ಮಾಜಿ ಸಚಿವ, ಹಾನಗಲ್ ಕ್ಷೇತ್ರದ ಬಿಜೆಪಿ ಶಾಸಕ ಸಿ.ಎಂ.ಉದಾಸಿ ನಿಧನ
ಬೆಂಗಳೂರು, ಜೂ. 8: ಮಾಜಿ ಸಚಿವ, ಹಾವೇರಿ ಜಿಲ್ಲೆ ಹಾನಗಲ್ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಹಾಲಿ ಶಾಸಕ ಹಾಗೂ ಹಿರಿಯ ರಾಜಕೀಯ ಮುತ್ಸದ್ದಿ ಚನ್ನಬಸಪ್ಪ ಮಹಾಲಿಂಗಪ್ಪ ಉದಾಸಿ(85) ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಮಂಗಳವಾರ ನಿಧನರಾಗಿದ್ದಾರೆ.
ಹೃದಯ ಮತ್ತು ಕಿಡ್ನಿ ಸಮಸ್ಯೆ ಹಿನ್ನೆಲೆಯಲ್ಲಿ ಬೆಂಗಳೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಗೆ ದಾಖಲಾಗಿದ್ದ ಸಿ.ಎಂ. ಉದಾಸಿ ಅವರು ಚೇತರಿಸಿಕೊಳ್ಳುತ್ತಿದ್ದರು. ಆದರೆ, ಇಂದು ಬೆಳಗ್ಗೆ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ಮಧ್ಯಾಹ್ನದ ವೇಳೆಗೆ ಚಿಕಿತ್ಸೆ ಫಲಿಸದೆ ಅಸುನೀಗಿದ್ದಾರೆಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಶ್ರೀಯುತರು ಪತ್ನಿ ನೀಲಮ್ಮ, ಪುತ್ರ ಸಂಸದ ಶಿವಕುಮಾರ್ ಉದಾಸಿ, ಪುತ್ರಿ ಜಯಶ್ರೀ ಸೇರಿದಂತೆ ಅಪಾರ ಸಂಖ್ಯೆಯ ಬಂಧು-ಮಿತ್ರರನ್ನು ಅಗಲಿದ್ದಾರೆ.
ಚನ್ನಬಸಪ್ಪ ಮಹಾಲಿಂಗಪ್ಪ ಉದಾಸಿ 1937 ಫೆಬ್ರವರಿ 2ರಂದು ತಂದೆ ಮಹಾಲಿಂಗಪ್ಪ, ತಾಯಿ ಸಾವಿತ್ರಮ್ಮ ದಂಪತಿ ಪುತ್ರರಾಗಿ ಜನಿಸಿದರು. ಕೇವಲ 8ನೆ ತರಗತಿ ವಿದ್ಯಾಭ್ಯಾಸ ಮುಗಿಸಿದ ಅವರು ರಾಜಕೀಯಕ್ಕೆ ಧುಮುಕಿದರು. ಹಾನಗಲ್ ಕ್ಷೇತ್ರದಿಂದ 1983ರಿಂದ ಸತತ 9 ಬಾರಿ ಸ್ಪರ್ಧಿಸಿದ್ದು, 6 ಬಾರಿ ಜಯಗಳಿಸಿ, ಮೂರು ಬಾರಿ ಸೋಲು ಕಂಡಿದ್ದಾರೆ. ಮೊದಲ ಬಾರಿಗೆ ಪಕ್ಷೇತರ ಅಭ್ಯರ್ಥಿಯಾಗಿ, ನಂತರ ಮೂರು ಬಾರಿ ಜನತಾದಳ, ಬಿಜೆಪಿ, ಜೆಡಿಯು ಮತ್ತು ಕೆಜೆಪಿಯಿಂದ ಒಂದೊಂದು ಬಾರಿ ಸ್ಪರ್ಧಿಸಿದ್ದರು.
ಹಾನಗಲ್ ಪುರಸಭೆ ಅಧ್ಯಕ್ಷರಾಗಿ ರಾಜಕೀಯ ಜೀವನ ಆರಂಭಿಸಿದ ಉದಾಸಿ, ನಂತರ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಆನಂತರ ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ, ಸಣ್ಣ ನೀರಾವರಿ ಹಾಗೂ ಜವಳಿ ಖಾತೆಗಳನ್ನು ನಿಭಾಯಿಸಿದ್ದರು. ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲ್, ಬಿ.ಎಸ್.ಯಡಿಯೂರಪ್ಪ ಅವರ ಸಚಿವ ಸಂಪುಟ ಸಹೋದ್ಯೋಗಿಯಾಗಿ ಕಾರ್ಯನಿರ್ವಹಿಸಿದ್ದರು.
