ಮನ್‍ಮುಲ್ ಹಾಲಿಗೆ ನೀರು ಮಿಶ್ರಣ ಆರೋಪ: ಸಿಬಿಐ ತನಿಖೆ, ಅಧ್ಯಕ್ಷರ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ
ಮಂಡ್ಯ, ಜೂ.7: ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಲ್ಲಿ(ಮನ್‍ಮುಲ್) ನಡೆದಿರುವ ಹಾಲಿಗೆ ನೀರು ಮಿಶ್ರಣ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಹಾಗೂ ಕಿಸಾನ್ ಕಾಂಗ್ರೆಸ್ ಘಟಕ ಸಹಕಾರ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಒತ್ತಾಯಿಸಿದೆ.
ಸೋಮವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೇಶಹಳ್ಳಿ ಮೋಹನ್ ಕುಮಾರ್, ಕೆಲವು ವಿದ್ಯಾಮಾನಗಳನ್ನು ಗಮನಿಸಿದಾಗ ಆಡಳಿತ ಮಂಡಳಿಯೂ ಹಗರಣದಲ್ಲಿ ಶಾಮೀಲಾಗಿರುವ ಸಾಧ್ಯತೆಯಿದೆ ಎಂದು ಆರೋಪಿಸಿದರು.
ಹಾಲಿಗೆ ನೀರು ಮಿಶ್ರಣ ಮಾಡಿ ವಂಚನೆ ಮಾಡುತ್ತಿದ್ದ ಟ್ಯಾಂಕರ್ ಗಳ ಗುತ್ತಿಗೆದಾರರ ವಿರುದ್ಧ ಯಾವುದೇ ಕ್ರಮ ವಹಿಸಿಲ್ಲ. ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಸುತ್ತಿದ್ದೇವೆನ್ನುವುದು ಕೇವಲ ಕಣ್ಣೊರೆಸುವ ತಂತ್ರವಾಗಿದೆ ಎಂದು ಅವರು ದೂರಿದರು.
ಬೆಂಗಳೂರು, ತುಮಕೂರು ಒಕ್ಕೂಟಗಳಲ್ಲೂ ಸದರಿ ಗುತ್ತಿಗೆದಾರರು ವಂಚನೆ ನಡೆಸಿದ್ದು, ಅವರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಈ ಬಗ್ಗೆ ದಾಖಲಾತಿ ನೀಡಿದ್ದರೂ ಮನ್‍ಮುಲ್ ಅಧ್ಯಕ್ಷರು, ನಿರ್ದೇಶಕರು ಅದನ್ನು ನಿರಾಕರಿಸಿ ನಮ್ಮ ಮೇಲೆಯೇ ಮಾನನಷ್ಟ ಮೊಕದ್ದಮೆ ಬೆದರಿಕೆ ಹಾಕಿದ್ದಾರೆ ಎಂದು ಅವರು ಕಿಡಿಕಾರಿದರು.
ರೈತರು, ಹಾಲು ಉತ್ಪಾದಕರು, ಗ್ರಾಹಕರ ಹಿತದೃಷ್ಟಿಯಿಂದ ನಾವು ಪ್ರಕರಣದ ತನಿಖೆಗೆ ಒತ್ತಾಯಿಸಿದ್ದೇವೆ. ಇದರಲ್ಲಿ ಯಾವುದೇ ರಾಜಕಾರಣವಿಲ್ಲ. ಆದರೆ, ಜೆಡಿಎಸ್‍ನ ಶಾಸಕರೊಬ್ಬರು, ವಿಧಾನಪರಿಷತ್ ಸದಸ್ಯರೊಬ್ಬರು ಅನವಶ್ಯಕವಾಗಿ ನಮ್ಮನ್ನೇ ದೂರುವುದರ ಹಿಂದಿನ ಮರ್ಮವೇನು ಎಂದು ಅವರು ತರಾಟೆಗೆ ತೆಗೆದುಕೊಂಡರು.
