ಎಷ್ಟೇ ಕಷ್ಟವಾದರೂ ಜನರಿಗೆ ಉಚಿತ ಲಸಿಕೆ ನೀಡಲು ನಾವು ಬದ್ಧ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ಬೆಂಗಳೂರು, ಜೂ. 7: `ಎಷ್ಟೇ ಕಷ್ಟ ಎದುರಾದರೂ ರಾಜ್ಯದ ಜನರಿಗೆ ಉಚಿತ ಕೋವಿಡ್ ಲಸಿಕೆ ನೀಡಲು ಕಾಂಗ್ರೆಸ್ ಪಕ್ಷ ಮತ್ತು ಅದರ ಘಟಕಗಳು ಶ್ರಮಿಸಲಿವೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸೋಮವಾರ ಕಿಸಾನ್ ಕಾಂಗ್ರೆಸ್, ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್, ಇಂಡಿಯನ್ ಯೂತ್ ಕಾಂಗ್ರೆಸ್, ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಮತ್ತು ನ್ಯಾಷನಲ್ ಸ್ಟೂಡೆಂಟ್ ಯೂನಿಯನ್ ಆಫ್ ಇಂಡಿಯಾದ ಪ್ರಮುಖ ನಾಯಕರೊಂದಿಗೆ ಸರಣಿ ಸಭೆಗಳನ್ನು ನಡೆಸಿದ ಶಿವಕುಮಾರ್, `ಪಕ್ಷದ ವಿವಿಧ ಘಟಕಗಳಾದ ಕಿಸಾನ್ ಕಾಂಗ್ರೆಸ್, ಐಎನ್‍ಟಿಯುಸಿ, ಯೂತ್ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಮತ್ತು ವಿಧ್ಯಾರ್ಥಿ ಘಟಕ ಎನ್‍ಎಸ್‍ಯುಐ ಸೇರಿದಂತೆ ವಿವಿಧ ಘಟಕಗಳನ್ನು ಪಕ್ಷದ ಉಚಿತ ಲಸಿಕೆ ಅಭಿಯಾನದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುವಂತೆ ಸಜ್ಜುಗೊಳಿಸಲಾಗಿದೆ ಎಂದರು.
ನಾನು ಪಕ್ಷದ ವಿವಿಧ ಘಟಕಗಳ ಮುಂಚೂಣಿ ನಾಯಕರೊಂದಿಗೆ ಚರ್ಚೆ ನಡೆಸಿದ್ದೇನೆ. ಈ ವಿನಾಶಕಾರಿ ಸಂದರ್ಭದಲ್ಲಿ ಜನರಿಗೆ ಸಹಾಯ ಮಾಡಲು ನಮ್ಮ ಕಾರ್ಯಕರ್ತರನ್ನು ಸಜ್ಜುಗೊಳಿಸುವಂತೆ ಅವರಿಗೆ ತಿಳಿಸಿದ್ದೇನೆ. ಬಿಜೆಪಿ ಸರಕಾರವು ತಮ್ಮನ್ನು ತಾವು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ರಾಜ್ಯದ ಬಡ ಜನರ ಬಗ್ಗೆ ತೀವ್ರ ನಿರ್ಲಕ್ಷ್ಯ ತೋರುತ್ತಾ ಅವರಿಗೆ ಸ್ಪಂದಿಸುವುದನ್ನೇ ಮರೆತಿದೆ ಎಂದರು.
