ಸಿಎಂ ಬದಲಾವಣೆ ಕುರಿತು ಹೇಳಿಕೆ ನೀಡಿದರೆ ಶಿಸ್ತು ಕ್ರಮ: ಸಚಿವ ಆರ್.ಅಶೋಕ್ ಎಚ್ಚರಿಕೆ

Update: 2021-06-07 15:50 GMT

ಬೆಂಗಳೂರು, ಜೂ. 7: `ನಿಸ್ಸಂಶಯವಾಗಿ ಬಿ.ಎಸ್.ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ. ಅವರ ಬದಲಾವಣೆ ಕೇವಲ ಊಹಾಪೋಹ. ಈ ವಿಚಾರ ಮುಗಿದು ಹೋಗಿದ್ದು, ಪಕ್ಷದ ನಾಯಕರು ಸಿಎಂ ಬದಲಾವಣೆ ಕುರಿತಂತೆ ಹೇಳಿಕೆಗಳನ್ನ ನೀಡಿದರೆ ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು' ಎಂದು ಕಂದಾಯ ಸಚಿವ ಆರ್.ಅಶೋಕ ಎಚ್ಚರಿಸಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಅವರ ನೇತೃತ್ವದಲ್ಲಿ ಒಂದು ಸಮಿತಿಯನ್ನ ರಚಿಸಿದ್ದು, ಮುಖ್ಯಮಂತ್ರಿ, ಪ್ರಧಾನ ಕಾರ್ಯದರ್ಶಿ ಹಾಗೂ ಮೂವರು ಹಿರಿಯ ಸಚಿವರು ಇದರಲ್ಲಿ ಇರಲಿದ್ದಾರೆ. ಈ ಸಮಿತಿಯ ಉದ್ದೇಶವೇ ಊಹಾಪೋಹದ ಸುದ್ದಿಗಳಿಗೆ ಕಡಿವಾಣ ಹಾಕುವುದಾಗಿದೆ. ಅದು ಪರವಾದರೂ ಆಗಿರಬಹುದು ಅಥವಾ ವಿರುದ್ಧವಾದರು ಇರಬಹುದು. ಈ ಶಿಸ್ತನ್ನು ಉಲ್ಲಂಘಿಸಿದ್ದೇ ಆದಲ್ಲಿ ಅಂತಹವರ ವಿರುದ್ಧ ಪಕ್ಷ ಗಂಭೀರ ಕ್ರಮ ಜರುಗಿಸಲಿದೆ' ಎಂದು ಹೇಳಿದರು.

ನಾನು ಈಗಾಗಲೇ ಸಿಎಂ ಬದಲಾವಣೆ ವಿಚಾರಕ್ಕೆ ಫುಲ್ ಸ್ಟಾಪ್ ಹಾಕಲಾಗಿದೆ ಎಂದು ರವಿವಾರವೇ ಸ್ಪಷ್ಟಪಡಿಸಿದ್ದೇನೆ. ಯಡಿಯೂರಪ್ಪನವರೇ ನಮ್ಮ ನಾಯಕರಾಗಿದ್ದು, ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ' ಎಂದು ಸಚಿವ ಅಶೋಕ್ ಸ್ಪಷ್ಟಪಡಿಸಿದರು.

ಈ ವೇಳೆ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸಚ್ಚಿದಾನಂದಮೂರ್ತಿ ಹಾಗೂ ಸದಸ್ಯರು ಕಾವೇರಿಯಲ್ಲಿ ಅಸ್ಥಿ ವಿಸರ್ಜನೆಯ ಕಾರ್ಯ ಕೈಗೊಂಡ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News