ಬಿಜೆಪಿಯಲ್ಲಿನ ಬೆಳವಣಿಗೆಗಳೆಲ್ಲವೂ ಬೃಹತ್ ನಾಟಕ, ಬಿಎಸ್‍ವೈ ತಂತ್ರಗಾರಿಕೆ: ಸಿದ್ದರಾಮಯ್ಯ
ಬೆಂಗಳೂರು, ಜೂ.8: ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳೆಲ್ಲವೂ ಬೃಹತ್ ನಾಟಕ. ನೀನು ಚಿವುಟಿದಂತೆ ಮಾಡು, ನಾನು ಅತ್ತಂತೆ ಮಾಡು ಎನ್ನುವಂತೆ ಆಗಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಲೇವಡಿ ಮಾಡಿದ್ದಾರೆ. ಬಿಜೆಪಿಯಲ್ಲಿ ನಡೆಯುತ್ತಿರುವ ಎಲ್ಲ ನಾಟಕವೂ ರಾಜ್ಯದ ಜನರಿಗೆ ಗೊತ್ತಾಗಿದೆ. ಹೀಗಾಗಿ ಸರಕಾರಕ್ಕೆ ಶಾಪ ಹಾಕುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ತಮ್ಮ ನಿವಾಸದಲ್ಲಿಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ ಅವರು, ಯಡಿಯೂರಪ್ಪ ಅವರು ಕಳಪೆ ಮುಖ್ಯಮಂತ್ರಿ. ಅವರನ್ನು ತೆಗೆಯುವ ಕುರಿತು ಮೊದಲಿನಿಂದಲೂ ಚರ್ಚೆ ನಡೆಯುತ್ತಿದೆ. ಆದರೆ, ಕೊರೋನ ಕಾಡುತ್ತಿರುವ ಸಂದರ್ಭದಲ್ಲಿ ಅವರನ್ನು ಅಧಿಕಾರದಿಂದ ಕೆಳಗಿಳಿಸಿದರೆ ಏನಾಗಬಹುದು, ಮುಂದಿನ ಮುಖ್ಯಮಂತ್ರಿ ಯಾರನ್ನು ಮಾಡಬೇಕು ಎಂಬ ಸಂಶಯ ವರಿಷ್ಠರನ್ನು ಕಾಡುತ್ತಿದೆ ಎಂದು ಅವರು ಹೇಳಿದರು.
ಯಡಿಯೂರಪ್ಪ ಅವರು ಶಾಸಕರಿಂದ ಸಹಿ ಸಂಗ್ರಹ ಮಾಡಬೇಡಿ ಎಂದಿದ್ದಾರೆ. ರೇಣುಕಾಚಾರ್ಯ 65 ಶಾಸಕರು ಈಗಾಗಲೇ ಸಹಿ ಮಾಡಿದ್ದಾರೆ ಎನ್ನುತ್ತಾರೆ. ಈ ಸಹಿಗೆ ಕಿಮ್ಮತ್ತಿಲ್ಲ ಎಂದು ಸಚಿವ ಈಶ್ವರಪ್ಪ ಹೇಳಿಕೆ ಕೊಟ್ಟಿದ್ದಾರೆ. ಇದೆಲ್ಲವೂ ಡ್ರಾಮ ಎನ್ನುವುದು ತಿಳಿಯುವುದಿಲ್ಲವೇ ?
ನಾನು ವರಿಷ್ಠರು ಹೇಳಿದ ಕೂಡಲೇ ರಾಜಿನಾಮೆ ನೀಡುತ್ತೇನೆ ಎಂದು ಯಡಿಯೂರಪ್ಪ ಅವರು ಹೇಳಿದ್ದಾರೆ. ಇದು ಅವರ ತಂತ್ರಗಾರಿಕೆಯ ಭಾಗ. ಮತ್ತೊಂದೆಡೆ ರೇಣುಕಾಚಾರ್ಯ ಮೂಲಕ ಅವರೇ ಶಾಸಕರ ಸಹಿ ಸಂಗ್ರಹ ಮಾಡಿಸುತ್ತಿದ್ದಾರೆ. ಒಂದು ಕಡೆ ಬೆದರಿಸುವ ಮತ್ತು ನನಗೆ ಶಕ್ತಿ ಇದೆ ಎಂದು ತೋರಿಸಲು ಹೊರಟಿದ್ದಾರೆ. ಇದು ಸ್ವಾಭಾವಿಕವಾದ ರಾಜಕೀಯ ಬೆಳವಣಿಗೆಗಳು ಏನಲ್ಲ ಎಂದು ಅವರು ಟೀಕಿಸಿದ್ದಾರೆ.
