×
Ad

ಸರಕಾರಕ್ಕೆ ಅಧಿಕಾರಿಗಳ ಮೇಲೆ ಹಿಡಿತ ಇಲ್ಲ: ಡಿ.ಕೆ.ಶಿವಕುಮಾರ್

Update: 2021-06-04 23:14 IST

ದಾವಣಗೆರೆ, ಜೂ.4: ಲಸಿಕೆ ಹಂಚಿಕೆಯಲ್ಲಿ ಕೇಂದ್ರ, ರಾಜ್ಯ ಸರ್ಕಾರ ವಿಫಲವಾಗಿದೆ. ಸಿಎಂ ಅವರು ಲಸಿಕೆ ಕಾರ್ಯಕ್ರಮ ಉದ್ಘಾಟನೆ ಮಾಡಿದ ನಂತರ ನಮ್ಮ ಹುಡುಗರು ನಿರಂತರವಾಗಿ ಪ್ರಯತ್ನ ಮಾಡುತ್ತಿದ್ದರೂ ಕೂಡ ಆನ್‍ಲೈನ್ ರಿಜಿಸ್ಟ್ರೇಶನ್ ಇಲ್ಲ ಎಂದು ಬರುತ್ತಿದೆ. ಇದು ಯಡಿಯೂರಪ್ಪ ಸೇರಿದಂತೆ ಕೇಂದ್ರ ಸರ್ಕಾರದ ವೈಫಲ್ಯವಾಗಿದೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಟೀಕಿಸಿದರು.

ದಾವಣಗೆರೆಯ ಎಂಬಿಎ ಕಾಲೇಜಿನ ಹೆಲಿಪ್ಯಾಡ್‍ನಲ್ಲಿ ಮಾತನಾಡಿದ ಅವರು, ಮೈಸೂರಿನ ಅಧಿಕಾರಿಗಳ ವಿಷಯದಲ್ಲಿ ಶಾಸಕರು, ಸಚಿವರು ಏನು ಮಾಡುತ್ತಿದ್ದಾರೆ. ಇದನ್ನು ಗಮನಿಸಿದರೆ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರಕ್ಕೆ ಅಧಿಕಾರಿಗಳ ಮೇಲೆ ಹಿಡಿತ ಇಲ್ಲ ಎನ್ನವುದು ಗೊತ್ತಾಗುತ್ತದೆ. ಯಥಾ ರಾಜ ತಥಾ ಪ್ರಜಾ ಎನ್ನುವಂತೆ ಯಥಾ ಸಿಎಂ ತಥಾ ಅಧಿಕಾರಿ ಎಂದು ಮೈಸೂರು ಜಿಲ್ಲಾಧಿಕಾರಿ ಹಾಗು ಆಯುಕ್ತರ ವಿಚಾರವಾಗಿ ರಾಜ್ಯದ ಬಿಜೆಪಿ ಸರ್ಕಾರದ ಆಡಳಿತದ ವಿರುದ್ಧ ಡಿಕೆಶಿ ಆಕ್ರೋಶ ವ್ಯಕ್ತಪಡಿಸಿದರು.   

ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರೋ ಮಂತ್ರಿ ಸ್ವಾಮಿಗಳಿಗೆ ಸಿಡಿ ತೋರಿಸಲು ಮಠಕ್ಕೆ ಹೋಗಿದ್ದರಂತೆ. ಆ ಮಠದ ಸ್ವಾಮೀಜಿಗಳು ಮಂತ್ರಿಯನ್ನು ಬೈದು ಕಳುಹಿಸಿದ್ದಾರೆ. ಯತ್ನಾಳ್ ಹೇಳಿದ್ದಾರಲ್ಲ ಅದೇ ಸಿಡಿ ವಿಚಾರ ಎಂದು ಡಿ.ಕೆ ಶಿವಕುಮಾರ್ ಹೇಳಿದರು.

ಈ ಸಂದರ್ಭ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಕಾಂಗ್ರೆಸ್ ಮುಖಂಡರಾದ ಈಶ್ವರ್ ಖಂಡ್ರೆ, ಸಲೀಂ ಅಹಮ್ಮದ್, ಪಿ.ಟಿ.ಪರಮೇಶ್ವರ್ ನಾಯ್ಕ, ಕೆ.ಸಿ.ಕೊಂಡಯ್ಯ, ಎಸ್.ರಾಮಪ್ಪ, ಹೆಚ್.ಬಿ.ಮಂಜಪ್ಪ, ಡಿ.ಬಸವರಾಜ್ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News