×
Ad

ನಾಯಕತ್ವ ಬದಲಾವಣೆ ಚರ್ಚೆಯಿಂದ ಸರಕಾರ, ಪಕ್ಷದ ವರ್ಚಸ್ಸಿಗೆ ಧಕ್ಕೆ: ಸಚಿವ ಜಗದೀಶ್ ಶೆಟ್ಟರ್

Update: 2021-06-07 17:21 IST

ಹುಬ್ಬಳ್ಳಿ, ಜೂ. 7: `ನಾಯಕತ್ವ ಬದಲಾವಣೆ ವಿಷಯ ಪದೇ ಪದೇ ರಾಜ್ಯದಲ್ಲಿ ಏಕೆ ಚರ್ಚೆ ಆಗುತ್ತಿದೆ ಎಂದು ಗೊತ್ತಾಗುತ್ತಿಲ್ಲ. ಇದರಿಂದ ಸರಕಾರ ಹಾಗೂ ಪಕ್ಷದ ವರ್ಚಸ್ಸಿಗೂ ಧಕ್ಕೆಯಾಗುತ್ತಿದೆ. ಇಂತಹ ಚರ್ಚೆಗಳಿಂದ ನಮಗೂ ಕೆಲಸ ಮಾಡಲು ಆಗುತ್ತಿಲ್ಲ' ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ವಿಷಯ ಚರ್ಚೆಯಿಂದ ಸರಕಾರದ ಆಡಳಿತಕ್ಕೆ ಹೊಡೆತ ಬೀಳುತ್ತಿದೆ. ಬಿ.ಎಸ್.ಯಡಿಯೂರಪ್ಪನವರು ಆರಂಭದಿಂದಲೂ ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದವರು. ಅದಕ್ಕಾಗಿ ಅವರು ವರಿಷ್ಠರು ಹೇಳಿದಂತೆ ಕೇಳುತ್ತೇನೆ ಎಂದಿದ್ದಾರೆ. ಆ ಮಾತಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಐದಾರು ತಿಂಗಳುಗಳಿಂದ ಮುಖ್ಯಮಂತ್ರಿ ಬದಲಾವಣೆ ಚರ್ಚೆ ನಡೆಯುತ್ತಿದೆ. ಇದು ಎಲ್ಲಿ ಹುಟ್ಟಿತು ಎಂಬುದು ತಿಳಿಯುತ್ತಿಲ್ಲ. ಈಗ ನಾಯಕತ್ವ ಬದಲಾವಣೆ ಬಗ್ಗೆ ವರಿಷ್ಠರು ಮತ್ತು ನಮ್ಮ ಹಂತದಲ್ಲಿ ಚರ್ಚೆಯೇ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ ಜಗದೀಶ್ ಶೆಟ್ಟರ್, ಎಲ್ಲ ವ್ಯವಸ್ಥೆಯಲ್ಲಿ ಪರ್ಯಾಯ ನಾಯಕರು ಇರುತ್ತಾರೆ. ಅದನ್ನೇ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಇದರಲ್ಲೇನು ವಿಶೇಷ ಇಲ್ಲ ಎಂದು ತಿಳಿಸಿದರು.

ಬಿಎಸ್‍ವೈ ಅವರು ವಯಸ್ಸು ಅವರ ಕೆಲಸಕ್ಕೆ ಎಂದೂ ಅಡ್ಡಿ ಬಂದಿಲ್ಲ. ಅಲ್ಲದೆ, ಸಹಿ ಸಂಗ್ರಹ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಈಗಾಗಲೇ ನಮ್ಮ ಪಕ್ಷದ ನಾಯಕರು ಬಿ.ಎಸ್.ಯಡಿಯೂರಪ್ಪ ಅವರ ನಾಯಕತ್ವದ ಈಗಾಗಲೇ ಹಲವು ಬಾರಿ ಸ್ಪಷ್ಟನೆ ನೀಡಿದ್ದು, ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಜಗದೀಶ್ ಶೆಟ್ಟರ್ ಸ್ಪಷ್ಟನೆ ನೀಡಿದರು.

ರಾಜ್ಯದಲ್ಲಿ ಕೊರೋನ ಸೋಂಕಿತರ ಪಾಸಿಟಿವ್ ಪ್ರಮಾಣ ಶೇ.5ಕ್ಕಿಂತ ಕಡಿಮೆ ಬರೋವರೆಗೂ ಕೋವಿಡ್ ಲಾಕ್‍ಡೌನ್ ತೆರವು ಮಾಡುವುದಿಲ್ಲ. ಜೂ.14ರ ನಂತರ ಸೋಂಕಿನ ಪರಿಸ್ಥಿತಿ ನೋಡಿಕೊಂಡು ಹಂತ-ಹಂತವಾಗಿ ಲಾಕ್‍ಡೌನ್ ಸಡಿಲಿಕೆ ಮಾಡುವ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸಚಿವರು ಮತ್ತು ತಜ್ಞರ ಸಮಿತಿ ತೀರ್ಮಾನ ಮಾಡಲಿದೆ'

-ಜಗದೀಶ್ ಶೆಟ್ಟರ್, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News