×
Ad

ಆನ್‍ಲೈನ್ ತರಗತಿ, ಮಕ್ಕಳ ದಾಖಲಾತಿಗೆ ಶುಲ್ಕ ಪಾವತಿಸುವಂತೆ ಪೋಷಕರ ಮೇಲೆ ಒತ್ತಡ; ಆರೋಪ

Update: 2021-06-07 21:50 IST

ಚಿಕ್ಕಮಗಳೂರು, ಜೂ.7: ಕೋವಿಡ್ ಸೋಂಕನ್ನು ನಿಯಂತ್ರಿಸಲು ರಾಜ್ಯ ಸರಕಾರ ಕಠಿಣ ಲಾಕ್‍ಡೌನ್ ನಿಯಮಗಳನ್ನು ಜಾರಿ ಮಾಡಿದೆ. ಸೋಂಕು ಸಾರ್ವಜನಿಕರಿಗೆ ಹರಡುವುದನ್ನು ತಡೆಯಲು ಎಲ್ಲಾ ವ್ಯಾಪಾರ, ವಹಿವಾಟುಗಳಂತಹ ಆರ್ಥಿಕ ಚಟುವಟಿಕೆಗಳನ್ನು ನಿರ್ಬಂಧಿಸಿದೆ. ಪರಿಣಾಮ ಜನರು ಕೆಲಸವಿಲ್ಲದೇ ಮನೆಗಳಲ್ಲೇ ಬಂಧಿಯಾಗಿದ್ದು, ಹಣವಿಲ್ಲದೇ ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಕೋವಿಡ್ ಸೋಂಕಿನಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ರಕ್ಷಿಸುವ ಉದ್ದೇಶದಿಂದ ಸರಕಾರ ಶೈಕ್ಷಣಿಕ ಚಟುವಟಿಕೆ ನಿರ್ಬಂಧಿಸಿ ಆನ್‍ಲೈನ್ ಪಾಠಕ್ಕೆ ಅವಕಾಶ ನೀಡಿದ್ದು, ಲಾಕ್‍ಡೌನ್ ಸಂಕಷ್ಟದ ಸಂದರ್ಭದಲ್ಲಿ ಕೆಲವು ಖಾಸಗಿ ಶಾಲೆಗಳು ಆನ್‍ಲೈನ್ ತರಗತಿಗಳನ್ನು ಜೂನ್ ತಿಂಗಳಿಂದ ಆರಂಭಿಸುತ್ತಿದ್ದು, ಶುಲ್ಕ ಪಾವತಿಸಿ ಮಕ್ಕಳನ್ನು ಶಾಲೆಗೆ ದಾಖಲಿಸುವಂತೆ ಪೋಷಕರಿಗೆ ವ್ಯಾಟ್ಸ್ ಆ್ಯಪ್ ಮೂಲಕ ಮೆಸೇಜ್‍ಗಳನ್ನು ಕಳುಹಿಸುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಕೋವಿಡ್ ಸೋಂಕಿನಿಂದ ಕಳೆದ 2 ವರ್ಷಗಳಿಂದ ಶೈಕ್ಷಣಿಕ ಚಟುವಟಿಕೆ ಹಳಿ ತಪ್ಪಿದೆ. ವಿದ್ಯಾರ್ಥಿಗಳ ಭವಿಷ್ಯವನ್ನು ಕತ್ತಲಿಗೆ ದೂಡಿದೆ. ದುಡಿಮೆ ಇಲ್ಲದೇ ವಿದ್ಯಾರ್ಥಿಗಳ ಪೋಷಕರು ಮನೆಯಲ್ಲೇ ದಿನ ದೂಡುವಂತಾಗಿದ್ದು, ಮಕ್ಕಳ ಶೈಕ್ಷಣಿಕ ಜೀವನದ ಬಗ್ಗೆ ಚಿಂತಿತರಾಗಿದ್ದಾರೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಜೂನ್ ತಿಂಗಳಿಂದ ವಿದ್ಯಾರ್ಥಿಗಳನ್ನು ದಾಖಲಿಸಿಕೊಂಡು ಆನ್‍ಲೈನ್ ತರಗತಿಗಳನ್ನು ನಡೆಸಲಾಗುವುದು, ಶಾಲಾ ಶುಲ್ಕವನ್ನು ಪಾವತಿಸಿ ಮಕ್ಕಳನ್ನು ದಾಖಲಿಸಿ ಎಂದು ಖಾಸಗಿ ಶಾಲೆಗಳು ಪೋಷಕರಿಗೆ ಮೆಸೇಜ್‍ಗಳನ್ನು ಕಳಿಸುತ್ತಿದ್ದು, ಆರ್ಥಿಕ ಸಂಕಷ್ಟದ ಪರಿಸ್ಥಿತಿಯಲ್ಲಿ ಶುಲ್ಕ ಪಾವತಿಸುವಂತೆ ಒತ್ತಡ ಹಾಕುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪೋಷಕರು ಪ್ರಶ್ನಿಸುತ್ತಿದ್ದಾರೆ.

