ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಹೋದವರು ಸಾಯುತ್ತಿದ್ದಾರೆ: ಕೊಪ್ಪ ಕಿಸಾನ್ ಘಟಕದ ಅಧ್ಯಕ್ಷ ನಾರ್ವೆ ಅಶೋಕ್ ಆರೋಪ
ಚಿಕ್ಕಮಗಳೂರು, ಜೂ.5: ನಗರದಲ್ಲಿರುವ ಕೋವಿಡ್ ಆಸ್ಪತ್ರೆಗೆ ಹೋಗುವ ಸೋಂಕಿತರೆಲ್ಲರೂ ಹೆಣವಾಗಿ ಹಿಂದಿರುಗುತ್ತಿದ್ದಾರೆ. ಸೋಂಕಿತರಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಕೋವಿಡ್ ಆಸ್ಪತ್ರೆಯಲ್ಲಿ ಪ್ರತಿದಿನ 10ಕ್ಕೂ ಹೆಚ್ಚು ಮಂದಿ ಸಾವನ್ನಪ್ಪುತ್ತಿದ್ದರೂ ಜಿಲ್ಲಾಡಳಿತ ಈ ಅಂಕಿ ಅಂಶವನ್ನು ಮುಚ್ಚಿಡುತ್ತಿದೆ ಎಂದು ಕೊಪ್ಪ ತಾಲೂಕಿನ ಕಿಸಾನ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನಾರ್ವೆ ಅಶೋಕ್ ಆರೋಪಿಸಿದ್ದಾರೆ.
ಈ ಸಂಬಂಧ ಶನಿವಾರ ನಾರ್ವೆ ಅಶೋಕ್ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದು, ಈ ವಿಡಿಯೋ ಜಿಲ್ಲಾದ್ಯಂತ ಭಾರೀ ವೈರಲ್ ಆಗಿದ್ದು, ಕೋವಿಡ್ ಸೋಂಕು ನಿಯಂತ್ರಣಕ್ಕೆ ಜಿಲ್ಲಾಡಳಿತ, ಸಚಿವರು ಹಾಗೂ ಶಾಸಕರು ಪ್ರಮಾಣಿಕವಾಗಿ ಕೆಲಸ ಮಾಡುತ್ತಿಲ್ಲ. ಕೋವಿಡ್ ಆಸ್ಪತ್ರೆಯಲ್ಲಿ ಅಗತ್ಯ ಸೌಲಭ್ಯಗಳಿವೆ ಎನ್ನಲಾಗುತ್ತಿದೆಯಾದರೂ ಜಿಲ್ಲಾಸ್ಪತ್ರೆಯ ಕೋವಿಡ್ ಘಟಕಕ್ಕೆ ದಾಖಲಾಗುವ ಸೋಂಕಿತರ ಪೈಕಿ ಬಹುತೇಕ ಮಂದಿ ಸಾವನ್ನಪ್ಪುತ್ತಿದ್ದಾರೆಂಬ ಶಂಕೆ ವ್ಯಕ್ತವಾಗುತ್ತಿದೆ. ಕೊಪ್ಪ ತಾಲೂಕೊಂದರಲ್ಲೇ ಕಳೆದೊಂದು ವಾರದಲ್ಲಿ ಚಿಕ್ಕಮಗಳೂರು ನಗರದ ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗಿದ್ದ 6-8 ಮಂದಿ ಸಾವನ್ನಪ್ಪಿದ್ದಾರೆ ಎಂದು ನಾರ್ವೆ ಅಶೋಕ್ ವಿಡಿಯೋದಲ್ಲಿ ಹೇಳಿದ್ದಾರೆ.
