ರಸಗೊಬ್ಬರ, ಬೀಜ ಅಧಿಕ ಬೆಲೆಗೆ ಮಾರಾಟ ಮಾಡಿದ್ದಲ್ಲಿ ಕ್ರಿಮಿನಲ್ ಪ್ರಕರಣ: ಸಚಿವ ಬಿ.ಸಿ. ಪಾಟೀಲ್

Update: 2021-06-06 16:03 GMT

ಶಿವಮೊಗ್ಗ: ರಸಗೊಬ್ಬರ, ಬೀಜ ಅಧಿಕ ಬೆಲೆಗೆ ಮಾರಾಟ ಮಾಡಿದರೆ ಅಂತಹವರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.

ನಗರದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸುದ್ದಿಗರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ರಸಗೊಬ್ಬರ ಮತ್ತು ಬಿತ್ತನೆ ಬೀಜ ಕೊರತೆ ಇಲ್ಲ. ಲಾಕ್‍ಡೌನ್ ಕಾರಣ ಹೇಳಿ ಕಳಪೆ ಗೊಬ್ಬರ ಮಾರಾಟ ಮಾಡುವುದು ಕಂಡುಬಂದರೆ ಕಾನೂನು ಕ್ರಮ ಜರುಗಿಸಲಾಗುವುದು. ಕೃಷಿ ಇಲಾಖೆಯ ಅಧಿಕಾರಿಗಳು ಗೊಬ್ಬರದ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಬೇಕು ಎಂದರು.

ನಗರದ ಜಿಲ್ಲಾಡಳಿತ ಸಭಾಂಗಣದಲ್ಲಿ ರವಿವಾರ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳ ಕುರಿತು ಕೃಷಿ ಸಂಬಂಧಿತ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಮಾತನಾಡಿದರು.

ಬೀಜ ಮತ್ತು ರಸಗೊಬ್ಬರಗಳನ್ನು ದಾಸ್ತಾನು ಇರಿಸಿಕೊಂಡು ಕೃತಕ ಅಭಾವ ಸೃಷ್ಟಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಸೋಂಕು ನಿಯಂತ್ರಿಸುವ ಸಂಬಂಧ ರಾಜ್ಯಾದ್ಯಂತ ಲಾಕ್ ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ರೈತರ ಕೃಷಿ ಚಟುವಟಿಕೆಗಳಿಗೆ ಯಾವುದೇ ಅಡಚಣೆ ಆಗದಂತೆ ಪೊಲೀಸ್ ಇಲಾಖೆ ಗಮನಹರಿಸಬೇಕು. ರೈತರಿಗೆ ನಷ್ಟ ಉಂಟಾಗದಂತೆ ಪ್ರತಿದಿನ ಬೆಳಗ್ಗೆ 6ರಿಂದ 10ರವರೆಗೆ ತಮ್ಮ ಕೃಷಿ ಉತ್ಪನ್ನಗಳಾದ ಹೂವು, ಹಣ್ಣು, ತರಕಾರಿ ಮಾರಾಟ, ಬೀಜ, ರಸಗೊಬ್ಬರ ಖರೀದಿಗೆ ಅನುಕೂಲ ಕಲ್ಪಿಸಬೇಕು. ಜಿಲ್ಲೆಯ ಗಡಿಭಾಗಗಳಲ್ಲಿನ ರೈತರ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ರೈತರು ಒಂದೇ ಬೆಳೆಯನ್ನು ಆಶ್ರಯಿಸದೆ ಹೊಲಗಳಲ್ಲಿ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಜಿಲ್ಲೆಯ ಕೆಲವು ಭಾಗಗಳಲ್ಲಿ ನಕಲಿ ಸಾವಯವ ಗೊಬ್ಬರಗಳನ್ನು ರೈತರಿಗೆ ಮಾರಾಟ ಮಾಡಿ ವಂಚಿಸುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದ್ದು ಸರಕಾರವು ಇದನ್ನು ಗಂಭೀರವಾಗಿ ಪರಿಗಣಿಸಿದೆ. ಮುಂದಿನ ದಿನಗಳಲ್ಲಿ ನಕಲಿ ಸಾವಯವ ಗೊಬ್ಬರ ಮಾರಾಟ ಮಾಡುವವರನ್ನು ಗುರುತಿಸಿ ದಂಡನೆಗೆ ಗುರಿಪಡಿಸಲಾಗುವುದು ಎಂದರು.

