ಹಾಸನ: ಸೋಂಕಿತರಿಗೆ ಅಭಯ ನೀಡುವ ‘ಹ್ಯೂಮಾನಿಟಿ ಸರ್ವಿಸ್ ಕೋವಿಡ್ ಕೇರ್’

Update: 2021-06-07 18:00 GMT

ಹಾಸನ, ಜೂ.7: ಮಾರಕ ಕೊರೋನವನ್ನು ಶ್ರದ್ದೆ, ನಿಷ್ಠೆ, ಪ್ರೀತಿಯಿಂದ ಹೋಗಲಾಡಿಸುವ ಕಾರ್ಯವನ್ನು ಹಾಸನದ ಹ್ಯೂಮ್ಯಾನಿಟಿ ಸರ್ವಿಸ್ ಕೋವಿಡ್ ಕೇರ್ ಸೆಂಟರ್ ಮಾಡುತ್ತಿದೆ. ನಗರದ ಹಳೆಯ ಈದ್ಗಾ ಮೈದಾನದಲ್ಲಿರುವ ಶರೀಫ್ ಚಾರಿಟೆಬಲ್ ಟ್ರಸ್ಟ್ ಕಟ್ಟಡದಲ್ಲಿ ವಿವಿಧ ಸಂಘಟನೆಗಳ ಸಹಕಾರದಲ್ಲಿ ಹಾಸನ ಹ್ಯೂಮಾನಿಟಿ ಸರ್ವಿಸ್ ಹೆಸರಿನಲ್ಲಿ ಕೋವಿಡ್ ಕೇರ್ ಸೆಂಟರ್ ನಡೆಯುತ್ತಿದೆ.

ಹಾಸನ ಕೋವಿಡ್ ರೆಡ್‌ ಝೋನ್ ಪ್ರದೇಶವಾಗಿದೆ. ಸೋಂಕಿತರ ಮತ್ತು ಸಾವಿನ ಸಂಖ್ಯೆ ಜಿಲ್ಲೆಯ ಜನರಲ್ಲಿ ಭಯ ಹುಟ್ಟಿಸಿತ್ತು. ಈ ಸಂಕಷ್ಟದ ಸಂದರ್ಭದಲ್ಲಿ ಕೊರೋನ ರೋಗಿಗಳ ಆರೈಕೆಗಾಗಿ ಈದುಲ್‌ ಫಿತ್ರ್ ದಿನ ಸಾರ್ವಜನಿಕ ಸೇವೆಗೆ ಸಂಪೂರ್ಣ ಉಚಿತ ಎಂಬ ಸ್ಲೋಗನ್‌ನೊಂದಿಗೆ ಸೇವೆಗಿಳಿದ ಹ್ಯೂಮ್ಯಾನಿಟಿ ಸರ್ವಿಸ್ ಜನಮೆಚ್ಚುಗೆಗೆ ಹಾಗೂ ಜಿಲ್ಲೆಯ ಜನರ ಹೆಗ್ಗಳಿಕೆಗೆ ಪಾತ್ರವಾಗಿದೆ.

ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆಯ ಅಂಗ ಸಂಸ್ಥೆಗಳಾದ ಎಸ್‌ಐಒ ಸೇರಿದಂತೆ ನಗರದ ಅನೇಕ ಸಂಘಟನೆಗಳ ಪ್ರಮುಖರು ಸ್ವಯಂಸೇವಕರಾಗಿ ಇಲ್ಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಹ್ಯೂಮನಿಟಿ ಸರ್ವಿಸ್ ನಲ್ಲಿ ಔಷಧಿ ಹಾಗೂ ಸ್ಕಾನಿಂಗ್ ಹೊರತುಪಡಿಸಿ ಎಲ್ಲವೂ ಉಚಿತವಾಗಿದೆ. ಅತ್ಯುತ್ತಮ ವೈದ್ಯಕೀಯ ಸೇವೆ ಸೇರಿದಂತೆ ಎಲ್ಲವೂ ಉಚಿತವಾಗಿದೆ.