ಕರ್ನಾಟಕ ಕಾಂಗ್ರೆಸ್ ಈಗಾಗಲೇ ರಾಜ್ಯಾದ್ಯಂತ 172ಕ್ಕೂ ಹೆಚ್ಚು ಆ್ಯಂಬುಲೆನ್ಸ್ ಗಳನ್ನೂ ಕೋವಿಡ್ ಕೇರ್ಸ್ ಅಭಿಯಾನದಡಿಯಲ್ಲಿ ಸೇವೆ ಸಲ್ಲಿಸಲಾಗುತ್ತಿದೆ. ಅಲ್ಲದೆ, ಈಗಾಗಲೇ 3 ಲಕ್ಷ ಜನರಿಗೆ ಲಸಿಕೆ ಹಾಕುವ ಯೋಜನೆಗೆ ಚಾಲನೆ ನೀಡಿದ್ದೇವೆ. ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರು ಜನರಿಗೆ ಲಸಿಕೆ ನೀಡಲು ತಮ್ಮ ಸ್ವಂತ ಹಣ ಖರ್ಚು ಮಾಡಿ ಲಸಿಕೆಗಳನ್ನು ಸಂಗ್ರಹಿಸುತ್ತಿದ್ದಾರೆ. ಅಲ್ಲದೆ, ಸಮಾಜದ ಎಲ್ಲ ವರ್ಗಗಳನ್ನು ತಲುಪಲು ಹಳ್ಳಿಗಳಲ್ಲಿ ಮತ್ತು ತಾಲೂಕುಗಳಲ್ಲಿ ಉಚಿತ ಶಿಬಿರಗಳನ್ನು ಆಯೋಜಿಸುತ್ತಿದ್ದೇವೆ ಎಂದು ತಿಳಿಸಿದರು.
`ಬಿಜೆಪಿ ಸಂಸದರು ಮತ್ತು ಶಾಸಕರು ಪ್ರತಿ ಲಸಿಕೆಗೆ 700 ರೂ. ಪಡೆಯುವ ಮೂಲಕ ಜನರನ್ನು ಲೂಟಿ ಮಾಡುತ್ತಿದ್ದಾರೆ. ಆದರೆ, ನಮ್ಮ ಕಾಂಗ್ರೆಸ್ ಪಕ್ಷವು ಜನರ ಬಗ್ಗೆ ನೈಜ ಕಾಳಜಿ ವಹಿಸಿದೆ. ಹಾಗಾಗಿ ಕಾಂಗ್ರೆಸ್ ಪಕ್ಷವು 100 ಕೋಟಿ ರೂ. ಕಾರ್ಯಕ್ರಮ ಮೂಲಕ ಲಸಿಕೆಗಳನ್ನು ಖರೀದಿಸಲು ಮುಂದಾಗಿದ್ದು ಪಕ್ಷದ ವತಿಯಿಂದ 10ಕೋಟಿ ರೂ. ಮತ್ತು ಶಾಸಕರ ಮತ್ತು ಸಂಸದರ ನಿಧಿಯಿಂದ 90 ಕೋಟಿ ರೂ.ನೀಡಲು ತಯಾರಿದೆ. ಆದರೆ, ಸರಕಾರ ಇದಕ್ಕೆ ಅನುಮತಿ ನೀಡುತ್ತಿಲ್ಲ' ಎಂದು ಶಿವಕುಮಾರ್ ಹೇಳಿದರು.
ಇದೇ ವೇಳೆ `ಸಂಜೀವನಿ' ಯೋಜನೆ ಅಡಿಯಲ್ಲಿ ಆಮ್ಲಜನಕ ಸೌಲಭ್ಯವುಳ್ಳ ಮೂರು ಆಂಬುಲೆನ್ಸ್ ಗಳನ್ನು ಸಾರ್ವಜನಿಕ ಸೇವೆಗೆ ಅರ್ಪಿಸಿದರು. ಜತೆಗೆ ಸುಮಾರು ಐದು ನೂರಕ್ಕೂ ಹೆಚ್ಚು ಕೋವಿಡ್ ಪೀಡಿತ ಕುಟುಂಬಗಳಿಗೆ ಉಚಿತ ಪಡಿತರ ಕಿಟ್‍ಗಳನ್ನು ಶಿವಕುಮಾರ್ ಅವರು ವಿತರಿಸಿದರು.