×
Ad

ನಟ ಚೇತನ್ ವಿರುದ್ಧ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ದೂರು: #IStandWithChetanAhimsa ಎಂದ ನೆಟ್ಟಿಗರು

Update: 2021-06-08 18:25 IST

ನಟ, ಚಿಂತಕ, ಸಾಮಾಜಿಕ ಹೋರಾಟಗಾರ ಚೇತನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ದೂರು ಸಲ್ಲಿಸಿದ್ದು, ಬ್ರಾಹ್ಮಣರನ್ನು ಮಾನಸಿಕವಾಗಿ ನೋಯಿಸಿರುವ ಚೇತನ್ ಈ ಕೂಡಲೇ ಬೇಷರತ್ತಾಗಿ ಕ್ಷಮೆಯಾಚಿಸಬೇಕು ಆಗ್ರಹಿಸಿದೆ.

'ನಟ ಚೇತನ್ ವಿಕೃತ ಮನಸ್ಸಿನ ವ್ಯಕ್ತಿಯಾಗಿದ್ದು, ಪ್ರಚಾರಕ್ಕಾಗಿ ಬ್ರಾಹ್ಮಣರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳನ್ನು ಮಾಡಿದ್ದಾರೆ. ಈ ಸಂಬಂಧ ಕಾನೂನು ಕ್ರಮ ಕೈಗೊಳ್ಳಲು ನಗರ ಪೊಲೀಸರು ಮುಂದಾಗಬೇಕು. ಬ್ರಾಹ್ಮಣರು ಯಾವುದೇ ತಪ್ಪುಗಳನ್ನು ಮಾಡಿಲ್ಲ. ಆದರೂ, ಈ ಸಮುದಾಯವನ್ನು ಗುರಿಯಾಗಿಸಿಕೊಂಡು ಟೀಕಿಸಲಾಗುತ್ತಿದೆ. ಈ ಕುರಿತು ನಟ ಚೇತನ್ ಈ ಕೂಡಲೇ ಬೇಷರತ್ತಾಗಿ ಕ್ಷಮೆಯಾಚಿಸಬೇಕು ಎಂದು ಮಂಡಳಿಯ ಅಧ್ಯಕ್ಷ ಸಚ್ಚಿದಾನಂದಮೂರ್ತಿ ಆಗ್ರಹಿಸಿದ್ದಾರೆ.

ಆದರೆ ಚೇತನ್ ವಿರುದ್ಧ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನೀಡಿರುವ ದೂರಿನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಚೇತನ್ ಕ್ಷಮೆ ಕೇಳುವಂತಹ ಯಾವ ತಪ್ಪು ಕೂಡಾ ಮಾಡಿಲ್ಲ ಎಂದಿದ್ದಾರೆ. #IStandWithChetanAhimsa ಎಂಬ ಹ್ಯಾಶ್‌ಟ್ಯಾಗ್ ಬಳಸಿ ನೂರಾರು ಮಂದಿ ಟ್ವೀಟ್ ಮಾಡಿದ್ದಾರೆ.

'ಕ್ರಾಂತಿಗೀತೆಯ ಕಹಳೆಯಾಗಿ, ದೀನ ದಲಿತರ ಕೂಗಾಗಿ, ಅಸ್ಪೃಶ್ಯತೆಯ ಪಿಡುಗಿಗೆ ಉರಿವ ಜ್ವಾಲೆಯಾಗಿ, ನಮ್ಮೊಂದಿಗಿರುವೆ ಅಹಿಂಸಾ ತತ್ವದ ಗುರುತಾಗಿ, ಬಿಟ್ಟುಕೊಡೆವು ನಿನ್ನ, ತಲೆಬಾಗಿಸ ಬಿಡೆವು ಇನ್ನ ಬ್ರಾಹ್ಮಣ್ಯದ ಮುಕುಟ ಹೊದ್ದ ಖಳರ ಮುಂದೆ, ಹೋರಾಡು ನೀನು ಹಿಂದಿರುವೆವು ನಾವು ಚೇತನ್ ಅಹಿಂಸಾ' ಎಂದು ಕುಶಾಲ್ ಬಿದರೆ ಎಂಬವರು ಟ್ವೀಟ್ ಮಾಡಿದ್ದಾರೆ.

ಬ್ರಾಹ್ಮಣತ್ವ, ಬ್ರಾಹ್ಮಣಶಾಹಿ, ಪುರೋಹಿತಶಾಹಿ, ಬ್ರಾಹ್ಮಣ ಸಂಸ್ಕೃತಿ ತೊಲಗಲಿ. ಈ ದೇಶಕ್ಕೆ ಬೇಕಾಗಿರುವುದು ಬುದ್ಧ, ಬಸವ, ಅಂಬೇಡ್ಕರ್, ಪೆರಿಯಾರ್, ಫುಲೆಯವರ ಮಾರ್ಗವೇ ಹೊರತು ಆರ್ಯ(ಬ್ರಾಹ್ಮಣ)ರ ಮಾರ್ಗ ಅಲ್ಲ ಎಂದು ದೇವೀಂದ್ರ ಪಿ.ಎಸ್ ಎಂಬವರು ತಿಳಿಸಿದ್ದಾರೆ.

