ರಮೇಶ್ ಜಾರಕಿಹೊಳಿ ಸೀಡಿ ಪ್ರಕರಣ: ಸರಕಾರ, ಪೊಲೀಸ್ ಆಯುಕ್ತರಿಗೆ ಹೈಕೋರ್ಟ್ ನೋಟಿಸ್

Update: 2021-06-08 17:34 GMT

ಬೆಂಗಳೂರು, ಜೂ.8: ಅಶ್ಲೀಲ ಸೀಡಿ ಪ್ರಕರಣದಲ್ಲಿ ಆರೋಪಿ ಎನ್ನಲಾಗಿರುವ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಇದುವರೆಗೆ ನಡೆಸಿದ ತನಿಖೆಯನ್ನು ರದ್ದುಪಡಿಸಬೇಕು ಹಾಗೂ ಹೊಸ ತನಿಖಾ ತಂಡ ರಚಿಸುವಂತೆ ಕೋರಿ ಸಂತ್ರಸ್ತ ಯುವತಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರಕಾರ, ನಗರ ಪೊಲೀಸ್ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿದೆ.   

ಎಸ್‍ಐಟಿ ಸೂಕ್ತ ತನಿಖೆ ನಡೆಸಿಲ್ಲ ಎಂದು ಸಂತ್ರಸ್ತ ಯುವತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ನ್ಯಾಯಪೀಠ, ರಾಜ್ಯ ಸರಕಾರ, ನಗರ ಪೊಲೀಸ್ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿದೆ.

ಆರೋಪಿಯಾಗಿರುವ ರಮೇಶ್ ಜಾರಕಿಹೊಳಿ ವಿರುದ್ಧ ಸಮರ್ಪಕ ವೈದ್ಯಕೀಯ ಪರೀಕ್ಷೆ ನಡೆದಿಲ್ಲ. ಕೇವಲ ಬಿಪಿ, ಶುಗರ್ ಚೆಕ್ ಮಾಡಿದ್ದಾರೆ. ರಕ್ತ, ವೀರ್ಯ, ಉಗುರು, ಕೂದಲ ಸ್ಯಾಂಪಲ್ ಪಡೆದಿಲ್ಲ. ಜತೆಗೆ ಎಸ್‍ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ರಜೆಯಲ್ಲಿದ್ದಾರೆ. ಆರೋಪಿಗೆ ಗೃಹ ಸಚಿವರೊಂದಿಗೆ ಸಂಪರ್ಕವಿದೆ. ಹೀಗಾಗಿ ಸರಕಾರ ನೇಮಿಸಿದ ತಂಡದಿಂದ ತನಿಖೆ ಸಾಧ್ಯವಿಲ್ಲ ಎಂದು ಸಂತ್ರಸ್ತ ಯುವತಿ ಕೋರ್ಟ್‍ಗೆ ಸಲ್ಲಿಸಿದ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ರಮೇಶ್ ಜಾರಕಿಹೊಳಿ ಸೀಡಿ ಪ್ರಕರಣವನ್ನು ಸಿಬಿಐ ತನಿಖೆ ನಡೆಸಬೇಕು ಎಂದು ಕೋರಿ ಸಲ್ಲಿಸಿದ್ದ ಪಿಐಎಲ್ ಅರ್ಜಿಯನ್ನು ಹೈಕೋರ್ಟ್ ಇತ್ತೀಚೆಗೆ ವಿಚಾರಣೆ ನಡೆಸಿತ್ತು. ಈ ವೇಳೆ ಪ್ರಕರಣದ ತನಿಖೆಗೆಂದು ರಚಿಸಿರುವ ಎಸ್‍ಐಟಿ ನ್ಯಾಯಪೀಠಕ್ಕೆ ತನಿಖೆಯ ಪ್ರಗತಿ ವರದಿ ಸಲ್ಲಿಸಿತು. 

ಸೀಲ್ ಮಾಡಿದ್ದ ಮುಚ್ಚಿದ ಲಕೋಟೆಯಲ್ಲಿದ್ದ ವರದಿಯನ್ನು ಸೀಲ್ ತೆರೆದು ವಿಭಾಗೀಯ ಪೀಠ ಪರಿಶೀಲನೆ ನಡೆಸಿತ್ತು. ಸಿಬಿಐ ತನಿಖೆ ನಡೆಸಬೇಕು ಎಂದು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ರಮೇಶ್ ಜಾರಕಿಹೊಳಿ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಆಕ್ಷೇಪಣೆ ಸಲ್ಲಿಸಿದರು. ಮೂರನೆ ವ್ಯಕ್ತಿಗಳು ತನಿಖೆಯನ್ನು ನಿರ್ಧರಿಸಬಾರದು ಎಂದು ಅವರು ವಾದ ಮಂಡಿಸಿದ್ದರು. 

ಈ ವೇಳೆ ಪ್ರತಿಕ್ರಿಯಿಸಿದ್ದ ನ್ಯಾಯಪೀಠ, ನ್ಯಾಯ ಸಮ್ಮತ ತನಿಖೆ ನಡೆಸುವುದು ನಮ್ಮ ಉದ್ದೇಶ. ನಿಮಗೆ ನ್ಯಾಯಸಮ್ಮತ ತನಿಖೆ ಇಷ್ಟವಿಲ್ಲವೇ. ನೀವು ಆಕ್ಷೇಪ ಎತ್ತಿದರೆ ನಾವು ಹಾಗೆ ಭಾವಿಸಬೇಕಾಗುತ್ತದೆ ಎಂದು ಹೇಳಿತ್ತು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News