ನಾಳೆ ಅಂತ್ಯಕ್ರಿಯೆ: ಹಾನಗಲ್‍ನಲ್ಲಿ ಉದಾಸಿ ಅವರ ಅಂತ್ಯಕ್ರಿಯೆ ನಾಳೆ(ಜೂ.9) ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಉದಾಸಿ ನಿಧನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಡಾ.ಅಶ್ವತ್ಥ ನಾರಾಯಣ, ಸಚಿವರಾದ ಅರವಿಂದ ಲಿಂಬಾವಳಿ, ಬಿ.ಸಿ.ಪಾಟೀಲ್, ನಾರಾಯಣಗೌಡ, ಜಗದೀಶ್ ಶೆಟ್ಟರ, ಬಸವರಾಜ ಬೊಮ್ಮಾಯಿ, ವಿ.ಸೋಮಣ್ಣ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಭಾಪತಿ ಬಸವರಾಜ ಹೊರಟ್ಟಿ ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.
ನನ್ನ ಒಡನಾಡಿ, ಆತ್ಮೀಯ, ಸಜ್ಜನ ಹಾಗೂ ಕ್ರಿಯಾಶೀಲ ರಾಜಕಾರಣಿಯಾಗಿದ್ದ ಉದಾಸಿ ಅವರು, ಹಾನಗಲ್ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದರು, ಲೋಕೋಪಯೋಗಿ ಸಚಿವರಾಗಿ ಅತ್ಯಂತ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರು. ರಾಜ್ಯಾದ್ಯಂತ ಜನಪ್ರಿಯತೆ ಪಡೆದುಕೊಂಡಿದ್ದರು. ಅವರ ನಿಧನದಿಂದ ಅಪರೂಪದ ನೇತಾರರೊಬ್ಬರನ್ನು ನಾಡು ಕಳೆದುಕೊಂಡಿದೆ. ನನ್ನ ರಾಜಕೀಯ ಜೀವನದುದ್ದಕ್ಕೂ ಜೊತೆಗಿದ್ದು, ಏಳುಬೀಳುಗಳನ್ನು ಜೊತೆಯಾಗಿ ಎದುರಿಸಿದ್ದೆವು, ಇಂದು ಅವರು ನಮ್ಮಿಂದ ದೂರವಾಗಿರುವುದು ನನ್ನ ಸಹೋದರನನ್ನು ನಾನು ಕಳೆದುಕೊಂಡಂತಾಗಿದೆ'
-ಯಡಿಯೂರಪ್ಪ, ಮುಖ್ಯಮಂತ್ರಿ
ಮಾಜಿ ಸಚಿವರು, ಹಾನಗಲ್ ಕ್ಷೇತ್ರದ ಹಾಲಿ ಶಾಸಕ ಹಾಗೂ ಜನತಾ ಪರಿವಾರ ಮೂಲದ ಸಿಎಂ ಉದಾಸಿ ಅವರು ನಮ್ಮನ್ನೆಲ್ಲ ಅಗಲಿದ ಸುದ್ದಿ ತೀವ್ರ ನೋವು, ಆಘಾತವನ್ನುಂಟು ಮಾಡಿದೆ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ. ಅವರ ಕುಟುಂಬ ಹಾಗೂ ಅಭಿಮಾನಿ ವರ್ಗಕ್ಕೆ ಅವರ ಅಗಲಿಕೆ ದುಃಖವನ್ನು ಭರಿಸುವ ಶಕ್ತಿ ನೀಡಲಿ'
-ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ನನ್ನ ತಂದೆಯವರು ಹಾಗೂ ಹಾನಗಲ್ ಕ್ಷೇತ್ರದ ಶಾಸಕರಾದ ಸಿ.ಎಂ.ಉದಾಸಿ ಅವರು ಇಂದು ನಮ್ಮನ್ನು ಅಗಲಿದ್ದಾರೆ. ಅವರ ಆತ್ಮಕ್ಕೆ ಭಗವಂತ ಸದ್ಗತಿಯನ್ನು ದಯಪಾಲಿಸಲಿ ಎಂದು ಪ್ರಾರ್ಥಿಸೋಣ'
-ಶಿವಕುಮಾರ್ ಉದಾಸಿ, ಪುತ್ರ ಹಾಗೂ ಸಂಸದ