52 ಟ್ಯಾಂಕರ್ ಗಳಿಗೆ ಟೆಂಡರ್ ಕರೆದು 40 ಟ್ಯಾಂಕರ್ ಗಳು ಟೆಂಡರ್ ಪ್ರಕ್ರಿಯೆ ಮೂಲಕ ಆಯ್ಕೆಯಾಗಿವೆ. ನಂತರ 30 ಟ್ಯಾಂಕರ್ ಗಳಿಗೆ ಟೆಂಡರ್ ಇಲ್ಲದೆ ಹಾಲು ಸರಬರಾಜು ಮಾಡುತ್ತಿವೆ. 4 ರಿಂದ 5 ನಿರ್ದೇಶಕರು ಬೇನಾಮಿ ಹೆಸರಿನಲ್ಲಿ ಟ್ಯಾಂಕರ್ ಬಿಟ್ಟಿದ್ದಾರೆ ಎಂದು ಅವರು ಹೇಳಿದರು.
ಪ್ರಕರಣವನ್ನು ಬಹಿರಂಗಪಡಿಸಿದವರು ಡಾ.ಮಂಜೇಶ್‍ಗೌಡರು, ಆದರೆ, ತಾವೇ ಬಯಲು ಮಾಡಿದ್ದೇವೆಂದು ಅಧ್ಯಕ್ಷರು, ನಿರ್ದೇಶಕರು ಹೇಳಿಕೊಳ್ಳುತ್ತಿದ್ದಾರೆ. ತಮಗೆ ಪ್ರಾಣ ಬೆದರಿಕೆ ಹಾಕಿದವರ ವಿರುದ್ಧ ಅಧ್ಯಕ್ಷರು ದೂರು ನೀಡಿಲ್ಲ. ಟ್ಯಾಂಕರ್ ಮಾಲಕರನ್ನು ಬಂಧಿಸಿಲ್ಲ. ಉಳಿದ ಟ್ಯಾಂಕರ್ ಗಳ ಪರಿಶೀಲನೆ ಆಗಿಲ್ಲ. ಆದ್ದರಿಂದ ಹಗರಣದಲ್ಲಿ ಆಡಳಿತ ಮಂಡಳಿ ಶಾಮೀಲಾಗಿದೆ ಎಂದು ಅವರು ದೂರಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಮಾತನಾಡಿ, ಯಾವುದೇ ಬೆದರಿಕೆಗೆ ನಾವು ಜಗ್ಗುವುದಿಲ್ಲ. ರೈತರ, ಹಾಲು ಉತ್ಪಾದಕರ, ಗ್ರಾಹಕರ ಹಿತವೇ ನಮ್ಮ ಗುರಿ. ಕೂಡಲೇ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ರಾಜೀನಾಮೆ ನೀಡಬೇಕು. ಪ್ರಕರಣದ ಸಿಬಿಐ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಈ ವಿಚಾರದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಶಾಸಕರು ಮೌನವಾಗಿರುವುದು ಏಕೆ ಎಂದು ಪ್ರಶ್ನಿಸಿದ ಅವರು, ತಪ್ಪಿತಸ್ಥರಿಗೆ ಶಿಕ್ಷೆ ಆಗುವವರೆಗೂ ನಮ್ಮ ಹೋರಾಟ ನಿಲ್ಲದು. ಯಾವುದೇ ಗೊಡ್ಡು ಬೆದರಿಕೆಗೆ ಹೆದರುವುದಿಲ್ಲ ಎಂದು ಅವರು ತಿಳಿಸಿದರು.
ಜಿಪಂ ಮಾಜಿ ಅಧ್ಯಕ್ಷ ಸುರೇಶ್ ಕಂಠಿ, ರುದ್ರಪ್ಪ, ಸಿ.ಎಂ.ದ್ಯಾವಮ್ಮ, ಇತರ ಮುಖಂಡರು ಉಪಸ್ಥಿತರಿದ್ದರು.