ಜನತಂತ್ರಕ್ಕೆ ಅಪಚಾರ

Update: 2021-06-08 06:37 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಕಾರದ ನಡೆ, ನುಡಿಗಳ ಬಗ್ಗೆ ಲೋಪ ದೋಷಗಳ ಬಗ್ಗೆ ಟೀಕೆ, ವಿಮರ್ಶೆಗಳು ಸಹಜ. ಪ್ರಭುತ್ವದ ಸೂತ್ರ ಹಿಡಿದವರು ಇಂತಹ ವಿಮರ್ಶೆಗಳ ಬಗ್ಗೆ ಸಹಿಷ್ಣುಗಳಾಗಿರಬೇಕು. ತಪ್ಪುಗಳಾಗಿದ್ದರೆ ತಿದ್ದಿಕೊಳ್ಳಬೇಕು. ಭಾರತದ ಪ್ರಜಾಪ್ರಭುತ್ವ ಈ ದೃಷ್ಟಿಯಿಂದ ಇತರ ದೇಶಗಳಿಗೆ ಇತ್ತೀಚಿನವರೆಗೆ ಮಾದರಿಯಾಗಿತ್ತು. ತುರ್ತು ಪರಿಸ್ಥಿತಿ ಹೇರಿದ ಇಂದಿರಾಗಾಂಧಿಯವರಿಗೆ ಪಾಠ ಕಲಿಸಿದ ಪ್ರಬುದ್ಧ ಪ್ರಜೆಗಳು ಇಲ್ಲಿದ್ದಾರೆ. ಇಂದಿರಾಗಾಂಧಿ ಅವರು ಕೂಡ ತಪ್ಪನ್ನು ಒಪ್ಪಿಕೊಂಡು ಜನರ ತೀರ್ಪಿಗೆ ತಲೆ ಬಾಗಿದ್ದರು. ಆದರೆ ಕಳೆದ ಏಳು ವರ್ಷಗಳಿಂದ ಭಾರತದ ಪ್ರಜಾಪ್ರಭುತ್ವಕ್ಕೆ ಗ್ರಹಣ ಹಿಡಿದಿದೆ. ಸರಕಾರದ ನೀತಿ ಧೋರಣೆಗಳನ್ನು ವಿರೋಧಿಸುವ ಎಲ್ಲರ ಬಾಯಿ ಮುಚ್ಚಿಸುವ ಹುನ್ನಾರ ನಡೆದಿದೆ. ದೇಶದ ಜನರು ತನ್ನ ಆಜ್ಞಾಧಾರಕರಂತೆ ನಡೆದುಕೊಳ್ಳಬೇಕೆಂದು ಸರಕಾರ ಬಯಸುತ್ತಿದೆ.ಸರಕಾರದ ಕಣ್ಣು ಈಗ ಸಾಮಾಜಿಕ ಜಾಲತಾಣಗಳ ಮೇಲೆ ಬಿದ್ದಿದೆ. ವಿದ್ಯುನ್ಮಾನ ಮಾಧ್ಯಮಗಳನ್ನು ಭಟ್ಟಂಗಿಗಳನ್ನಾಗಿ ಮಾಡಿಕೊಂಡಿರುವ ಸರಕಾರ ತನಗೆ ಮಣಿಯದ ಜಾಲತಾಣಗಳಿಗೆ ಕಡಿವಾಣ ಹಾಕಲು ಹೊರಟಿದೆ. ಹೊಸ ಐಟಿ ನಿಯಮಗಳನ್ನು ತಕ್ಷಣವೇಪಾಲಿಸುವಂತೆ ‘ಟ್ವಿಟರ್’ ಸಂಸ್ಥೆಗೆ ಎಚ್ಚರಿಕೆ ನೀಡಿದೆ. ಸರಕಾರದ ತಪ್ಪು ಧೋರಣೆಗಳನ್ನು ವಿಮರ್ಶೆ ಮಾಡಬಾರದೆಂದು ಬಯಸುವುದು ನಿರಂಕುಶಾಧಿಪತ್ಯ ಎನಿಸಿಕೊಳ್ಳುತ್ತದೆ.