ಭೂಮಿ ತಂತ್ರಾಂಶ ಇನ್ನಷ್ಟು ಅಭಿವೃದ್ಧಿ: ಕಳೆದ ಸಾಲಿನಲ್ಲಿ ಕ್ರಾಪ್ ಸರ್ವೆ ತಂತ್ರಾಂಶ ಅಭಿವೃದ್ಧಿ ಪಡಿಸಿದ ನಂತರ ರೈತರಿಗೆ ಬಹು ಉಪಯುಕ್ತವಾಗಿದೆ ಕಳೆದ ಸಾಲಿನಲ್ಲಿ ಕೋಟಿಗೂ ಹೆಚ್ಚು ಜನ ರೈತರು ಕ್ರಾಪ್ ಸರ್ವೆನಲ್ಲಿ ಭಾಗವಹಿಸಿದ್ದರು. ಪ್ರಸ್ತುತ ರೈತರಿಗೆ ಉಪಯುಕ್ತವಾಗಿರುವ ಭೂಮಿ ತಂತ್ರಾಂಶವನ್ನು ಇನ್ನಷ್ಟು  ಅಭಿವೃದ್ಧಿಪಡಿಸಲು ಸೂಚಿಸಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಮಾತನಾಡಿದ ಸಂಸದ ಬಿ. ವೈ. ರಾಘವೇಂದ್ರ, ಕಳೆದ ಸಾಲಿನಲ್ಲಿ ಜಿಲ್ಲೆಯ 43 ಸಾವಿರಕ್ಕೂ ಹೆಚ್ಚಿನ ರೈತರಿಗೆ ಗುಣಮಟ್ಟದ ತಾಡಪಾಲುಗಳನ್ನು ವಿತರಿಸಲಾಗಿದೆ. ಅಲ್ಲದೆ ಮೊಬೈಲ್ ತಂತ್ರಾಂಶ ವಿನ್ಯಾಸಗೊಳಿಸಿ ಬಳಕೆಗೆ ಅನುಕೂಲ ಮಾಡಿಕೊಟ್ಟಿದ್ದು ರೈತರಿಗೆ ಉಪಯುಕ್ತವಾಗಿದೆ. ರೈತರಿಗೆ ಅನುಕೂಲವಾಗುವಂತೆ ಪಹಣಿ ಡಾಟಾ ಎಂಟ್ರಿ ಕಾರ್ಯ ತ್ವರಿತವಾಗುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಔಷಧ ಮತ್ತು ರಸಗೊಬ್ಬರಗಳನ್ನು ಸರಿಯಾದ ಪ್ರಮಾಣದಲ್ಲಿ ಬಳಕೆ ಮಾಡಲು ರೈತರಿಗೆ ತರಬೇತಿ ನೀಡುವ ಅಗತ್ಯವಿದೆ ಎಂದರು.

ಎಂಎಲ್‍ಸಿ ಆಯನೂರು ಮಂಜುನಾಥ್, ಶಾಸಕ ಕೆ.ಬಿ. ಅಶೋಕನಾಯ್ಕ್ ಇತರರಿದ್ದರು.

ಜಿಲ್ಲೆಯಲ್ಲಿ ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ನೀರಾವರಿ ಯೋಜನೆಗಳು ಪೂರ್ಣಗೊಂಡಿವೆ. ಈ ಭಾಗದ ರೈತರು ಕೈಗೊಳ್ಳಬೇಕಾದ ಕೃಷಿ ಚಟುವಟಿಕೆಗಳ ಕುರಿತು ರೈತರಿಗೆ ತರಬೇತಿ ನೀಡಬೇಕು.

- ಕುಮಾರ್ ಬಂಗಾರಪ್ಪ, ಶಾಸಕ

ಭತ್ತ ಕಟಾವಿಗೆ ಬರುವ ಸಂದರ್ಭದಲ್ಲಿ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಕೇಂದ್ರಗಳು ಆರಂಭಗೊಳ್ಳಬೇಕು. ಪ್ರಸ್ತುತ ಸಂಕೀರ್ಣ ಸಂದರ್ಭದಲ್ಲಿ ರೈತರಿಗೆ ಉಚಿತವಾಗಿ ಬೀಜ ಮತ್ತು ಗೊಬ್ಬರಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು.

- ಆರ್. ಪ್ರಸನ್ನಕುಮಾರ್, ಎಂಎಲ್‍ಸಿ

ಲಾಕ್‍ಡೌನ್‍ನಿಂದಾಗಿ ಕಚೇರಿಗಳು ಮುಚ್ಚಿರುವುದರಿಂದ ಹಾಗೂ ಅಧಿಕಾರಿಗಳು ಸಕಾಲದಲ್ಲಿ ಲಭ್ಯವಾಗದಿರುವುದರಿಂದ ಕಳೆದ ಸಾಲಿನ ದಾಖಲೆಗಳ ಆಧಾರದ ಮೇಲೆ ಬೆಳೆಸಾಲ ಪಡೆಯಲು ಅನುಮತಿ ನೀಡಬೇಕು.

- ಆರಗ ಜ್ಞಾನೇಂದ್ರ, ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News