×
Ad

ಜಿಂದಾಲ್‌ಗೆ 3,667 ಎಕರೆ ಭೂಮಿ ಮಂಜೂರು: ದಾಖಲೆ ಸಲ್ಲಿಸಲು ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ

Update: 2021-06-08 11:35 IST

ಬೆಂಗಳೂರು, ಜೂ.7: ಬಳ್ಳಾರಿಯ ಸಂಡೂರಿನಲ್ಲಿ 3,667 ಎಕರೆ ಸರಕಾರಿ ಭೂಮಿಯನ್ನು ಮಂಜೂರು ಮಾಡಿರುವ ಆದೇಶ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್, ಭೂ ಮಂಜೂರಾತಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಲ್ಲಿಸುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ. 

ಸರಕಾರಿ ಭೂಮಿಯನ್ನು ಜಿಂದಾಲ್‌ಗೆ ಮಂಜೂರು ಮಾಡಿರುವ ಕ್ರಮ ಪ್ರಶ್ನಿಸಿ ಕೆ.ಎ. ಪಾಲ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಈ ನಿರ್ದೇಶನ ನೀಡಿದೆ. 

ಅರ್ಜಿದಾರರ ಪರ ವಾದಿಸಿದ ವಕೀಲ ಎಸ್. ದೊರೆರಾಜು ಅವರು, 3,667 ಎಕರೆ ಸರಕಾರಿ ಭೂಮಿಯನ್ನು ಖಾಸಗಿ ಸಂಸ್ಥೆಗೆ ನೀಡುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಂಡಿದೆ. ಇದೇ ನಿರ್ಧಾರವನ್ನು ಮೇ 27ರಂದು ತಡೆ ಹಿಡಿದಿದ್ದರೂ ಈ ಸಂಬಂಧ ಸರಕಾರದಿಂದ ಯಾವುದೇ ಅಧಿಕೃತ ಆದೇಶ ಬಂದಿಲ್ಲ. ಇವೆಲ್ಲವನ್ನೂ ಗಮನಿಸಿದರೆ, ಸರಕಾರದ ಪಾರದರ್ಶಕವಾಗಿ ನಡೆದುಕೊಂಡಿಲ್ಲ ಎಂಬುದು ಕಾಣುತ್ತದೆ. ಹೀಗಾಗಿ, ನ್ಯಾಯಾಲಯ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಬೇಕು ಎಂದು ಮನವಿ ಮಾಡಿದರು.

ವಕೀಲದ ವಾದ ಆಲಿಸಿದ ನ್ಯಾಯಪೀಠ, ಜಮೀನು ಮಂಜೂರು ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲ ದಾಖಲೆಗಳು, ಆದೇಶದ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News