ನೂತನ ಶಾಸಕರಾಗಿ ಶರಣು ಸಲಗಾರ್, ಬಸನಗೌಡ ತುರುವಿಹಾಳ್ ಪ್ರಮಾಣ ವಚನ

Update: 2021-06-08 14:50 GMT

ಬೆಂಗಳೂರು, ಜೂ. 8: ರಾಜ್ಯ ವಿಧಾನಸಭೆಗೆ 2021 ಎಪ್ರಿಲ್ನಲ್ಲಿ ನಡೆದ ಉಪಚುನಾವಣೆಯಲ್ಲಿ ಆಯ್ಕೆಯಾಗಿರುವ ಬೀದರ್ ಜಿಲ್ಲೆಯ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಶರಣು ಸಲಗಾರ್ ಹಾಗೂ ರಾಯಚೂರು ಜಿಲ್ಲೆಯ ಮಸ್ಕಿ ಕ್ಷೇತ್ರದ ಬಸನಗೌಡ ತುರುವಿಹಾಳ್ ನೂತನ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಮಂಗಳವಾರ ವಿಧಾನಸೌಧದ ಮೂರನೆ ಮಹಡಿಯಲ್ಲಿರುವ ಸಮ್ಮೇಳನ ಸಭಾಂಗಣದಲ್ಲಿ ಏರ್ಪಡಿಸಿದ್ದ ಪ್ರಮಾಣ ವಚನ ಸಮಾರಂಭದಲ್ಲಿ ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಇಬ್ಬರೂ ನೂತನ ಶಾಸಕರಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.

ಶರಣು ಸಲಗಾರ್ ಅವರು ಸಮಾಜ ಸುಧಾರಕ ಬಸವಣ್ಣ ಹಾಗೂ ಬಸವ ಕಲ್ಯಾಣ ಕ್ಷೇತ್ರದ ಪ್ರಜೆಗಳ ಹೆಸರಿನಲ್ಲಿ, ಮಸ್ಕಿ ಕ್ಷೇತ್ರದ ಶಾಸಕ ಬಸನಗೌಡ ತುರುವಿಹಾಳ್ ರೈತರ, ಮಸ್ಕಿ ಕ್ಷೇತ್ರದ ಜನರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಆ ಬಳಿಕ ನೂತನ ಶಾಸಕರಿಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪುಷ್ಪಾಗುಚ್ಚವನ್ನು ನೀಡಿ ಅಭಿನಂದಿಸಿದರು.

ಇದೇ ಸಂದರ್ಭದಲ್ಲಿ ಉಭಯ ಶಾಸಕರಿಗೆ ಸಂವಿಧಾನ ಮತ್ತು ವಿಧಾನಸಭಾ ನಡಾವಳಿಗಳ ಪುಸ್ತಕಗಳನ್ನು ನೀಡಿದರು.

ಶಾಸಕರಿಗಾಗಿ ಕಾದ ಸ್ವೀಕರ್: ಶಾಸಕರ ಪ್ರಮಾಣ ವಚನ ಸ್ವೀಕಾರಕ್ಕೆ ಬೆಳಗ್ಗೆ 11ಗಂಟೆಗೆ ಸಮಯ ನಿಗದಿಯಾಗಿದ್ದು, ನಿಗದಿತ ಸಮಯಕ್ಕೆ ಸ್ವೀಕರ್ ಆಗಮಿಸಿದರು. ಆದರೆ, ಶಾಸಕರಿಬ್ಬರು ವಿಳಂಬವಾಗಿ ಆಗಮಿಸಿದ ಹಿನ್ನೆಲೆಯಲ್ಲಿ ಕೆಲಕಾಲ ಕಾಗೇರಿ ಅವರು ಶಾಸಕರ ಬರುವಿಕೆಗಾಗಿ ಕಾದುಕುಳಿತ ಪ್ರಸಂಗವು ನಡೆಯಿತು. ನೂತನ ಶಾಸಕರು ಆಗಮಿಸಿದ ಕೂಡಲೇ `ಸಮಯಕ್ಕೆ ಸರಿಯಾಗಿ ಬರಬೇಕು, ಸದನಕ್ಕೂ ಸರಿಯಾಗಿ ಬನ್ನಿ' ಎಂದು ಸ್ಪೀಕರ್ ಸಲಹೆ ಮಾಡಿದರು.

ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಂಸದ ಭಗವಂತ್ ಖುಬಾ, ಸಚಿವ ಪ್ರಭು ಚೌಹಾಣ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಪಕ್ಷಗಳ ಮುಖ್ಯ ಸಚೇತಕ ಡಾ.ಅಜಯ್ ಸಿಂಗ್, ಎಐಸಿಸಿ ಕಾರ್ಯದರ್ಶಿ ಬೋಸರಾಜು, ಶಾಸಕರಾದ ಹಂಪನಗೌಡ ಬಾದರ್ಲಿ, ಬಸವನಗೌಡ ದದ್ದಲ್, ಮುಖಂಡರಾದ ಬಿ.ವಿ.ನಾಯಕ್ ಸೇರಿದಂತೆ ಇನ್ನಿತರ ಮುಖಂಡರು ಹಾಗೂ ಶಾಸಕರ ಕುಟುಂಬದ ಸದಸ್ಯರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News