×
Ad

ಮಗಳು ತವರು ಮನೆ ಬಿಟ್ಟು ಹೋಗುವ ಅನುಭವ ಆಗುತ್ತಿದೆ: ನಿರ್ಗಮಿತ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ

Update: 2021-06-07 21:55 IST

ಮೈಸೂರು,ಜೂ.7: ಮಗಳು ತವರು ಮನೆ ಬಿಟ್ಟು ಹೋಗುವ ಅನುಭವ ನನಗೆ ಆಗುತ್ತಿದೆ. ಮೈಸೂರಿನ ಮಗಳಾಗಿ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ ಎಂದು ನಿರ್ಗಮಿತ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದರು.

ನಗರದ ಸರ್ಕಾರಿ ಅತಿಥಿಗೃಹದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವರ್ಗಾವಣೆ ನಿರೀಕ್ಷೆ ಮಾಡಿರಲಿಲ್ಲ. ಒಳ್ಳೆಯ ಕೆಲಸ ಮಾಡುವ ಸಮಯದಲ್ಲಿ ವರ್ಗಾವಣೆ ಆಗಿದೆ. ಮೈಸೂರಿಗೆ ವರ್ಗವಾಗಿ ಬಂದಾಗ ತಾಯಿ ಮನೆಯ ಅನುಭವ ಆಗಿತ್ತು. ಈಗ ಒಬ್ಬ ಮಗಳು ತಾಯಿ ಮನೆ ಬಿಟ್ಟು ಹೋಗುವ ಅನುಭವವಾಗುತ್ತಿದೆ ಎಂದು ಹೇಳಿದರು.

ಮೈಸೂರಿಗೆ ಬಂದು ಪ್ರಮಾಣಿಕವಾಗಿ ಕೆಲಸ ಮಾಡಿದ್ದೇನೆ. ಇಂದು ಹೊಸ ಜಿಲ್ಲಾಧಿಕಾರಿಗೆ ಶುಭಾಶಯ ಹೇಳಲು ಬಂದಿದ್ದೇನೆ. ಮೈಸೂರಿನ ಎಲ್ಲಾ ವಿಷಯಗಳನ್ನು ವಸ್ತುನಿಷ್ಠವಾಗಿ ಹೇಳಿದ್ದೇನೆ ಎಂದ ರೋಹಿಣಿ ಸಿಂಧೂರಿ, ಮೈಸೂರಿನಲ್ಲಿ ಏನು ನಡೆದಿದೆ ಎಂದು ಎಲ್ಲರಿಗೂ ಗೊತ್ತಿದೆ. ಅದರ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ಕೆಲವರು ಹತಾಶ ಮತ್ತು ಅಭದ್ರತೆಯಿಂದ ಮಾನಾಡಿದ್ದಾರೆ ಇದು ಸರಿಯಲ್ಲ ಎಂದು ಶಿಲ್ಪಾನಾಗ್ ವಿರುದ್ಧ ಗರಂ ಆದ ಅವರು, ಯಾವುದೋ ಅಧಿಕಾರಿಯನ್ನು ತೆಗೆಸಿ ಮಿಷನ್ ಮುಗಿಯಿತು ಎಂದು ಹೇಳುವುದು ತಪ್ಪು. ಈ ರೀತಿ ಯಾವ ಸಂಸ್ಥೆಯಲ್ಲಿ ಆದರೂ, ವ್ಯವಸ್ಥೆ ಸರಿಪಡಿಸಲು ಸಾಧ್ಯವಿಲ್ಲ ಎಂದರು.

ಭೂ ಮಾಫಿಯಾ ಕುರಿತು ಮಾಧ್ಯಮಗಳ ಪ್ರಶ್ನೆಗೆ ನೋ ಕಮೆಂಟ್ ಎಂದು ಹೇಳಿದ ಅವರು ಮೈಸೂರಿನ ಎಲ್ಲಾ ಜನತೆಗೆ “ಮೈಸೂರು ಥ್ಯಾಂಕ್ಸ್” ಎಂದು ಹೇಳಿ ಹೊರಟರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News