×
Ad

ವಂಚನೆ ಆರೋಪ: ಸಕಲೇಶಪುರದಲ್ಲಿ ರೆವಿನ್ಯೂ ಇನ್‌ಸ್ಪೆಕ್ಟರ್‌ ಸೇರಿ ಇಬ್ಬರ ಬಂಧನ

Update: 2021-06-05 23:45 IST

ಸಕಲೇಶಪುರ: ಹೇಮಾವತಿ ಜಲಾಶಯ ಮುಳುಗಡೆ ಸಂತ್ರಸ್ತರ ಹೆಸರಿನಲ್ಲಿ 8 ಎಕರೆ ಭೂಮಿ ಮಂಜೂರು ಮಾಡಿಸಿಕೊಡುತ್ತೇನೆಂದು ವ್ಯಕ್ತಿಯೊಬ್ಬರಿಂದ  20 ಲಕ್ಷ ರೂಪಾಯಿ ಪಡೆದು, ಎಚ್‌ಆರ್‌ಪಿ ವಿಶೇಷ ಭೂ ಸ್ವಾಧೀನಾಧಿಕಾರಿಯ ಸಹಿ ನಕಲಿ ಮಾಡಿದ ಅಧಿಕೃತ ಜ್ಞಾಪನಾ ಪತ್ರ (ಓಎಂ) ನೀಡಿ ವಂಚನೆ ಮಾಡಿರುವ ಬಗ್ಗೆ ಇ‌ಲ್ಲಿಯ ಪಟ್ಟಣ ಪೊಲೀಸ್‌ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು, ರೆವಿನ್ಯೂ ಇನ್‌ಸ್ಪೆಕ್ಟರ್‌ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ.

ಸಕಲೇಶಪುರದಲ್ಲಿ ಕಂಪ್ಯೂಟರ್‌ ಸೆಂಟರ್ ನಡೆಸುತ್ತಿದ್ದು, ಇದೀಗ ಹಾಸನದಲ್ಲಿರುವ ಎಸ್‌.ಕೆ. ಪ್ರದೀಪ್‌ಕುಮಾರ್‌ ಹಾಗೂ ಯಸಳೂರು ರೆವಿನ್ಯೂ ಇನ್‌ಸ್ಪೆಕ್ಟರ್‌ ಮಂಜುನಾಥ್ ಇವರನ್ನು ಪಟ್ಟಣ ಪೊಲೀಸ್‌ ಠಾಣೆ ಪಿಎಸ್‌ಐ ಬಸವರಾಜ್ ಚಿಂಚೊಳ್ಳಿ ಶುಕ್ರವಾರ ಬಂಧಿಸಿದ್ದಾರೆ. ಪ್ರದೀಪ್‌ ಕುಮಾರ್‌ ವಿರುದ್ಧ ವಂಚನೆ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣಗೆ ಪೊಲೀಸರ ವಶಕ್ಕೆ ಪಡೆದುಕೊಳ್ಳಲಾಗಿದೆ.

ಈ ಅಕ್ರಮ ಭೂಮಿ ಮಂಜೂರು ವಿಚಾರದಲ್ಲಿ ರೆವಿನ್ಯೂ ಇನ್‌ಸ್ಪೆಕ್ಟರ್‌ ಮಂಜುನಾಥ್‌ ಅವರಿಗೆ ಸುಮಾರು 40 ಲಕ್ಷ ರೂಪಾಯಿ ನೀಡಿದ್ದೇನೆ. ಭೂ ಹಗರಣದಲ್ಲಿ ಅವರ ಪಾತ್ರವೂ ಇದೆ ಎಂದು ಪ್ರದೀಪ್‌ ಕುಮಾರ್‌ ಪೊಲೀಸರ ವಿಚಾರಣೆ ವೇಳ ಬಾಯ್ಬಿಟ್ಟಿದ್ದಾನೆ. ತನಿಖೆ ಚುರುಕುಗೊಳಿಸಿರುವ ಪೊಲೀಸರು ಆರ್‌ಐ ಮಂಜುನಾಥ್‌ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ, ಅವರ ಆಸ್ತಿ ವಿವರ, ಬ್ಯಾಂಕ್‌ ಖಾತೆ ನಂಬರ್‌ ಎಲ್ಲವನ್ನೂ ಸಂಗ್ರಹಿಸಿದ್ದಾರೆ.  