ಚೇತನ್ ರವರು ಕ್ಷಮೆ ಕೇಳುವ ಅವಶ್ಯಕತೆ ಇಲ್ಲ. ಬ್ರಾಹ್ಮಣ ಮತ್ತು ಬ್ರಾಹ್ಮಣ್ಯ, ಇವೆರಡೂ ಪದಗಳು ಬೇರೆ ಬೇರೆ ಅರ್ಥಗಳನ್ನು ಹೊಂದಿವೆ. ಮನುವಾದಿಗಳು ಅಧಿಕಾರದ ಮದದಿಂದ ವಿಚಾರವಾದಿಗಳ ವಿರುದ್ಧ ದೂರುಗಳನ್ನು ದಾಖಲಿಸುತ್ತಿರುವುದು ಖಂಡನಾರ್ಹ #IStandWithChetanAhimsa ಎಂದು ಎಸ್.ಎಸ್. ವೆಂಕಟೇಶ್ ಎಂಬವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚೇತನ್ ಅವರು ಯಾವ ಸಂದರ್ಭದಲ್ಲಿಯೂ ಒಂದು ಸಮೂಹಕ್ಕೆ ಅವಹೇಳನಕಾರಿಯಾಗಿ ಮಾತಾಡಿರುವುದು ಕಂಡು ಬಂದಿರುವುದಿಲ್ಲ. ಸತ್ಯವನ್ನು ಗಟ್ಟಿಯಾಗಿ ಹೇಳಿದ್ದಾರೆ. ಸೈದ್ಧಾಂತಿಕ ಹೋರಾಟಕ್ಕೆ ಬೆಂಬಲ ಕೊಡಬೇಕು ಎಂದು ಪ್ರವೀಣ್ ಎಂಬವರು ತಿಳಿಸಿದ್ದಾರೆ.

ಚೇತನ್ ಕ್ಷಮೆ ಕೇಳೋದಿಲ್ಲ. ಶತಮಾನಗಳಿಂದ ಆಗಿರೊ ಅವಮಾನಕ್ಕೆ, ಅತ್ಯಾಚಾರಕ್ಕೆ, ಕೊಲೆಗೆ, ನೋವಿಗೆ ನಿಮ್ಮ ಹತ್ತು ತಲೆಮಾರು ಕ್ಷಮೆ ಕೇಳಿದರೂ ಮುಗಿಯದ ಪಾಪ ನೀವು ಮಾಡಿರೋದು. ಕ್ಷಮೆ ಕೇಳೋದು ಮೇಲ್ಜಾತಿ ಹಾಗೂ ಸ್ವಯಂಘೋಶಿತ ಮೇಲ್ಜಾತಿಗಳಿಂದ ಶುರುವಾಗಲಿ. #IStandWithChetanAhimsa ಎಂದು ಚೀಕು ಎಂಬವರು ಟ್ವೀಟ್ ಮಾಡಿದ್ದಾರೆ.

ಸಾವಿರಾರು ವರ್ಷಗಳಿಂದ ಮೂಲ ನಿವಾಸಿಗಳ ಬಳಿ ಕ್ಷಮೆ ಕೇಳದವರ ಬಳಿ ಇವರೇಕೆ ಕೇಳಬೇಕು. ಅವರ ಹೋರಾಟ ಬ್ರಾಹ್ಮಣ್ಯದ ವಿರುದ್ಧ, ಬ್ರಾಹ್ಮಣರ ವಿರುದ್ಧ ಅಲ್ಲ #IStandWithChetanAhimsa ಎಂದು ರಮೇಶ್ ಎಂಬವರು ತಿಳಿಸಿದ್ದಾರೆ.

ವಿರೋಧಿಗಳಿಗೆ ಸತ್ಯವನ್ನು ಅರಗಿಸಿಕೊಳ್ಳೋ ತಾಕತ್ತು ಇಲ್ಲ ಅನ್ನೋದಕ್ಕೆ ಈ ಹುಚ್ಚು ಕೂಗಾಟಗಳೇ ಸಾಕ್ಷಿ ಎಂದು ಪ್ರವೀಣ್ ಎಂಬವರು ಟೀಕಿಸಿದ್ದು, ''ಬ್ರಾಹ್ಮಣ್ಯ ಹಾಗೂ ಹಿಂದುತ್ವವೆಂಬುದು ಸಾಮಾಜಿಕ ಶೋಷಣೆ ಮತ್ತು ಅಸ್ಪೃಶ್ಯತೆಯ ಮೂಲ‌ಬೇರು. ಅದರ ವಿರುದ್ಧವಾದ ಹೋರಾಟ‌ ನಮ್ಮದು. ಬ್ರಾಹ್ಮಣ ವರ್ಣದ ವಿರುದ್ಧವಾಗಲಿ ಹಿಂದೂ ಧರ್ಮದ ವಿರುದ್ಧವಾಗಲಿ ಅಲ್ಲ ಎಂದು ಶರತ್ ಬೀರಂಬಳ್ಳಿ ಎಂಬವರು ಟ್ವೀಟ್ ಮಾಡಿದ್ದಾರೆ.

"ಚೇತನ್ ರವರು #ಮಿಟೂ ಚಳುವಳಿಯ ಶೋಷಿತ ಹೆಣ್ಮಕ್ಕಳ ಪರ, ಜನಪರ ಧ್ವನಿಯಾಗಿ ವಿಸ್ತಾರವಾಗುತ್ತಿದ್ದಾರೆ. ಹೋರಾಟಗಾರರ ಹೃದಯದಲ್ಲಿ ಜಾಗ ಪಡೆಯುತ್ತಿದ್ದಾರೆ"..!! I Stand With Chetan Ahimsa. ನೆನಪಿರಲಿ, ಚೇತನ್ ಹಿಂದೆ ಬುದ್ದ, ಬಸವಣ್ಣ, ಅಂಬೇಡ್ಕರ್ ಅವರ ಸಂತಾನದ ಶಕ್ತಿಯಿದೆ ಎಂದು ಮಂಜು ಗಣಪತಿಪುರ ಎಂಬವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News