'ರಾಜೀನಾಮೆ' ಹೇಳಿಕೆ ಬೆನ್ನಲ್ಲೆ ಬಿರುಸುಗೊಂಡ ರಾಜಕೀಯ ಚಟುವಟಿಕೆ: ಬಿಎಸ್‌ವೈ ನಿವಾಸಕ್ಕೆ ಸಚಿವರು, ಶಾಸಕರ ದೌಡು

Update: 2021-06-07 13:07 GMT

ಬೆಂಗಳೂರು, ಜೂ. 7: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, `ಪಕ್ಷದ ಹೈಕಮಾಂಡ್ ಸೂಚಿಸಿದರೆ ರಾಜೀನಾಮೆ ನೀಡಲು ಸಿದ್ಧ' ಎಂದು ನಿನ್ನೆಯಷ್ಟೇ ಹೇಳಿಕೆ ನೀಡಿದ ಬೆನ್ನಲ್ಲೆ ಬಿಜೆಪಿ ಪಕ್ಷ ಹಾಗೂ ರಾಜ್ಯ ರಾಜಕೀಯ ವಲಯದಲ್ಲಿ ಚಟುವಟಿಕೆಗಳು ಬಿರುಸುಗೊಂಡಿವೆ.

ಯಡಿಯೂರಪ್ಪ ಅವರ ಹೇಳಿಕೆಯ ಸುತ್ತ ಪರ-ವಿರೋಧ ಚರ್ಚೆಗೆಳು ಆರಂಭವಾಗಿವೆ. ಒಂದೆಡೆ ಬಿಎಸ್‍ವೈ ಆಪ್ತ ಶಾಸಕರು ಸಹಿ ಸಂಗ್ರಹಕ್ಕೆ ಮುಂದಾಗಿದ್ದರೆ, ಮತ್ತೊಂದೆಡೆ ಸಚಿವರಾದ ಬೈರತಿ ಬಸವರಾಜ್, ನಾರಾಯಣಗೌಡ, ಶ್ರೀರಾಮುಲು, ಶಾಸಕರಾದ ಎಸ್.ರಘು, ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ಹಲವು ನಾಯಕರು ಸಿಎಂ ಅಧಿಕೃತ ನಿವಾಸ ಕಾವೇರಿಗೆ ಭೇಟಿ ನೀಡಿ ಸಮಾಲೋಚನೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಈ ಬೆಳವಣಿಗೆಗಳ ಮಧ್ಯೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, 'ಕೋವಿಡ್ ಸಾಂಕ್ರಾಮಿಕದಿಂದ ಜನ ಸಂಕಷ್ಟಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಪ್ರತಿಯೊಬ್ಬ ಬಿಜೆಪಿ ಶಾಸಕರು ತಮ್ಮ ತಮ್ಮ ಕ್ಷೇತ್ರದಲ್ಲಿ ಕೋವಿಡ್ ನಿಯಂತ್ರಣ ಕಾರ್ಯಗಳಿಗೆ ಆದ್ಯತೆ ನೀಡಬೇಕು. ಯಾರೂ ಸಹಿ ಸಂಗ್ರಹಿಸುವುದಾಗಲಿ, ರಾಜಕೀಯ ಹೇಳಿಕೆಗಳನ್ನು ನೀಡುವುದಾಗಲಿ ಮಾಡದೆ ಸಂಕಷ್ಟದಲ್ಲಿರುವ ಜನರಿಗೆ ನೆರವಾಗಬೇಕು ಎಂದು ವಿನಂತಿಸುತ್ತೇನೆ' ಎಂದು ಟ್ವೀಟ್ ಮಾಡಿರುವುದು ಮತ್ತಷ್ಟು ಗೊಂದಲ ಸೃಷ್ಟಿಸಿದೆ.

'ಮುಖ್ಯಮಂತ್ರಿ ಯಡಿಯೂರಪ್ಪನವರ ಪರ 65 ಮಂದಿ ಶಾಸಕರು ಸಹಿ ಸಂಗ್ರಹಿಸಿದ್ದೇವೆ' ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿಕೆ ಬೆನ್ನಲ್ಲೆ, 'ಅಂತಹ ಯಾವುದೇ ಸಹಿ ಸಂಗ್ರಹ ಮಾಡಿಲ್ಲ. ಈ ಹಿಂದೆ ಸಚಿವ ಕೆ.ಎಸ್.ಈಶ್ವರಪ್ಪ ಅವರು ಗ್ರಾಮೀಣಾಭಿವೃದ್ಧಿ ಇಲಾಖೆ ಹಣ ಬಿಡುಗಡೆಗೆ ಸಂಬಂಧಿಸಿದಂತೆ 65 ಮಂದಿ ಶಾಸಕರ ಸಹಿ ಸಂಗ್ರಹಿಸಲಾಗಿತ್ತು. ಇದೀಗ ಅದೇ ಪತ್ರವನ್ನು ಬೇರೆ ಉದ್ದೇಶಗಳಿಗಾಗಿ ಬಳಕೆ ಮಾಡಿಕೊಂಡಿರಬಹುದು' ಎಂದು ಹುಬ್ಬಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ್ ತಿರುಗೇಟು ನೀಡಿದ್ದಾರೆ.

ಧಾರವಾಡದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅರವಿಂದ್ ಬೆಲ್ಲದ್, `ಮುಖ್ಯಮಂತ್ರಿ ಪರವಾಗಿ ಅಥವಾ ವಿರೋಧವಾಗಿ ಇದೀಗ ಯಾವುದೇ ರೀತಿಯಲ್ಲಿಯೂ ಸಹಿ ಸಂಗ್ರಹ ಮಾಡಿಲ್ಲ. ನಾನು ಯಾವುದೇ ಸಹಿಯನ್ನು ಮಾಡಿಲ್ಲ. ಈ ಎಲ್ಲ ಗೊಂದಲಗಳಿಗೆ ಸ್ಪಷ್ಟತೆ ಸಿಗಬೇಕಾದರೆ ಶಾಸಕಾಂಗ ಸಭೆ ಕರೆಯಬೇಕು' ಎಂದು ಹೇಳಿಕೆ ನೀಡಿದ್ದಾರೆ.

ಈ ಮಧ್ಯೆ ನಗರದಲ್ಲಿ ಮಾತನಾಡಿದ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್, 'ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ನನ್ನದೂ ಅಳಿಲು ಸೇವೆ ಇದೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಲು ನನ್ನ ಕೊಡುಗೆಯೂ ಇದೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ಬೇಡವೆಂದ ನಾವೆಲ್ಲರೂ ಯಡಿಯೂರಪ್ಪನವರಿಗೆ ಬೆಂಬಲ ನೀಡಿದ್ದೇವೆ' ಎಂದು ಹೇಳಿದ್ದಾರೆ.

'ನಾನು ಯಾವತ್ತೂ ಪಕ್ಷದ ವಿರುದ್ಧ ಮಾತನಾಡಿಲ್ಲ. ಯಡಿಯೂರಪ್ಪನವರು ಇನ್ನೂ ಎರಡು ವರ್ಷ ಮುಖ್ಯಮಂತ್ರಿ ಆಗಿ ಮುಂದುವರಿಯಬೇಕು ಎಂದೇ ನಾನು ಬಯಸುತ್ತೇನೆ. ಪಕ್ಷದ ಭವಿಷ್ಯದ ಬಗ್ಗೆಯೂ ಯೋಚಿಸುತ್ತೇನೆ. ಆದರೆ, ನಾನೇನೇ ಹೇಳಿದರೂ ಮಾಧ್ಯಮಗಳು ತಮಗೆ ಬೇಕಾದಂತೆ ಸುದ್ದಿ ಮಾಡುತ್ತಿದ್ದಾರೆ. ಹೀಗಾಗಿ ನಾನು ಹೆಚ್ಚು ಮಾತನಾಡುವುದಿಲ್ಲ' ಎಂದು ಯೋಗೇಶ್ವರ್ ಪ್ರತಿಕ್ರಿಯೆ ನೀಡಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಡಿಕೆಶಿ ಅವರು ಜೈಲಿಗೆ ಹೋಗಿ ಬಂದು ಸ್ಥಿಮಿತ ಕಳೆದುಕೊಂಡಿದ್ದಾರೆ. ಅವರಿಗೆ ನಮ್ಮ ಪಕ್ಷದ ಬಗ್ಗೆ ಪ್ರೀತಿ ಇದ್ದರೆ ಪಕ್ಷದ ಸದಸ್ವತ್ವ ಸ್ವೀಕರಿಸಲಿ. ಇಲ್ಲವಾದರೆ ವಿಪಕ್ಷ ನಾಯಕರಾಗಿ ಕೆಲಸ ಮಾಡಲಿ. ಅದು ಬಿಟ್ಟು ಬಿಜೆಪಿ ಕುರಿತು ಅನಗತ್ಯ ಹೇಳಿಕೆ ನೀಡುವುದು ಸರಿಯಲ್ಲ' ಎಂದು ಯೋಗೇಶ್ವರ್ ಆಕ್ಷೇಪಿಸಿದರು.

ನಮ್ಮದು ಶಿಸ್ತಿನ ಪಕ್ಷ. ಇಲ್ಲಿ ಸಹಿ ಸಂಗ್ರಹಕ್ಕೆ ಅವಕಾಶ ಇಲ್ಲ. ಹಾಗೆ ಮಾಡಿದವರ ಮೇಲೆ ಹೈಕಮಾಂಡ್ ಶಿಸ್ತು ಕ್ರಮ ಕೈಗೊಳ್ಳುತ್ತದೆ. ಏನೇ ಇದ್ದರೂ ಶಾಸಕಾಂಗ ಸಭೆಯಲ್ಲೇ ಎಲ್ಲವೂ ಚರ್ಚೆ ಆಗುತ್ತದೆ

-ಅರವಿಂದ ಬೆಲ್ಲದ್, ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ

ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ರಾಷ್ಟ್ರೀಯ ನಾಯಕರ ಜೊತೆಯೂ ಈ ಬಗ್ಗೆ ಚರ್ಚೆಯಾಗಿಲ್ಲ. `ವರಿಷ್ಠರು ಸೂಚಿಸಿದರೆ ರಾಜೀನಾಮೆ ನೀಡುತ್ತೇನೆ' ಎಂಬ ಹೇಳಿಕೆಯನ್ನು ಯಾವ ಆಧಾರದಲ್ಲಿ ಸಿಎಂ ಹೇಳಿದ್ದಾರೆಂಬುದು ಗೊತ್ತಿಲ್ಲ. ಬಿಜೆಪಿಯಲ್ಲಿ ಸಂಸದೀಯ ಮಂಡಳಿಯೇ `ಸುಪ್ರೀಂ'. ಅದರ ತೀರ್ಮಾನಕ್ಕೆ ನಾವೆಲ್ಲಾ ಬದ್ಧ'

-ಸಿ.ಟಿ.ರವಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News