ರಮೇಶ್ ಜಾರಕಿಹೊಳಿ ಸೀಡಿ ಪ್ರಕರಣ: ಆರೋಪಿಗಳಾದ ನರೇಶ್‌ ಗೌಡ, ಶ್ರವಣ್‌ಗೆ ನಿರೀಕ್ಷಣಾ ಜಾಮೀನು

Update: 2021-06-08 12:29 GMT
ರಮೇಶ್ ಜಾರಕಿಹೊಳಿ- ನರೇಶ್‌ ಗೌಡ

ಬೆಂಗಳೂರು, ಜೂ.8: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸೀಡಿ ಪ್ರಕರಣದ ಶಂಕಿತ ಆರೋಪಿಗಳಾದ ನರೇಶ್‌ಗೌಡ್ ಹಾಗೂ ಶ್ರವಣ್‌ಗೆ ನಗರದ 91ನೆ ಸಿಸಿಎಚ್ ಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.

ರಮೇಶ್ ಜಾರಕಿಹೊಳಿ ಸೀಡಿ ಬಿಡುಗಡೆ ಹಾಗೂ ಬ್ಲ್ಯಾಕ್ ಮೇಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ನರೇಶ್‌ಗೌಡ ಹಾಗೂ ಶ್ರವಣ್‌ಗೆ ಜಾಮೀನು ಮಂಜೂರು ಮಾಡಿದೆ.

ರಮೇಶ್ ಜಾರಕಿಹೊಳಿಗೆ ಬ್ಲ್ಯಾಕ್ ಮೇಲ್ ಮಾಡಲಾಗಿದೆ ಎಂದು ಆರೋಪಿಸಿ ಅವರ ಅಪ್ತ ನಾಗರಾಜ್ ಎಂಬವರು ನರೇಶ್‌ಗೌಡ ಹಾಗೂ ಶ್ರವಣ್ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಆರೋಪಿಗಳಾದ ನರೇಶ್, ಶ್ರವಣ್ ಜಾಮೀನು ಅರ್ಜಿ ವಿಚಾರವಾಗಿ ಆಕ್ಷೇಪಣೆ ಸಲ್ಲಿಸಿದ್ದ ಎಸ್‌ಐಟಿ ಪರ ವಕೀಲರು ರಮೇಶ್ ಜಾರಕಿಹೊಳಿ ನೀಡಿರುವ ಹೇಳಿಕೆಯಂತೆ, ಅವರಿಂದ ಸೀಡಿ ಗ್ಯಾಂಗ್ ಹಣ ವಸೂಲಿ ಮಾಡಿದೆ. ರಮೇಶ್ ಜೊತೆ ಪ್ರಚೋದನಕಾರಿ ರೀತಿಯಲ್ಲಿ ಮಾತನಾಡಲು ಗ್ಯಾಂಗ್ ಯುವತಿಗೆ ಸೂಚಿಸಿದೆ. ಮೊಬೈಲ್, ವಾಟ್ಸ್ಆ್ಯಪ್, ವಿಡಿಯೋ ಕಾಲ್ ಮೂಲಕವೂ ಸಂಪರ್ಕಿಸಲು ತಿಳಿಸಿದ್ದಾರೆ. ಸುಲಿಗೆ, ಬ್ಲ್ಯಾಕ್ ಕ್‌ಮೇಲ್ ಉದ್ದೇಶದಿಂದಲೇ ಲೈಂಗಿಕ ಸಂಪರ್ಕವೂ ನಡೆದಿದೆ. ಸೀಡಿ ಗ್ಯಾಂಗ್ ಸದಸ್ಯರು ಹನಿಟ್ರ್ಯಾಪ್ ಮಾಡಿ ಹಲವು ಬಾರಿ ಹಣ ಪಡೆದಿದ್ದಾರೆ. ಇದಕ್ಕೆ ಪೂರಕವಾಗಿ ಮಾಜಿ ಶಾಸಕ ಎಂ.ವಿ.ನಾಗರಾಜ್ ಕೂಡ ಹೇಳಿಕೆ ನೀಡಿದ್ದಾರೆ. ಹೀಗಾಗಿ ತಲೆ ಮರೆಸಿಕೊಂಡಿರುವ ಪ್ರಮುಖ ಆರೋಪಿಗಳಾದ ಶ್ರವಣ್ ಹಾಗೂ ನರೇಶ್ ಗೌಡಗೆ ನಿರೀಕ್ಷಣಾ ಜಾಮೀನು ನೀಡಿದರೆ, ತನಿಖೆಗೆ ಅಡ್ಡಿಯಾಗಲಿದೆ ಎಂದು ವಾದಿಸಿತ್ತು.

ಆರೋಪಿಗಳು ತಲೆಮರೆಸಿಕೊಂಡಿರುವುದರಿಂದ ತನಿಖೆ ವಿಳಂಬವಾಗಿದೆ. ಸೀಡಿ ಬಹಿರಂಗವಾದ ದಿನವೇ ಯುವತಿ, ಆರೋಪಿಗಳ ನಡುವೆ ಹಲವು ಬಾರಿ ಮೊಬೈಲ್ ಸಂಭಾಷಣೆ ನಡೆದಿದೆ ಎಂದು ಪೀಠಕ್ಕೆ ತಿಳಿಸಿದ್ದರು. 

ಸೀಡಿ ಪ್ರಕರಣ ಬಹಿರಂಗವಾದ ಬಳಿಕ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಭೇಟಿಯಾಗಿದ್ದಾರೆ. ನಂತರ ಯುವತಿ ಹಾಗೂ ಆಕೆಯ ಸ್ನೇಹಿತನನ್ನು ಗೋವಾಗೆ ಕಳುಹಿಸಿದ್ದಾರೆ. ಯುವತಿ ಹಾಗೂ ಆರೋಪಿಗಳಿಗೆ ಮೊದಲಿಂದಲೂ ಪರಿಚಯ ಇರುವುದು ಖಚಿತವಾಗಿದೆ. ಯುವತಿ ಮನೆಯಲ್ಲಿ 9.20 ಲಕ್ಷ ರೂಪಾಯಿ ವಶಕ್ಕೆ ಪಡೆಯಲಾಗಿದೆ. ಹೀಗಾಗಿ ಜಾಮೀನು ನೀಡಬೇಡಿ ಎಂದು ಮನವಿ ಮಾಡಿತ್ತು. ಆದರೆ, ಎಸ್‌ಐಟಿ ಪರ ವಕೀಲರ ವಾದಕ್ಕೆ ಕೋರ್ಟ್ ಮನ್ನಣೆ ನೀಡಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News