ಕೋವಿಡ್ ಕೇರ್ ಸೆಂಟರ್ ಪ್ರಮುಖರಾಗಿರುವ ಜಮಾಅತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಸದರುಲ್ಲಾ ಖಾನ್ ಪತ್ರಿಕೆಯೊಂದಿಗೆ ಮಾತನಾಡಿ, ಎಪ್ರಿಲ್ ತಿಂಗಳಲ್ಲಿ ಕೊರೋನ ಆರ್ಭಟ ಹೆಚ್ಚಾಗಿತ್ತು. ರೋಗಿಗಳು ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಬೆಡ್‌ಗಾಗಿ ಪರದಾಡುತ್ತಿದ್ದರು. ಈ ಸುದ್ದಿಯನ್ನು ತಿಳಿದ ನಮಗೆ ಬಹಳ ನೋವಾಗುತ್ತಿತ್ತು. ಈ ಸಂದರ್ಭದಲ್ಲಿ ನಾವು ಡಾಕ್ಟರ್ ಶರೀಫ್ ಅವರೊಂದಿಗೆ ಚರ್ಚಿಸಿದ್ದು, ಅವರು ಸಹ ನಮ್ಮ ರೀತಿಯಲ್ಲಿ ಯೋಚಿಸುತ್ತಿದ್ದರು. ಒಂದು ಸೆಂಟರ್ ತೆರೆಯುವ ಇಂಗಿತವನ್ನು ನಮ್ಮೆಲ್ಲರ ಮನಸ್ಸು ಹೇಳುತ್ತಿತ್ತು. ನಂತರ ಮೊದಲಿಗೆ ಇಸ್ಲಾಮಿಕ್ ಸೆಂಟರ್‌ನಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯುವ ಯೋಜನೆ ರೂಪಿಸಲಾಯಿತು.

ನಂತರ ಈದ್ಗಾ ಸಮಿತಿಯ ಜೊತೆ ಹಾಗೂ ಶರೀಫ್ ಚಾರಿಟಬಲ್ ಸಂಸ್ಥೆಯ ಮುಖ್ಯಸ್ಥ ಬಿಲ್ಡರ್ ಝಿಯಾವುಲ್ಲಾ ಶರೀಫ್ ಅವರನ್ನು ಸಂಪರ್ಕಿಸಿ ವಕ್ಫ್ ಮಂಡಳಿಯ ಅನುಮತಿ ಪಡೆದು ಕಾರ್ಯರೂಪಕ್ಕೆ ತರಲು ಮುಂದಾದೆವು. ಅನುಮತಿಗಾಗಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿಸಲಾಯಿತು. ಟಿಎಚ್‌ಒ ಸ್ಥಳ ಪರಿಶೀಲನೆ ನಡೆಸಿ ಅನುಮತಿ ನೀಡಿದರು. ಹ್ಯೂಮ್ಯಾನಿಟಿ ಸರ್ವಿಸ್ ಕೋವಿಡ್ ಕೇರ್ ಕೇಂದ್ರಕ್ಕೆ ಬೆಂಗಳೂರಿನ ಶಮ ಚಾರಿಟೇಬಲ್ ಸಂಸ್ಥೆ 50 ಆಕ್ಸಿಜನ್ ಸಿಲಿಂಡರ್ ಸೇರಿದಂತೆ ಅಗತ್ಯವಿರುವ ಎಲ್ಲ ವಸ್ತುಗಳನ್ನು ನೀಡಿದ್ದಾರೆ ಎಂದು ಹೇಳಿದರು.

