​ಭಾರತ ಸಂಜಾತೆಗೆ ನಾಸಾದ ಮಹತ್ವಾಕಾಂಕ್ಷಿ ಯೋಜನೆಯ ಹೊಣೆ

Update: 2021-06-06 05:36 GMT

ಮೆಲ್ಬೋರ್ನ್ : ಆಳ ಬಾಹ್ಯಾಕಾಶಕ್ಕೆ ಬಾಹ್ಯಾಕಾಶ ನೌಕೆಯನ್ನು ಕಳುಹಿಸುವ ನಾಸಾದ ಮಹತ್ವಾಕಾಂಕ್ಷಿ "ಅರ್ಥೆಮಿಸ್" ಯೋಜನೆಯಲ್ಲಿ ರಾಕೆಟ್‌ನ ಪ್ರಮುಖ ಹಂತಗಳ ಮೇಲ್ವಿಚಾರಣೆಯ ಹೊಣೆ ಕೊಯಮತ್ತೂರು ಮೂಲದ ಸುಭಾಷಿಣಿ ಅಯ್ಯರ್ ಅವರ ಹೆಗಲೇರಿದೆ.

"ನಾವು ಚಂದ್ರನ ಮೇಲೆ ಕಾಲಿಟ್ಟ ಸುಮಾರು 50 ವರ್ಷದ ಬಳಿಕ, ಮನುಷ್ಯನನ್ನು ಚಂದ್ರಲೋಕಕ್ಕೆ, ಅದರಾಚೆಗೆ ಅಂದರೆ ಮಂಗಳಗ್ರಹಕ್ಕೆ ಒಯ್ಯಲು ನಾವು ಸಜ್ಜಾಗಿದ್ದೇವೆ" ಎಂದು ಅಯ್ಯರ್ ಹೇಳಿದ್ದಾರೆ.

ಅರ್ಥೆಮಿಸ್ ಮಾನವ ರಹಿತ ಬಾಹ್ಯಾಕಾಶ ವಾಹಕವಾಗಿದ್ದು, ಚಂದ್ರ ಹಾಗೂ ಮಂಗಳನ ಬಗ್ಗೆ ಸಂಶೋಧನೆ ನಡೆಸಲು ಕಳುಹಿಸಲು ಉದ್ದೇಶಿಸಿರುವ ಮೂರು ಸಂಕೀರ್ಣ ಮಿಷನ್‌ಗಳ ಪೈಕಿ ಮೊದಲನೆಯದು. ಓರಿಯನ್ ಬಾಹ್ಯಾಕಾಶ ನೌಕೆ ಮೂಲಕ ಇದನ್ನು ಕಳುಹಿಸಲಾಗುತ್ತದೆ. ಓರಿಯನ್ ಭೂಮಿಯಿಂದ 2.80 ಲಕ್ಷ ಮೈಲು ಚಲಿಸಲಿದ್ದು, ಮೂರು ವಾರದ ಪಯಣದಲ್ಲಿ ಚಂದ್ರನಾಚೆ ಸಾವಿರಾರು ಮೈಲು ದೂರವನ್ನು ಕ್ರಮಿಸಲಿದೆ.

ಈ ಮಿಷನ್ ವೇಳೆ ಇದು ಮಾಹಿತಿಯನ್ನು ಸಂಗ್ರಹಿಸಲಿದ್ದು, ಮಿಷನ್ ನಿಯಂತ್ರಕರು ಇದರ ಕ್ಷಮತೆಯನ್ನು ಆಧರಿಸಿ ಅರ್ಥೆಮಿಸ್-2 ಹಂತಕ್ಕೆ ಸಿದ್ಧತೆ ಮಾಡಿಕೊಳ್ಳಲಿದ್ದಾರೆ. ಎರಡನೇ ಹಂತದಲ್ಲಿ ಚಂದ್ರಲೋಕಕ್ಕೆ ಮಾನವಸಹಿತ ಬಾಹ್ಯಾಕಾಶ ನೌಕೆಯನ್ನು ಕಳುಹಿಸಲು ಉದ್ದೇಶಿಸಲಾಗಿದೆ. 2024ರಲ್ಲಿ ಅರ್ಥೆಮಿಸ್-2 ಬಾಹ್ಯಾಕಾಶಯಾನಿಗಳನ್ನು ಚಂದ್ರಲೋಕಕ್ಕೆ ಒಯ್ಯುವ ಯೋಜನೆ ಸಿದ್ಧಪಡಿಸಲಾಗಿದೆ.

ಕಳೆದ ಎಪ್ರಿಲ್‌ನಲ್ಲಿ ಕೆನಡಿ ಬಾಹ್ಯಾಕಾಶ ಕೇಂದ್ರಕ್ಕೆ ಈ ರಾಕೆಟ್‌ನ ಪ್ರಮುಖ ಹಂತಗಳು ಆಗಮಿಸಿದ್ದು, ಅಯ್ಯರ್ ಹಾಗೂ ಅವರ ತಂಡ ಅರ್ಥೆಮಿಸ್-1ರ ಭಾಗಗಳ ಮತ್ತು ಬಾಹ್ಯಾಕಾಶ ಉಡಾವಣೆ ವ್ಯವಸ್ಥೆ (ಎಸ್‌ಎನ್‌ಎಸ್)ಯ ಮೇಲ್ವಿಚಾರಣೆಯಲ್ಲಿ ತೊಡಗಿದೆ. ಕಳೆದ ಎರಡು ವರ್ಷದಿಂದ ಅವರು ಈ ಕಾರ್ಯದಲ್ಲಿ ನಿರತರಾಗಿದ್ದಾರೆ. ಪ್ರಮುಖ ಹಂತದ ನಿರ್ಮಾಣ ಹಾಗೂ ಹಸ್ತಾಂತರದ ಬಳಿಕ ನಾಸಾಗೆ ನೀಡುವ ಅಗತ್ಯ ನೆರವಿನ ಮೇಲ್ವಿಚಾರರಣೆ ನನ್ನ ಹೊಣೆ" ಎಂದು ಅಯ್ಯರ್ ವಿವರಿಸಿದ್ದಾರೆ.

ಅಯ್ಯರ್ ಅವರು 1992ರಲ್ಲಿ ಎಲ್‌ವಿಬಿ ಜಾನಕಿಯಮ್ಮಾಳ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News