ಪಾಸಿಟಿವ್ ರೇಟ್ ಕಡಿಮೆ ಇರುವ ಜಿಲ್ಲೆಗಳಲ್ಲಿ ಲಾಕ್‍ಡೌನ್ ತೆರವು ಬಗ್ಗೆ ಚರ್ಚಿಸಿ ತೀರ್ಮಾನ: ಸಿಎಂ ಬಿಎಸ್‌ವೈ

Update: 2021-06-05 13:04 GMT

ಬೆಂಗಳೂರು, ಜೂ. 5: ಕೋವಿಡ್ ಪಾಸಿಟಿವಿಟಿ ರೇಟ್ ಶೇ.5ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಿಗೆ ಕಠಿಣ ನಿರ್ಬಂಧ ಸಡಿಲಿಕೆ ಸಂಬಂಧ ಇನ್ನೂ ನಾಲ್ಕೈದು ದಿನಗಳಲ್ಲಿ ಅಧಿಕಾರಿಗಳು ಹಾಗೂ ತಜ್ಞರ ಜತೆ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಶನಿವಾರ ಇಲ್ಲಿನ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸುದೀರ್ಘ ಲಾಕ್ ಡೌನ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಹೀಗಾಗಿ ಶೇ.5ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇರುವ ಜಿಲ್ಲೆಗಳಲ್ಲಿ ಲಾಕ್‍ಡೌನ್ ತೆರವುಗೊಳಿಸುವ ಸಂಬಂಧ ಶೀಘ್ರದಲ್ಲೆ ಸರಕಾರ ತೀರ್ಮಾನ ಮಾಡಲಿದೆ ಎಂದರು.

ರಾಜ್ಯದ ರಾಜಧಾನಿ ಬೆಂಗಳೂರು ನಗರದಲ್ಲಿ ಐದು ಸಾವಿರಕ್ಕಿಂತಲೂ ಕಡಿಮೆ ಪ್ರಕರಣಗಳು ವರದಿಯಾಗಿವೆ. ಅಲ್ಲದೆ, ಪಾಸಿಟಿವಿಟಿ ದರವೂ ಶೇ.4.94ರಷ್ಟಿದೆ. ಅಂದರೆ ಬೆಂಗಳೂರು ನಗರದಲ್ಲಿ ನೂರು ಜನರಿಗೆ ಕೋವಿಡ್ ಪರೀಕ್ಷೆ ನಡೆಸಿದರೆ ನಾಲ್ಕು ಮಂದಿಗೆ ಮಾತ್ರ ಪಾಜಿಟಿವ್ ಬರುತ್ತಿದೆ. ಮೂರು ತಿಂಗಳ ನಂತರ ಮೂರು ಸಾವಿರಕ್ಕಿಂತ ಕಡಿಮೆ ಕೇಸ್ ದಾಖಲಾಗಿದ್ದು, ಬಿಬಿಎಂಪಿ ವ್ಯಾಪ್ತಿಯ 8 ವಲಯಗಳಲ್ಲೂ 500 ಕ್ಕಿಂತ ಕಡಿಮೆ ಕೇಸ್ ದಾಖಲಾಗಿದೆ ಎಂದರು.

ಎಸೆಸೆಲ್ಸಿ ಪರೀಕ್ಷೆ ನಡೆಸುವ ಸರಕಾರದ ತೀರ್ಮಾನದ ಬಗ್ಗೆ ಪರ-ವಿರೋಧ ಅಭಿಪ್ರಾಯಗಳನ್ನು ಗಮನಿಸಿದ್ದೇನೆ. ರಾಜ್ಯ ಸರಕಾರ ಜುಲೈನಲ್ಲಿ ಪರೀಕ್ಷೆ ನಡೆಸಲು ನಿರ್ಧರಿಸಿದೆ. ಕೋವಿಡ್ ಸೋಂಕಿನ ಪರಿಸ್ಥಿತಿ ನೋಡಿಕೊಂಡು ಪರೀಕ್ಷೆ ನಡೆಸುವ ಸಂಬಂಧ ತೀರ್ಮಾನಿಸಲಾಗುವುದು. ಈ ಬಗ್ಗೆ ಯಾರೂ ಆತಂಕಪಡಬೇಕಿಲ್ಲ ಎಂದು ಯಡಿಯೂರಪ್ಪ ಇದೇ ವೇಳೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News