ಚಿಕ್ಕಮಗಳೂರು ಜಿಲ್ಲಾಡಳಿತ ಕೋವಿಡ್‍ಗೆ ಬಲಿಯಾಗುವವರ ಸಂಖ್ಯೆಯನ್ನು ಮುಚ್ಚಿಡುತ್ತಿದೆ ಎಂದು ಆರೋಪಿಸಿರುವ ಅವರು, ಕೋವಿಡ್ ಆಸ್ಪತ್ರೆಯಲ್ಲಿ ಪ್ರತಿದಿನ 10-15 ಮಂದಿ ಸಾಯುತ್ತಿರುವ ಬಗ್ಗೆ ಶಂಕೆ ಇದೆ. ಸೋಂಕಿತರನ್ನು ಚಿಕ್ಕಮಗಳೂರು ನಗರದ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲು ಹೋಗಿದ್ದವರು ಸೋಂಕಿತರ ಮೃತದೇಹಗಳನ್ನು ಸಾಲಾಗಿ ಮಲಗಿಸಿದ್ದ ದೃಶ್ಯಗಳನ್ನು ಕಂಡಿರುವುದಾಗಿ ಹೇಳಿಕೆ ನೀಡಿದ್ದಾರೆ. ಜಿಲ್ಲಾಡಳಿತ ದಿನವೊಂದಕ್ಕೆ ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆಯನ್ನು ಮುಚ್ಚಿಡಬಾರದು. ಸಾವಿನ ಸಂಖ್ಯೆಗಾದರೂ ಜನರು ಭಯಪಟ್ಟು ಸುಖಾಸುಮ್ಮನೆ ತಿರುಗಾಡುವುದನ್ನು ನಿಲ್ಲಿಸುತ್ತಾರೆ. ಲಾಕ್‍ಡೌನ್ ಅವಧಿಯಲ್ಲಿ ಜನರು ಬೇಕಾಬಿಟ್ಟಿ ತಿರುಗಾಡುತ್ತಿದ್ದು, ಇದಕ್ಕೆ ಜಿಲ್ಲಾ ಪೊಲೀಸ್ ಇಲಾಖೆ ನಿಯಂತ್ರಣ ಹೇರಬೇಕೆಂದು ಅವರು ಆಗ್ರಹಿಸಿದ್ದಾರೆ.
ಚಿಕ್ಕಮಗಳೂರು ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾದರೇ ಬದುಕಲ್ಲ ಎಂಬ ಅಭಿಪ್ರಾಯವನ್ನು ಸಾರ್ವಜನಿಕರು ವ್ಯಕ್ತಪಡಿಸುತ್ತಿದ್ದು, ಇದರಿಂದ ಜನರು ಆತಂಕಕ್ಕೆ ತುತ್ತಾಗಿದ್ದಾರೆ. ಇನ್ನಾದರೂ ಜಿಲ್ಲಾಡಳಿತ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸಾ ಸೌಲಭ್ಯಗಳನ್ನು ಹೆಚ್ಚಿಸಬೇಕು. ಸೋಂಕಿತರ ಸಾವಿನ ಪ್ರಮಾಣವನ್ನು ಕಡಿಮೆ ಮಾಡಲು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಶಾಸಕರು ಶ್ರಮಿಸಬೇಕೆಂದು ಅವರು ವಿಡಿಯೋ ಮೂಲಕ ಆಗ್ರಹಿಸಿದ್ದಾರೆ.
ನಾರ್ವೆ ಅಶೋಕ್ ಅವರು ಕಳೆದ ವರ್ಷ ಕೋವಿಡ್ ಮೊದಲನೇ ಅಲೆಯಲ್ಲಿ ಸೋಂಕಿಗೆ ತುತ್ತಾಗಿದ್ದು, ಕೋವಿಡ್ ಕೇರ್ ಸೆಂಟರ್ ನಲ್ಲಿದ್ದ ಅವ್ಯವಸ್ಥೆಗಳ ಬಗ್ಗೆ ಇದೇ ರೀತಿಯಲ್ಲಿ ವಿಡಿಯೋ ಮೂಲಕ ಜಿಲ್ಲಾಡಳಿತ, ಜನಪ್ರತಿನಿಧಿಗಳು ಸರಕಾರದ ಗಮನ ಸೆಳೆದಿದ್ದರು. ಈ ವಿಡಿಯೋ ಬಳಿಕ ಕೋವಿಡ್ ಕೇರ್ ಸೆಂಟರ್ ನಲ್ಲಿ ಜಿಲ್ಲಾಡಳಿತ ಕೆಲ ಸುಧಾರಣೆ ಮಾಡಿತ್ತು.
ನಾರ್ವೆ ಅಶೋಕ್ ಅವರ ವಿಡಿಯೋ ಗಮನಿಸಿದ್ದೇನೆ. ಜಿಲ್ಲಾಡಳಿತ, ಆರೋಗ್ಯ ಇಲಾಖೆ ಕೋವಿಡ್‍ನಿಂದ ಮೃತರಾಗುವವರ ಸಂಖ್ಯೆಯನ್ನು ಮುಚ್ಚಿಡುತ್ತಿಲ್ಲ. ಹಾಗೆ ಮುಚ್ಚಿಡಲು ಸಾಧ್ಯವೇ ಇಲ್ಲ. ಕೋವಿಡ್ ಆಸ್ಪತ್ರೆಯಲ್ಲಿ ಉತ್ತಮ ರೀತಿಯ ಚಿಕಿತ್ಸೆ ನೀಡುವಲ್ಲಿ ಜಿಲ್ಲಾಡಳಿತ ಶ್ರಮಿಸುತ್ತಿದೆ.
- ಡಾ.ಉಮೇಶ್, ಡಿಎಚ್‍ಒ