ಎಸ್‌.ಕೆ. ಪ್ರದೀಪ್‌ಕುಮಾರ್‌ ಎಂಬುವವರು ತಾಲೂಕಿನ ಬಾಗೆ ಗ್ರಾಮದ ರೈತ ಶಾಂತಕುಮಾರ್‌ ಎಂಬವರಿಗೆ ಹೇಮಾವತಿ ಜಲಾಶಯ ಯೋಜನೆಯ ಮು‌ಳುಗಡೆ ಸಂತ್ರಸ್ತರ ಹೆಸರಿನಲ್ಲಿ 8 ಎಕರೆ ಮಂಜೂರು ಮಾಡಿಸಿಕೊಡುತ್ತೇನೆ ಎಂದು ಹಣ ಪಡೆದಿದ್ದಾನೆ. ಆಲೂರು ತಾಲೂಕು ಕುಂದೂರು ಹೋಬಳಿ ಸತೀಶ್ ಮತ್ತು ಆಲೂರು ತಾಲ್ಲೂಕು ಪಾಳ್ಯ ಹೋಬಳಿ ಸಿಂಗಾಪುರ ಗ್ರಾಮದ ಜನಾರ್ಧನ್‌ ಇವರ ಹೆಸರಿನಲ್ಲಿ ಮುಳುಗಡೆ ಸರ್ಟಿಫಿಕೇಟ್‌ ಸೃಷ್ಟಿ ಮಾಡಲಾಗಿದೆ. ಆ ಸರ್ಟಿಫಿಕೇಟ್‌ಗೆ ಸಕಲೇಶಪುರ ತಾಲೂಕಿನ ಕಸಬಾ ಹೋಬಳಿ ಬುಗಡಹಳ್ಳಿ ಗ್ರಾಮದ ಸರ್ವೆ ನಂಬರ್‌ 43ರಲ್ಲಿ ತಲಾ 4 ಎಕರೆ ಹೇಮಾವತಿ ಜಲಾಶಯ ವಿಶೇಷ ಭೂ ಸ್ವಾಧೀನಾಧಿಕಾರಿ ಆದೇಶ ಮಾಡಿರುವಂತೆ ಅಧಿಕೃತ ಜ್ಞಾಪನ ಪತ್ರ  (ಓಎಂ) ಪ್ರಿಂಟ್‌ ಮಾಡಿ ಶಾಂತಕುಮಾರ್ ಅವರಿಗೆ ನೀಡಲಾಗಿದೆ. ಎರಡು ಕರಾರಿನ ಮೂಲಕ ತಲಾ 7.5 ಲಕ್ಷ ದಂತೆ ಒಟ್ಟು 15 ಲಕ್ಷ ರೂಪಾಯಿಗಳನ್ನು ನಗದು ಪಡೆದಿದ್ದಾರೆ. ಉಳಿದ 5 ಲಕ್ಷ ರೂಪಾಯಿಗಳನ್ನು ಶಾಂತಕುಮಾರ್ ಅವರ ಪುತ್ರ ಕಿರಣ್‌ ಕುಮಾರ್‌ ಎಂಬುವವರ ಐಸಿಐಸಿ ಬ್ಯಾಂಕಿನಿಂದ ಎಸ್‌.ಕೆ. ಪ್ರದೀಪ್‌ಕುಮಾರ್‌ ತನ್ನ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ದೂರುದಾರರು ಈ ಎಲ್ಲಾ ದಾಖಲೆಗಳನ್ನು ಪೊಲೀಸರಿಗೆ ನೀಡಿದ್ದಾರೆ.