ದಿಢೀರನೆ ಮಾಡಿದ ನೋಟು ರದ್ದತಿಯ ದುಷ್ಪರಿಣಾಮ, ಪೌರತ್ವ ತಿದ್ದುಪಡಿ ಕಾಯ್ದೆಯ ಲೋಪದೋಷಗಳು, ರೈತರು ವಿರೋಧಿಸುತ್ತಿರುವ ಕೃಷಿ ಕಾಯ್ದೆಗಳು ಇವೆಲ್ಲ ಪ್ರಶ್ನೆಗಳಲ್ಲಿ ಸರಕಾರ ಯಾವುದೇ ಟೀಕೆ, ವಿಮರ್ಶೆಗಳನ್ನು ಸಹಿಸುತ್ತಿಲ್ಲ. ಕಾಂಗ್ರೆಸ್ ಟೂಲ್ ಕಿಟ್ ವಿಷಯದಲ್ಲಿ ಬಿಜೆಪಿ ವಕ್ತಾರ ಸಂಬೀತ್ ಪಾತ್ರ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಅವರು ಕಾಂಗ್ರೆಸ್ ಟೂಲ್ ಕಿಟ್ ಲಗತ್ತಿಸಿ ಮಾಡಿರುವ ಟೀಕೆಗೆ ‘ತಿರುಚಿದ ದಾಖಲೆ’ ಎಂಬ ಹಣೆಪಟ್ಟಿಯನ್ನು ಟ್ವಿಟರ್ ಅಂಟಿಸಿದೆ. ಇದೇನು ಹೊಸದಲ್ಲ. ತಳಬುಡವಿಲ್ಲದ ಅಕ್ಷೇಪಾರ್ಹವಾದ ಟ್ವೀಟ್‌ಗಳನ್ನು ಅಳಿಸಿ ಹಾಕಿದ, ಹಣೆಪಟ್ಟಿ ಅಂಟಿಸಿದ ಅನೇಕ ಉದಾಹರಣೆಗಳಿವೆ. ಆದರೆ ಬಿಜೆಪಿ ಗೆ ಇದನ್ನು ಸಹಿಸಲು ಆಗುತ್ತಿಲ್ಲ. ಕೋವಿಡ್ ನಿರ್ವಹಣೆಯಲ್ಲಿ ಸರಕಾರದ ವೈಫಲ್ಯ ಮತ್ತು ಕುಸಿದು ಬೀಳುತ್ತಿರುವ ತನ್ನ ನಾಯಕನ ವರ್ಚಸ್ಸನ್ನು ಕಾಪಾಡಿಕೊಳ್ಳಲು ಹತಾಶ ಯತ್ನವನ್ನು ಅದು ನಡೆಸಿದೆ.

ಕೇಂದ್ರದ ಬಿಜೆಪಿ ಸರಕಾರದ ವರ್ಚಸ್ಸನ್ನು ಕುಗ್ಗಿಸಲು ಕಾಂಗ್ರೆಸ್ ಪಕ್ಷವು ರೂಪಿಸಿದೆ ಎನ್ನಲಾಗಿರುವ ಟೂಲ್ ಕಿಟ್‌ನ್ನು ಸಂಬೀತ್ ಪಾತ್ರ ಅವರು ಇತ್ತೀಚೆಗೆ ಟ್ವಿಟರ್‌ಗೆ ಲಗತ್ತಿಸಿದ್ದರು. ಇದನ್ನು ಆಧುನಿಕ ತಂತ್ರಜ್ಞಾನವನ್ನು ಬಳಸಿ ಹಾಗೂ ಆಂತರಿಕ ತನಿಖೆ ನಡೆಸಿದ್ದಲ್ಲದೆ, ಹೊರಗಿನ ಅನೇಕ ಪರಿಣಿತರ ಅಭಿಪ್ರಾಯವನ್ನು ಪಡೆದ ಟ್ವಿಟರ್ ಸಂಬೀತ್ ಪಾತ್ರ ಅಂಟಿಸಿದ ಕಾಂಗ್ರೆಸ್ ಹೆಸರಿನ ಟೂಲ್ ಕಿಟ್ ನಕಲಿ ಎಂದು ಪತ್ತೆ ಹಚ್ಚಿತು. ಈ ಕುರಿತು ಕಾಂಗ್ರೆಸ್ ಪಕ್ಷ ನೀಡಿದ ದೂರಿನ ಅನ್ವಯ ಸಂಬೀತ್ ಪಾತ್ರ ಹಾಗೂ ಸಿ. ಟಿ. ರವಿ ಅವರ ಟ್ವೀಟ್‌ಗಳನ್ನು ತಿರುಚಿದ ಮಾಹಿತಿ ಎಂದು ತೀರ್ಮಾನಿಸಿದೆ. ಇದು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರಕ್ಕೆ ನುಂಗಲಾಗದ ತುತ್ತಾಗಿದೆ.

ಟ್ವಿಟರ್ ಸಂಸ್ಥೆಯ ಕ್ರಮದಿಂದ ದಿಗಿಲುಗೊಂಡ ಬಿಜೆಪಿ ಸರಕಾರ ಸಂಬೀತ್ ಪಾತ್ರ ಅಂಟಿಸಿದ ಟೂಲ್‌ಕಿಟ್‌ನ್ನು ತಿರುಚಿದ ಮಾಹಿತಿ ಎಂದು ಹಣೆಪಟ್ಟಿ ಅಂಟಿಸಿರುವುದಕ್ಕೆ ಕೆಂಡಾಮಂಡಲವಾಗಿ ಅದನ್ನು ತೆಗೆದು ಹಾಕಲು ಒತ್ತಡ ಹೇರಿತು. ದಿಲ್ಲಿಯ ಪೊಲೀಸರಿಂದ ನೋಟಿಸ್ ನೀಡಲಾಯಿತು. ದಿಲ್ಲಿ ಸಮೀಪದ ಗುರುಗ್ರಾಮದಲ್ಲಿ ಇರುವ ಟ್ವಿಟರ್ ಕಚೇರಿಗೆ ಧಾವಿಸಿದ ಪೊಲೀಸರು ಕಚೇರಿಯಲ್ಲಿ ಶೋಧ ನಡೆಸಿ ಬೆದರಿಸಿ ನೋಟಿಸ್ ನೀಡಿ ಹೋದರು. ಪೊಲೀಸರ ಈ ದೌರ್ಜನ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ ಟ್ವಿಟರ್ ತನ್ನ ಗ್ರಾಹಕರ ಅಭಿವ್ಯಕ್ತಿ ಸ್ವಾತಂತ್ರ್ಯ ಅಪಾಯದಲ್ಲಿದೆ ಎಂದು ಕಳವಳ ವ್ಯಕ್ತಪಡಿಸಿದೆ.

