ಸಾರಿಗೆ ಬಸ್ ಪ್ರಯಾಣ ದರ ಏರಿಕೆ ಇಲ್ಲ: ಸಾರಿಗೆ ಸಚಿವ ಲಕ್ಷ್ಮಣ ಸವದಿ ಸ್ಪಷ್ಟನೆ

Update: 2021-06-08 12:45 GMT

ಬೆಂಗಳೂರು, ಜೂ. 8: `ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ಸಾರಿಗೆ ಬಸ್ ಪ್ರಯಾಣ ದರವನ್ನು ಹೆಚ್ಚಿಗೆ ಮಾಡುವುದಿಲ್ಲ' ಎಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರೂ ಆಗಿರುವ ಲಕ್ಷ್ಮಣ ಸವದಿ ಅವರು ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೋವಿಡ್ ಮತ್ತು ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಗಳು ನಷ್ಟದಲ್ಲಿದ್ದು ಬಸ್ ಪ್ರಯಾಣ ದರ ಹೆಚ್ಚಳ ಸಾಧ್ಯತೆಗಳಿವೆ ಎಂಬ ಅಭಿಪ್ರಾಯಗಳಿವೆ. ಆದರೆ, ಸಾರ್ವಜನಿಕರ ಸಾರಿಗೆ ಪ್ರಯಾಣಿಕರು ಈಗಾಗಲೇ ಸಂಕಷ್ಟದಲ್ಲಿದ್ದು, ಅವರಿಗೆ ಮತ್ತಷ್ಟು ಕಷ್ಟ ಕೊಡಲು ಹೋಗುವುದಿಲ್ಲ ಎಂದು ಅಭಯ ನೀಡಿದರು.

ಈಗಾಗಲೇ ಅಧಿಕಾರಿಗಳು ಬಸ್ ಪ್ರಯಾಣ ದರ ಏರಿಕೆ ಸಂಬಂಧ ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದರೆ, ಈ ಸಂಕಷ್ಟದ ಸಂದರ್ಭದಲ್ಲಿ ಸಾರ್ವಜನಿಕ ಬಸ್ ಪ್ರಮಾಣ ದರವನ್ನು ಯಾವುದೇ ಕಾರಣಕ್ಕೂ ಏರಿಕೆ ಮಾಡುವುದಿಲ್ಲ. ಮುಂದೆ ಈ ಬಗ್ಗೆ ಆಲೋಚನೆ ಮಾಡೋಣ ಎಂದ ಅವರು, ಜೂ.14ರ ಬಳಿಕ ಲಾಕ್‍ಡೌನ್ ಸಡಿಲಿಸಿದರೆ ಹಂತ-ಹಂತವಾಗಿ ಸಾರ್ವಜನಿಕ ಸಾರಿಗೆ ಸೇವೆ ಆರಂಭಿಸಲಾಗುವುದು ಎಂದು ಹೇಳಿದರು.

ಕೋವಿಡ್ ಸೋಂಕು ತಡೆಗಟ್ಟುವ ದೃಷ್ಟಿಯಿಂದ ಸಾರ್ವಜನಿಕ ಪ್ರಯಾಣಿಕ ಪ್ರಯಾಣಿಕರ ಆರೋಗ್ಯ ರಕ್ಷಣೆಗೆ ಸಂಸ್ಥೆ ಸಿಬ್ಬಂದಿಗೆ ಅಂತರ ಕಾಯ್ದುಕೊಳ್ಳಲು ಸೂಚನೆ ನೀಡುವುದರ ಜೊತೆಗೆ ಸ್ಯಾನಿಟೈಸರ್, ಮಾಸ್ಕ್ ಎಲ್ಲವನ್ನು ಸಂಸ್ಥೆಯಿಂದಲೇ ನೀಡುತ್ತೇವೆ. ಎರಡೂ ಡೋಸ್ ಆಗುವವರೆಗೂ ನಮ್ಮ ನೌಕರರಿಗೆ ಒತ್ತಡ ಹಾಕಲ್ಲ. ಎರಡನೇ ಡೋಸ್ ತೆಗೆದುಕೊಂಡವರಿಗೆ ರಕ್ಷಣೆ ಕೊಟ್ಟು, ಸಾರಿಗೆ ಸಂಚಾರ ಪ್ರಾರಂಭ ಮಾಡುತ್ತೇವೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News