ಇತ್ತೀಚೆಗೆ ಹೇಮಾವತಿ ಜಲಾಶಯ ವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿಯಿಂದ ಸುಮಾರು 8 ಸಾವಿರ ಎಕರೆ ಭೂಮಿ ಅಕ್ರಮವಾಗಿ ಮಂಜೂರಾಗಿದೆ ಎಂದು ಸಾರ್ವಜನಿಕ ಪ್ರಕಟಣೆ ಹಾಗೂ ಕೆಲವು ಮಾಧ್ಯಮಗಳಲ್ಲಿ ಈ ವಿಚಾರ ತಿಳಿದಾಗಲೇ ನಾವು ಹಣ ಕೊಟ್ಟು ಮೋಸ ಹೋಗಿದ್ದೇವೆ ಎಂದು ತಿಳಿಯಿತು. ಈ ಬಗ್ಗೆ ಪ್ರ‌ದೀಪ್‌ಗೆ ಕಡೆ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ. ಸಕಲೇಶಪುರ ಬಿಟ್ಟು ಹಾಸದನಲ್ಲಿ ವಾಸ ಇದ್ದಾನೆ ಎಂಬುದು ಹೊ‌ತ್ತಾಯಿರು. ಭೂಮಿ ಬೇಡ ನಾವು ಕೊಟ್ಟ ಹಣ ಕೊಡು ಎಂದು ಕೇಳಿದರೆ ಉಡಾಫೆಯ ಉತ್ತರ ನೀಡುತ್ತಾನೆ. ಆದ್ದರಿಂದ ನ್ಯಾಯಕ್ಕಾಗಿ ಪೊಲೀಸರಿಗೆ ದೂರು ನೀಡಿದ್ದೇವೆ ಎಂದು ಶಾಂತಕುಮಾರ್‌ ಸುದ್ದಿಗಾರರಿಗೆ ಹೇಳಿದರು.  

ದೂರು ನೀಡಿದ 12 ಗಂಟೆಯಲ್ಲಿ ಆರೋಪಿ ಬಂಧನ: ವಂಚನೆಗೆ ಒಳಗಾದ ಶಾಂತಕುಮಾರ್‌ ದೂರು ನೀಡಿದ 12 ಗಂಟೆಯೊಳಗೆ ಇನ್‌ಸ್ಪೆಕ್ಟರ್‌ ಗಿರೀಶ್ ಪಟ್ಟಣ ಪಿಎಸ್‌ಐ ಬಸವರಾಜ್‌ ಚಿಂಚೊಳ್ಳಿ ಜಿಲ್ಲಾ ಪೊಲೀಸ್‌ ವಿರಿಷ್ಠಾಧಿಕಾರಿಗಳ ನಿರ್ದೇಶನದ ಮೇಲೆ ಆರೋಪಿ ಪ್ರದೀಪ್‌ ಕುಮಾರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.   

ಎಚ್‌ಆರ್‌ಪಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಭೂ ಹಗರಣದಲ್ಲಿ ಸುಮಾರು 8 ಸಾವಿರ ಎಕರೆ ಅಕ್ರಮ ಮಂಜೂರಾತಿ ರದ್ದು ಎಂಬ ಮಾಹಿತಿ ಬಿಟ್ಟರೆ ‌ಇದುವರೆಗೂ ಯಾರ ವಿರುದ್ಧವೂ ಪ್ರಕರಣ ದಾಖಲಾಗಿರಲಿಲ್ಲ. ಸಕಲೇಶಪುರ ಪೊಲೀಸರು ಮೊದಲ ಪ್ರಕರಣ ದಾಖಲು ಮಾಡುವ ಮೂಲಕ ಧಕ್ಷತೆ ಮರೆದಿದ್ದಾರೆ ಎಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೋಸ ಹೋ‌ದವರಿಂದ ಸಾಲು ಸಾಲು ದೂರು: ಈ ಹಗರಣದಲ್ಲಿ ಸಾವಿರಕ್ಕೂ ಹೆಚ್ಚು ಜನ ಮೋಸ ಹೋಗಿದ್ದು, ಮಧ್ಯವರ್ತಿಗಳು, ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಸಾಲು ಸಾಲು ದೂರುಗಳು ಪೊಲೀಸ್‌ ಠಾಣೆಯಲ್ಲಿ ದಾಖಲಾಗಲಿವೆ.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News