ಟ್ವಿಟರ್ ವ್ಯಕ್ತಪಡಿಸಿರುವ ಆತಂಕದಲ್ಲಿ ಅತಿಶಯೋಕ್ತಿಯೇನೂ ಇಲ್ಲ ಎಂಬುದು ಯಾರಿಗಾದರೂ ಅರ್ಥವಾಗುತ್ತದೆ. ಇದರಿಂದ ಭಾರತದ ಪ್ರಜಾಪ್ರಭುತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಜಾಗತಿಕ ಮಟ್ಟದಲ್ಲಿ ತಪ್ಪು ಕಲ್ಪನೆ ಉಂಟಾಗುತ್ತದೆ. ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲ. ಭಿನ್ನಾಭಿಪ್ರಾಯಕ್ಕೆ ಅವಕಾಶ ಇಲ್ಲ ಎಂಬ ಭಾವನೆ ಸಹಜವಾಗಿ ಮೂಡುತ್ತದೆ. ಸರಕಾರದ ಲೋಪ ದೋಷಗಳನ್ನು ವಿಮರ್ಶಿಸುವವರನ್ನೆಲ್ಲ ದೇಶ ದ್ರೋಹದ ಆರೋಪಕ್ಕೆ ಗುರಿ ಪಡಿಸಿ ಅನೇಕ ಚಿಂತಕರನ್ನು ಈಗಾಗಲೇ ಸೆರೆಮನೆಗೆ ತಳ್ಳಲಾಗಿದೆ. ಈಗ ಸಾಮಾಜಿಕ ಜಾಲತಾಣದಲ್ಲಿನ ಒಂದು ಸಣ್ಣ ವಿಮರ್ಶೆಯನ್ನೂ ಸಹಿಸುವುದಿಲ್ಲ ಅಂದರೆ ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡುವ ಘೋರ ಅಪಚಾರವಲ್ಲದೆ ಬೇರೇನೂ ಅಲ್ಲ.

ಇಡೀ ಭಾರತ ಕೋವಿಡ್ ಹೊಡೆತದಿಂದ ತತ್ತರಿಸಿ ಹೋಗಿದೆ. ಲಕ್ಷಗಟ್ಟಲೆ ಜನ ಅಸು ನೀಗಿದ್ದಾರೆ. ಎರಡನೇ ಅಲೆ ಇಳಿಮುಖವಾಗುತ್ತಿದ್ದರೂ ಮೂರನೇ ಅಲೆ ಬರುವ ಅಪಾಯದ ಸೂಚನೆಗಳಿವೆ. ಇಂತಹ ಆತಂಕದ ಸನ್ನಿವೇಶದಲ್ಲಿ ಅಧಿಕಾರದಲ್ಲಿರುವ ಪಕ್ಷ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಸಾಮಾಜಿಕ ಜಾಲತಾಣದಲ್ಲಿ ಬರುವ ಟೀಕೆ, ವಿಮರ್ಶೆಗಳನ್ನು ಸಹಾನುಭೂತಿಯಿಂದ ನೋಡಬೇಕು. ಹಿಂದೆಂದೂ ಕಂಡರಿಯದ ಈ ದುರಿತ ಕಾಲದಲ್ಲಿ ಜನಸಾಮಾನ್ಯರ ಆರೋಗ್ಯ ಹಾಗೂ ಅವರ ಜೀವನೋಪಾಯದ ರಕ್ಷಣೆ ಸರಕಾರದ ಆದ್ಯತೆಯಾಗಿರಬೇಕು. ಸಾಮಾಜಿಕ ಜಾಲತಾಣಗಳು ತನ್ನ ಸೂತ್ರದ ಗೊಂಬೆಗಳಂತೆ ಕುಣಿಯಬೇಕೆಂದು ಮಸಲತ್ತು ಮಾಡಬಾರದು. ಪ್ರತಿಪಕ್ಷಗಳ ಹಾಗೂ ಜನಪರ ಹೋರಾಟಗಾರರ ಧ್ವನಿಯನ್ನು ಹತ್ತಿಕ್ಕುವ ಸರ್ವಾಧಿಕಾರಿ ನೀತಿಯನ್ನು ಅನುಸರಿಸಬಾರದು. ಸರಕಾರ ಇನ್ನಾದರೂ ಪ್ರಜಾಪ್ರಭುತ್ವದ ಆಶಯಗಳಿಗೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News