ದೇವೇಗೌಡರ ಪ್ರಧಾನಿಯಾಗಿದ್ದಾಗ ಯಾವುದೇ ರೀತಿಯಲ್ಲಿ ಅಪಸ್ವರ ಇರಲಿಲ್ಲ: ಎಸ್.ಎಂ.ಕೃಷ್ಣ

Update: 2021-06-05 15:41 GMT

ಬೆಂಗಳೂರು, ಜೂ. 5: `ಎಚ್.ಡಿ.ದೇವೇಗೌಡ ಅವರು ದೇಶದ ಪ್ರಧಾನಿಯಾಗಿ ಅತ್ಯಂತ ಶಿಸ್ತು, ಸಂಯಮ, ಗೌರವದಿಂದ ದೇಶವನ್ನು ಆಳಿದರು. ಅವರ ಆಡಳಿತಾವಧಿಯಲ್ಲಿ ಯಾವುದೇ ರೀತಿಯಲ್ಲಿ ಅಪಸ್ವರ ಇರಲಿಲ್ಲ' ಎಂದು ಮಾಜಿ ವಿದೇಶಾಂಗ ಸಚಿವ ಹಾಗೂ ಬಿಜೆಪಿ ಮುಖಂಡ ಎಸ್.ಎಂ.ಕೃಷ್ಣ ಇಂದಿಲ್ಲಿ ಬಣ್ಣಿಸಿದ್ದಾರೆ.

ಶನಿವಾರ ಎಚ್.ಡಿ.ದೇವೇಗೌಡ ಪ್ರಧಾನಿಯಾಗಿ 25 ವರ್ಷ ಸಾಧನೆ-ಸ್ಮರಣೆ ಅಭಿಯಾನದಲ್ಲಿ ಆನ್‍ಲೈನ್ ಮಾತನಾಡಿದ ಅವರು, `ಕಾಂಗ್ರೆಸ್ ಪಕ್ಷ ನೀಡಿದ ಬೆಂಬಲವನ್ನು ಹಿಂಪಡೆದ ಕಾರಣ ದೇವೇಗೌಡ ನೇತೃತ್ವದ ಕೇಂದ್ರ ಸರಕಾರ ವಿಶ್ವಾಸಮತ ಗಳಿಸುವಲ್ಲಿ ಸೋತಿತು. ವಾಜಪೇಯಿ ಸರಕಾರ ಪತನದ ಬಳಿಕ ಕಾಂಗ್ರೆಸ್ ತೃತೀಯ ರಂಗಕ್ಕೆ ಬೇಷರತ್ ಬೆಂಬಲ ನೀಡುವ ಭರವಸೆಯನ್ನು ಆಗಿನ ಎಐಸಿಸಿ ಅಧ್ಯಕ್ಷ ಪಿ.ವಿ.ನರಸಿಂಹರಾವ್ ನೀಡಿದ್ದರು. ಇದಕ್ಕೆ ನಾನು ಸಾಕ್ಷಿಯಾಗಿದ್ದೆ' ಎಂದು ಸ್ಮರಿಸಿದರು.

ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ನರಸಿಂಹರಾವ್ ಬದಲಾವಣೆಯಾಗಿ ಆ ಸ್ಥಾನಕ್ಕೆ ಸೀತಾರಾಂ ಕೇಸರಿ ಬಂದರು. ದೇವೇಗೌಡ ಹಾಗೂ ಸೀತಾರಾಮ್ ಕೇಸರಿ ಅವರು ನಡುವಿನ ಸಂಬಂಧ ಚೆನ್ನಾಗಿತ್ತು. ಆದರೂ, ನಂತರದ ದಿನಗಳಲ್ಲಿ ಸಂಶಯ ಸೃಷ್ಟಿಯಾಯಿತು. ಈ ಬೆಳವಣಿಗೆಗಳ ಮಧ್ಯೆಯೇ ರಾಜ್ಯದ ಕಾಂಗ್ರೆಸ್ ನಾಯಕರು ಹೈಕಮಾಂಡ್‍ಗೆ ಬೆಂಬಲ ಹಿಂಪಡೆಯಲು ಆಗ್ರಹಿಸುತ್ತಿದ್ದರು. ಈ ಒತ್ತಡಕ್ಕೆ ದೇವೇಗೌಡ ಬಲಿಯಾಗಬೇಕಾಯಿತು' ಎಂದು ಕೃಷ್ಣ ಹೇಳಿದರು.

ಕಾಂಗ್ರೆಸ್ ಪಕ್ಷ ಬೆಂಬಲ ಹಿಂಪಡೆಯುವ ಸುಳಿವು ದೇವೇಗೌಡ ಅವರಿಗೆ ಗುಪ್ತಚರ ಇಲಾಖೆಯಿಂದ ಸಿಕ್ಕ ಕೂಡಲೇ ಆರ್.ಕೆ.ಧವನ್ ಮತ್ತು ನಾನು, ಗೌಡರ ನಿವಾಸಕ್ಕೆ ತೆರಳಿದ್ದೆವು. ಆಗ ಧವನ್ ಅವರು ಇದನ್ನು ತಡೆಯಲು ಹೊರಟಿದ್ದರು. ಆದರೆ, ಆ ವೇಳೆಗಾಗಲೇ ಕಾಂಗ್ರೆಸ್ ಪಕ್ಷದ ಅಂದಿನ ಅಧ್ಯಕ್ಷ ಸೀತಾರಾಮ್ ಕೇಸರಿ ರಾಷ್ಟ್ರಪತಿ ಅವರನ್ನು ಭೇಟಿ ಮಾಡಿ ಬೆಂಬಲ ಹಿಂಪಡೆಯುವ ಮಾಹಿತಿ ನೀಡಿದ್ದರು. ಹೀಗಾಗಿ ಅಂದಿನ ರಾಷ್ಟ್ರಪತಿಗಳು, ಲೋಕಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸಲು ಸೂಚನೆ ನೀಡಿದ್ದರು. ಕಾಂಗ್ರೆಸ್ ಬೆಂಬಲ ಹಿಂಪಡೆದ ಪರಿಣಾಮ ದೇವೇಗೌಡ ನೇತೃತ್ವದ ಸರಕಾರ ಪತನವಾಯಿತು' ಎಂದು ಎಸ್.ಎಂ.ಕೃಷ್ಣ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News