ಎಂಆರ್‍ಪಿಎಲ್ ನಿಂದ ಉದ್ಯೋಗ ವಂಚನೆ, ಕರಾವಳಿಯ ಜನಪರ ಸಂಘಟನೆಗಳ ಪ್ರತಿಭಟನೆಗೆ ಕರವೇ ಬೆಂಬಲ: ನಾರಾಯಣಗೌಡ
ಬೆಂಗಳೂರು, ಜೂ.4: ಮಂಗಳೂರಿನ ಎಂಆರ್‍ಪಿಎಲ್ ಸಂಸ್ಥೆಯು ಸ್ಥಳೀಯರಿಗೆ ವಂಚಿಸಿ ಉತ್ತರ ಭಾರತೀಯರಿಗೆ ಉದ್ಯೋಗ ನೀಡಿರುವ ಹಿನ್ನೆಲೆಯಲ್ಲಿ ಕರಾವಳಿಯ ಜನಪರ ಸಂಘಟನೆಗಳು ಜೂ.5ಕ್ಕೆ ಕರೆ ನೀಡಿರುವ ಮನೆಮನೆ ಪ್ರತಿಭಟನೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ಸಂಪೂರ್ಣವಾಗಿ ಬೆಂಬಲಿಸುತ್ತದೆಂದು ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಎಂಆರ್‍ಪಿಎಲ್ ಸಂಸ್ಥೆ 233 ಹುದ್ದೆಗಳಿಗೆ ಉತ್ತರ ಪ್ರದೇಶ, ಬಿಹಾರ ಮತ್ತಿತರ ರಾಜ್ಯಗಳ ಜನರನ್ನೇ ತುಂಬಿಕೊಂಡಿದೆ. ಎಂಆರ್‍ಪಿಎಲ್‍ಗೆ ಭೂಮಿ ಕೊಟ್ಟ ಜನರಿಗೇ ಉದ್ಯೋಗ ನೀಡದಿದ್ದರೆ ಇಂಥ ಉದ್ಯಮಗಳು ನಮಗೆ ಬೇಕಾಗಿಲ್ಲ. ಸ್ಥಳೀಯರಿಗೆ ಉದ್ಯೋಗ ದೊರೆಯಬೇಕಿರುವುದು ಸಹಜ ನ್ಯಾಯವೆಂದು ಅಭಿಪ್ರಾಯಿಸಿದ್ದಾರೆ.
ಡಾ ಸರೋಜಿನಿ ಮಹಿಷಿ ವರದಿ ಇಂದಿಗೂ ಜಾರಿಯಾಗಿಲ್ಲ. ರಾಜ್ಯ ಸರಕಾರ ಪರಿಷ್ಕೃತ ಆದೇಶವನ್ನೂ ಹೊರಡಿಸಿತು, ಅದೂ ಪಾಲನೆಯಾಗುತ್ತಿಲ್ಲ. ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳೇ ಹೀಗೆ ಸ್ಥಳೀಯರಿಗೆ ವಂಚಿಸಿದರೆ ಜನರು ಏನು ಮಾಡಬೇಕು? ಮಣ್ಣಿನ ಮಕ್ಕಳಿಗೆ ಉದ್ಯೋಗ ಒದಗಿಸದ ಎಂಆರ್‍ಪಿಎಲ್ ವಿಸ್ತರಣೆಗಾಗಿ ಬೇಡಿಕೆಯಿಟ್ಟಿರುವ ಒಂದಿಂಚು ಜಾಗವನ್ನೂ ಕೊಡಕೂಡದು. ಎಂಆರ್‍ಪಿಎಲ್‍ನಲ್ಲಿ ಸ್ಥಳೀಯರಿಗೆ ಸಿಂಹಪಾಲು ಇರಬೇಕು. ಉಳಿದ ಹುದ್ದೆಗಳು ಕರ್ನಾಟಕದ ಇತರ ಜಿಲ್ಲೆಗಳಿಗೆ ಲಭ್ಯವಾಗಬೇಕೆಂದು ಅವರು ತಿಳಿಸಿದ್ದಾರೆ.