ಕೋವಿಡ್ ಕೇರ್ ಸೆಂಟರ್ ವಾರ್ಡನ್ ಆಗಿ ಕಾರ್ಯನಿರ್ವಹಿಸುತ್ತಿರುವ ಇರ್ಫಾನ್ ಶರೀಫ್, ಲಾಕ್‌ಡೌನ್ ಈ ಸಂದರ್ಭದಲ್ಲಿ ಆಹಾರದ ಸಮಸ್ಯೆ ಆಗಬಾರದು ಎಂದು ದೂರದ ಊರುಗಳಿಂದ ಬರುವ ರೋಗಿಗಳಿಗೆ, ಅವರ ಕುಟುಂಬಕ್ಕೆ, ಸಂಬಂಧಿಕರಿಗೆ, ಸ್ವಯಂಸೇವಕರಿಗೆ ಊಟದ ವ್ಯವಸ್ಥೆ ಇದೆ. ರೋಗಿಗಳಿಗೆ ತಪಾಸಣೆಗಾಗಿ ಕರೆದೊಯ್ಯಲು ಆ್ಯಂಬುಲೆನ್ಸ್ ವ್ಯವಸ್ಥೆ ಇದೆ. 24 ಗಂಟೆಗಳ ಕಾಲ ಮೂರು ಶಿಫ್ಟ್ ಗಳಲ್ಲಿ ಡಾಕ್ಟರ್, ನರ್ಸ್, ಸಿಬ್ಬಂದಿ ಹಾಗುವ ಸ್ವಯಂ ಸೇವಕರು ಕಾರ್ಯನಿರ್ವಹಿಸುತ್ತಾರೆ. ಇಲ್ಲಿ ಎಲ್ಲ ಸೌಲಭ್ಯವೂ ಇದೆ ಎಂದು ಮಾಹಿತಿ ನೀಡಿದ್ದಾರೆ.

ಶಮಾ ಟ್ರಸ್ಟ್ ನಿಂದ ನೆರವು

ಈ ಕೇಂದ್ರಕ್ಕೆ ಬೆಂಗಳೂರಿನ ಶಮಾ ಚಾರಿಟೇಬಲ್ ಟ್ರಸ್ಟ್ ಆರ್ಥಿಕವಾಗಿ ಸಹಾಯ ನೀಡುತ್ತದೆ. ವೈದ್ಯರಿಗೆ ಗೌರವಧನ ನೀಡುವ ಜವಾಬ್ದಾರಿಯನ್ನು ವಹಿಸಿದೆ. ಆಕ್ಸಿಜನ್ ಹೆಚ್ಚು ಖರ್ಚಾಗುತ್ತದೆ. ದಾನಿಗಳ ನೆರವಿನಿಂದ ಹ್ಯೂಮ್ಯಾನಿಟಿ ಸರ್ವಿಸ್ ಕೋವಿಡ್ ಕೇರ್ ಕೇಂದ್ರ ನಡೆಯುತ್ತಿದೆ.

ಇಲ್ಲಿಯ ಸೇವೆ ಅತ್ಯುತ್ತಮವಾಗಿದೆ. ನನ್ನ ತಾಯಿಗೂ ಕೊರೋನ ಸೊಂಕು ತಗುಲಿತ್ತು. ನಾನು ಅವರನ್ನು ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಿದ್ದೆ. ಅಲ್ಲಿಗೂ ಇಲ್ಲಿಗೂ ಹೋಲಿಕೆ ಮಾಡಿದರೆ ಇದು ಸಾವಿರ ಪಾಲು ಉತ್ತಮವಾಗಿದೆ. ನನ್ನ ಸಹೋದರಿಯನ್ನು ಕಳೆದ ಆರು ದಿನಗಳ ಹಿಂದೆ ಇಲ್ಲಿ ದಾಖಲು ಮಾಡಿದೆ. ಈ ಆಕೆಯ ಆರೋಗ್ಯ ಸುಧಾರಿಸಿದೆ.

-ಮಂಜುನಾಥ್, ಗುಣಮುಖರಾಗಿರುವ ರೋಗಿಯ ಸಹೋದರ

Writer - ಮಲ್ನಾಡ್ ಮೆಹಬೂಬ್

contributor

Editor - ಮಲ್ನಾಡ್ ಮೆಹಬೂಬ್

contributor

Similar News