ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಸಿಇಟಿ ಅಂಕ ಮಾತ್ರ ಪರಿಗಣನೆ ಸ್ವಾಗತಾರ್ಹ: ಸುರೇಶ್ ಕುಮಾರ್
Update: 2021-06-08 16:17 IST
ಬೆಂಗಳೂರು, ಜೂ.8: 2020-21ನೇ ಸಾಲಿನ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯನ್ನು ರದ್ದು ಮಾಡಿರುವುದರಿಂದ ಇಂನಿಯರಿಂಗ್ ಸೇರಿದಂತೆ ಎಲ್ಲ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಅಂಕಗಳನ್ನು ಮಾತ್ರ ಪರಿಗಣನೆ ಮಾಡಲು ನಿರ್ಧರಿಸಿರುವ ಉನ್ನತ ಶಿಕ್ಷಣ ಇಲಾಖೆಯ ನಿರ್ಧಾರವನ್ನು ಸಚಿವ ಸುರೇಶ್ ಕುಮಾರ್ ಸ್ವಾಗತಿಸಿದ್ದಾರೆ.
ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ತಮ್ಮ ಸಲಹೆಯನ್ನು ಪರಿಗಣಿಸಿದ್ದಾರೆ. ನಮ್ಮ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಇಂತಹ ನಿರ್ಧಾರ ಅತ್ಯವಶ್ಯಕವಾಗಿತ್ತು. ಅವರಿಗೆ ಭರವಸೆ ತುಂಬಲು ಇದು ಅಗತ್ಯವಿತ್ತು. ಅತ್ಯಂತ ಕ್ಷಿಪ್ರಗತಿಯಲ್ಲಿ ಉಪಮುಖ್ಯಮಂತ್ರಿ ಇಂತಹುದೊಂದು ತೀರ್ಮಾನ ಪ್ರಕಟಿಸಿದ್ದಾರೆ. ವ್ಯವಸ್ಥೆಯ ಕುರಿತಂತೆ ವಿಶ್ವಾಸ ಮೂಡುವ ಇಂತಹ ನಿರ್ಧಾರ ತೆಗೆದುಕೊಂಡ ಉಪಮುಖ್ಯಮಂತ್ರಿಗಳನ್ನು ನಾನು ಅಭಿನಂದಿಸುತ್ತೇನೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.