2ನೇ ತರಗತಿ ವಿದ್ಯಾರ್ಥಿಗಳ 2021-22ನೇ ಸಾಲಿನ ಶೈಕ್ಷಣಿಕ ಚಟುವಟಿಕೆ ಹಿನ್ನೆಲೆಯಲ್ಲಿ ಲೈವ್‍ ಒನ್ ಲೈವ್ ತರಗತಿಗಳನ್ನು ಆರಂಭಿಸಲಾಗುತ್ತಿದೆ. 2021-22ನೇ ಸಾಲಿನ ಶಾಲಾ ದಾಖಲಾತಿಯನ್ನು ಆರಂಭಿಸಲಾಗಿದ್ದು, ಜೂ.15ರೊಳಗೆ ದಾಖಲಾಗುವಂತೆ ವ್ಯಾಟ್ಸ್ ಆ್ಯಪ್ ಮೆಸೇಜ್‍ನಲ್ಲಿ ಖಾಸಗಿ ಶಾಲೆಗಳು ತಿಳಿಸಿವೆ. ಅದೇ ಶಾಲೆಯಲ್ಲಿ ಮುಂದುವರಿಯುತ್ತಿರುವ ವಿದ್ಯಾರ್ಥಿಗಳು 20 ಸಾವಿರ ರೂ. ಶುಲ್ಕ ಪಾವತಿ ಮಾಡುವಂತೆ ಸಂದೇಶ ಕಳುಹಿಸುತ್ತಿರುವ ಶಾಲಾ ಆಡಳಿತ ಮಂಡಳಿ, ಬ್ಯಾಂಕ್‍ನಲ್ಲಿ ಹಣ ಪಾವತಿ ಮಾಡಿ ಬ್ಯಾಂಕಿನ ಚಲನ್‍ಅನ್ನು ಶಾಲಾ ಮಂಡಳಿ ನೀಡಿರುವ ಶಾಲಾ ಶಿಕ್ಷಕರ ವ್ಯಾಟ್ಸ್ ಆ್ಯಪ್ ಗೆ ಕಳಿಸಬೇಕು, 2021-22ನೇ ಸಾಲಿನ ಶುಲ್ಕದಲ್ಲಿ ಮೊದಲ ಕಂತನ್ನು ಜೂ.15ರೊಳಗೆ ಪಾವತಿಸುವಂತೆ ಮಕ್ಕಳ ಪೋಷಕರಿಗೆ ಮೆಸೇಜ್‍ಗಳನ್ನು ಕಳಿಸಲಾಗಿದೆ ಎಂದು ಮಕ್ಕಳ ಪೋಷಕರು ದೂರಿದ್ದಾರೆ.

ಕೋವಿಡ್ ಹಿನ್ನೆಲೆಯಲ್ಲಿ ಸರಕಾರ ಶಾಲೆಗಳನ್ನು ಆರಂಭಿಸುವಂತೆ ಯಾವುದೇ ಆದೇಶವನ್ನು ನೀಡಿಲ್ಲ. ಆದರೂ ಖಾಸಗಿ ಶಾಲೆಗಳು ಆನ್‍ಲೈನ್ ತರಗತಿಗಳನ್ನು ಜೂನ್ ತಿಂಗಳಿಂದ ಆರಂಭಿಸುವುದಾಗಿ ಮತ್ತು ದಾಖಲಾತಿ ಮಾಡಿಕೊಳ್ಳುವುದಾಗಿ ಮಕ್ಕಳ ಪೋಷಕರಿಗೆ ಮೆಸೆಜ್ ಕಳುಹಿಸುತ್ತಿದ್ದಾರೆ. ಅಲ್ಲದೇ ಮೊದಲ ಕಂತಿನ ಶುಲ್ಕವನ್ನು ಕೂಡಲೇ ಪಾವತಿಸುವಂತೆ ಸಂದೇಶಗಳನ್ನು ಕಳಸುತ್ತಿದ್ದಾರೆ. ಸರಕಾರದ ಆದೇಶ ಇನ್ನೂ ಬಾರದ ಹಿನ್ನೆಲೆಯಲ್ಲಿ ಖಾಸಗಿ ಶಾಲಾ ಆಡಳಿತ ಮಂಡಳಿಗಳು ಹೀಗೆ ಪೋಷಕರ ಮೇಲೆ ಶುಲ್ಕ ಪಾವತಿಸುವಂತೆ ಒತ್ತಡ ಹೇರುವುದು ಎಷ್ಟು ಸರಿ? ಎಂದು ಸಾರ್ವಜನಿಕರು ಮತ್ತು ಪೋಷಕರು ಪ್ರಶ್ನಿಸಿದ್ದಾರೆ.

ಸರಕಾರಿ ಅಥವಾ ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳುವಂತೆ ಸರಕಾರದಿಂದ ಯಾವುದೇ ಆದೇಶ ಬಂದಿಲ್ಲ. ಕೆಲವು ಖಾಸಗಿ ಶಾಲೆಗಳು ಜೂನ್ ತಿಂಗಳಿಂದ ಆನ್‍ಲೈನ್ ತರಗತಿ ಪ್ರಾರಂಭಿಸುತ್ತೇವೆ, ಮಕ್ಕಳನ್ನು ದಾಖಲಿಸಿ ಮೊದಲ ಹಂತದ ಶುಲ್ಕವನ್ನು ಪಾವತಿಸುವಂತೆ ಪೋಷಕರ ವ್ಯಾಟ್ಸ್ ಆ್ಯಪ್ ಮೆಸೇಜ್ ಕಳಿಸುತ್ತಿರುವುದು ನನ್ನ ಗಮನಕ್ಕೆ ಬಂದಿಲ್ಲ. ಇಂತಹ ಮೆಸೇಜ್‍ಗಳನ್ನು ಖಾಸಗಿ ಶಾಲೆಗಳು ಕಳುಹಿಸುತ್ತಿರುವ ಸಾರ್ವಜನಿಕರು ದೂರು ನೀಡಿದಲ್ಲಿ ಅಂತಹ ಶಾಲೆಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು.
- ಮಲ್ಲೇಶಪ್ಪ, ಡಿಡಿಪಿಐ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News