ಒಗ್ಗಟ್ಟಿನ ಹೋರಾಟಕ್ಕೆ ಸಿಕ್ಕ ಜಯ
ಮಸ್ಕಿ ವಿಧಾನಸಭೆ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಸವನಗೌಡ ತುರವೀಹಾಳ ಅವರು ನಿರೀಕ್ಷೆಗೂ ಮೀರಿದ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಶಾಸಕರಾಗಿದ್ದ ಪ್ರತಾಪ್ ಗೌಡ ಪಾಟೀಲ್ ಅವರು ಮಾಡಿರುವ ದ್ರೋಹವನ್ನು ಜನ ಸಹಿಸಲಿಲ್ಲ. ಅವರ ಬಗ್ಗೆ ಅಸಹ್ಯ ಭಾವನೆ ಉಂಟಾಗಿತ್ತು. ಹೀಗಾಗಿ ಮತದಾರರು ಅವರನ್ನು ಸೋಲಿಸುವ ತೀರ್ಮಾ ಮಾಡಿದ್ದರು. ನಾನು ಮತ್ತು ಶಿವಕುಮಾರ್ ಪ್ರಚಾರ ಮಾಡಿದ್ದರ ಜೊತೆಗೆ ಸ್ಥಳೀಯ ನಾಯಕರೂ ನಮ್ಮ ಅಭ್ಯರ್ಥಿ ಗೆಲುವಿಗೆ ಶ್ರಮಿಸಿದರು. ಒಗ್ಗಟ್ಟಾಗಿ ಕೆಲಸ ಮಾಡಿದ ಪರಿಣಾಮ ಮತ್ತು ಅನುಕಂಪದ ಅಲೆ ಬಸವನಗೌಡ ಅವರ ಗೆಲುವಿಗೆ ಕಾರಣವಾಯಿತು. ಈ ಮೂಲಕ ಮಸ್ಕಿ ಕ್ಷೇತ್ರದ ಜನ ಪಕ್ಷಾಂತರ ಮಾಡಿದವರಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದರು.
ಚುನಾವಣೆಯಾದರೆ ನಮ್ಮದೇ ಗೆಲುವು
ರಾಜ್ಯದಲ್ಲಿ ಯಾವುದೇ ಸಂದರ್ಭದಲ್ಲಿ ವಿಧಾನಸಭೆ ಚುನಾವಣೆ ನಡೆದರೂ ಕಾಂಗ್ರೆಸ್ ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿಯುವ ವಾತಾವರಣ ನಿರ್ಮಾಣವಾಗಿದೆ. ಬಿಜೆಪಿ ಸರಕಾರ ಎಲ್ಲ ರಂಗಗಳಲ್ಲಿಯೂ ವಿಫಲವಾಗಿರುವುದೇ ಇದಕ್ಕೆ ಕಾರಣ. ಈ ಸರ್ಕಾರದಲ್ಲಿ ಅಭಿವೃದ್ಧಿ ಕಾಮಗಾರಿಗಳ ವಿಷಯವನ್ನಂತೂ ಕೇಳುವಂತಿಲ್ಲ. ನಮ್ಮ ಶಾಸಕರು ಚುನಾವಣೆ ವೇಳೆ ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸುವ ಶಕ್ತಿ ಕಳೆದುಕೊಂಡಿದ್ದಾರೆ. ಅಭಿವೃದ್ಧಿಗೆ ಸರಕಾರದಿಂದ ಅನುದಾನ ಬಿಡುಗಡೆ ಆಗದಿರುವುದೇ ಇದಕ್ಕೆ ಕಾರಣ. ಈಗಲೇ ಚುನಾವಣೆ ಬರಬೇಕು ಎಂದು ನಾವು ಬಯಸುವುದಿಲ್ಲ. ಸರಕಾರ ಉರುಳಿಸುವ ಪ್ರಯತ್ನಕ್ಕೂ ಕೈ ಹಾಕುವುದಿಲ್ಲ ಎಂದು ಹೇಳಿದರು.
