾಪವನ್ನು ಸಿದ್ಧಪಡಿಸುತ್ತಿದ್ದಾರೆ. ಒಂದೆರಡು ದಿನದಲ್ಲಿ ಈ ಖಚಿತ ಪ್ರಸ್ತಾಪ ಹೊಂದಿರುವ ಪತ್ರವನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು. ಅದಕ್ಕೂ ಸರಕಾರ ಸ್ಪಂದಿಸದೇ ಹೋದಲ್ಲಿ ಎಲ್ಲ ಮಂತ್ರಿಗಳು ಹಾಗೂ ಶಾಸಕರ ಮನೆಗಳ ಮುಂದೆ ಅನಿರ್ದಿಷ್ಟಾವಧಿ ಸತ್ಯಾಗ್ರಹ ಪ್ರಾರಂಭಿಸಲಾಗುವುದು ಎಂದು ಜನಾಗ್ರಹ ಆಂದೋಲನ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News