ಸುಪ್ರೀಂ ಚಾಟಿ ಬಳಿಕ ಎಚ್ಚತ್ತ ಮೋದಿ
ಸುಪ್ರೀಂಕೋರ್ಟ್ ಚಾಟಿ ಬೀಸಿದ ಬಳಿಕ ಕೊರೋನ ಲಸಿಕೆಯನ್ನು ಉಚಿತವಾಗಿ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ. ಲಸಿಕೆಯನ್ನು ಶೇ. 75ರಷ್ಟು ಕೇಂದ್ರ ಸರಕಾರ ಮತ್ತು ಶೇ. 25ರಷ್ಟನ್ನು ಖಾಸಗಿಯವರು ಖರೀದಿ ಮಾಡಲು ಅವಕಾಶ ನೀಡಲಾಗಿದೆ. ಖಾಸಗಿಯವರು ಉಚಿತವಾಗಿ ಲಸಿಕೆ ಹಾಕುವುದಿಲ್ಲ. ರಾಜ್ಯದಲ್ಲಿ ಟೆಸ್ಟಿಂಗ್ ಪಾಸಿಟಿವಿಟಿ ದರ ಕಡಿಮೆಯಾಗಿಲ್ಲ. ಇನ್ನೂ ಶೇ. 9ರ ಆಸುಪಾಸಿನಲ್ಲೇ ಇದೆ. ಮರಣ ಪ್ರಮಾಣ ಕೂಡ ಹೆಚ್ಚಾಗಿಯೇ ಇದೆ. ಸೋಂಕು ನಿಯಂತ್ರಣ ಮಾಡುವ ಕೆಲಸ ಸಮರ್ಪಕವಾಗಿ ನಡೆಯದಿರುವುದೇ ಇದಕ್ಕೆ ಕಾರಣ. ಸರಕಾರ ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆ ಎಂದು ತಿಳಿಸಿದರು.
ಎಸಿಬಿ ನಿಷ್ಕ್ರಿಯ
ರಾಜ್ಯ ಸರಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮೊದಲಿನಿಂದಲೂ ಕೇಳಿ ಬರುತ್ತಿದೆ. ಹಲವಾರು ಸಚಿವರುಗಳ ವಿರುದ್ಧ ಭ್ರಷ್ಟಾಚಾರದ ದೂರುಗಳನ್ನು ನೀಡಿದರೂ ತನಿಖಾ ಸಂಸ್ಥೆಗಳು ಕ್ರಮ ಕೈಗೊಳ್ಳುತ್ತಿಲ್ಲ. ಎಸಿಬಿಯಂತೂ ನಿಷ್ಕ್ರಿಯವಾಗಿದೆ. ಎಸಿಬಿಯನ್ನು ಬಿಜೆಪಿಯವರು ವಿರೋಧ ಪಕ್ಷದಲ್ಲಿದ್ದಾಗ ವಿರೋಧಿಸಿದ್ದರು. ಈಗ ಅದರ ಅಸ್ತಿತ್ವವನ್ನೇ ಇಲ್ಲವಾಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ದೂರುಗಳು ಬಂದರೂ ಕ್ರಮ ಕೈಗೊಳ್ಳುತ್ತಿಲ್ಲ. ಹಾಗಾದರೆ ಸರಕಾರ ಎಸಿಬಿ ವಿರುದ್ಧ ಯಾವ ಕ್ರಮ ಕೈಗೊಂಡಿದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.