ಜೂ.15ರಂದು ಮುಖ್ಯಮಂತ್ರಿ, ಸಚಿವರ ಮನೆ ಮುಂದೆ ಪ್ರತಿಭಟನೆಗೆ ಎಡ, ಪ್ರಜಾಸತ್ತಾತ್ಮಕ ಪಕ್ಷಗಳ ಕರೆ
ಬೆಂಗಳೂರು, ಜೂ.8: ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನ ವಿರೋಧಿ ನೀತಿಗಳನ್ನು ವಿರೋಧಿಸಿ ಹಾಗೂ ಕೋವಿಡ್ ಸಂದರ್ಭದಲ್ಲಿ ಸರಕಾರಗಳ ನಿರ್ಲಕ್ಷ್ಯ ಖಂಡಿಸಿ ಜೂ.15ರಂದು ಮುಖ್ಯಮಂತ್ರಿ, ಎಲ್ಲ ಸಚಿವರ ಮನೆ ಮುಂದೆ ಪ್ರತಿಭಟನೆ ನಡೆಸಲು ಎಡ ಮತ್ತು ಪ್ರಜಾಸತ್ತಾತ್ಮಕ ಪಕ್ಷಗಳು ಕರೆ ನೀಡಿವೆ.
ಇತ್ತೀಚಿಗೆ ರಾಜ್ಯದಾದ್ಯಂತ ಸಹಸ್ರಾರು ಜನತೆ ಮನೆ ಮನೆ ಮುಂದೆ ಪ್ರತಿಭಟನೆಗಳನ್ನು ನಡೆಸಿದರೂ, ಜನರ ಹಕ್ಕುಗಳನ್ನು ಸರಕಾರಗಳು ಗಂಭೀರವಾಗಿ ಪರಿಗಣಿಸದೇ ಹೋದುದರಿಂದ ಈ ಪ್ರತಿಭಟನೆಯನ್ನು ಕೋವಿಡ್ ಸುರಕ್ಷತೆಯೊಂದಿಗೆ ಮಂತ್ರಿಗಳ ಮನೆ ಮುಂದೆ ಹಮ್ಮಿಕೊಂಡಿವೆ ಎಂದು ಪಕ್ಷಗಳ ನಾಯಕರು ಹೇಳಿದ್ದಾರೆ.
ತಜ್ಞರ ಸೂಚನೆಯಂತೆ ಸರಕಾರಗಳು, ಮುನ್ನೆಚ್ಚರಿಕೆ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದರಿಂದ, ಕೋವಿಡ್ ಎರಡನೆ ಅಲೆಯ ಬಾಧೆಗೆ ರಾಜ್ಯವು ತುತ್ತಾಯಿತು. ಈ ದುಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳಲು ವಿವೇಚನಾ ರಹಿತವಾಗಿ ಮೇಲಿಂದ, ಮೇಲೆ ಲಾಕ್‍ಡೌನ್‍ಗಳನ್ನು ಹೇರಲಾಯಿತು. ಇದಲ್ಲದೇ, ಜನರ ಮೇಲೆ ಬೆಲೆ ಏರಿಕೆಯ ಹೊರೆಯನ್ನು ಹೇರಲಾಗುತ್ತಿದೆ. ಕೃಷಿ ಭೂಮಿ ಹಾಗೂ ಎಲ್ಲರ ಕಸುಬುಗಳನ್ನು, ಕಸಿಯುವ, ಕಾರ್ಮಿಕರನ್ನು ಗ್ರಾಹಕ ಸಮುದಾಯಗಳನ್ನು ಲೂಟಿಗೊಳಪಡಿಸಲು, ಕಾರ್ಪೋರೇಟ್ ಕಾಯ್ದೆಗಳನ್ನು ಮತ್ತು ವಿದ್ಯುತ್, ಸಾರಿಗೆ, ಹಣಕಾಸು ಮುಂತಾದ ಸಾರ್ವಜನಿಕ ಉದ್ದಿಮೆಗಳನ್ನು ಕಾರ್ಪೋರೇಟ್ ಲೂಟಿಗೆ ತೆರೆದಿವೆ ಎಂದು ಸಿಪಿಐಎಂ ಕಾರ್ಯದರ್ಶಿ ಯು.ಬಸವರಾಜು ವಾಗ್ದಾಳಿ ನಡೆಸಿದ್ದಾರೆ.
ಜನರ ಈ ಗಂಭೀರ ದುಸ್ಥಿತಿಯ ಸಂದರ್ಭದಲ್ಲಿಯೇ, ವಿರೋಧದ ನಡುವೆ ಅವುಗಳ ಜಾರಿಯ ಕ್ರೌರ್ಯವನ್ನು ಮೆರೆಯುತ್ತಿವೆ. ಇವುಗಳ ಜೊತೆ, ಬಿಜೆಪಿಯ ಕೆಲ ಶಾಸಕರು, ಸಂಘಪರಿವಾರದ ಶಕ್ತಿಗಳು, ಬೆಡ್, ಔಷಧಿ, ಲಸಿಕೆ, ಆಮ್ಲಜನಕಗಳ ಕಾಳಸಂತೆಯಲ್ಲಿ ತೊಡಗಿವೆ ಎಂದು ಅವರು ದೂರಿದ್ದಾರೆ.
ಹಕ್ಕೊತ್ತಾಯ: ಸಿಪಿಐ ಕಾರ್ಯದರ್ಶಿ ಸಾತಿ ಸುಂದರೇಶ್ ಮಾತನಾಡಿ, ಉಚಿತ ಹಾಗೂ ಸಾರ್ವತ್ರಿಕ ಲಸಿಕೀಕರಣಕ್ಕೆ ಕೂಡಲೇ ಕ್ರಮ ವಹಿಸಬೇಕು. ಬೆಡ್, ಲಸಿಕೆ, ಔಷಧಿ, ಆಮ್ಲಜನಕಗಳ ಹಗರಣಗಳು, ಜಾತಿ ಹಾಗೂ ರಾಜಕೀಯ ತಾರತಮ್ಯದ ಪ್ರಕರಣಗಳನ್ನು ಸ್ವತಂತ್ರ ಉನ್ನತ ನ್ಯಾಯಾಂಗ ತನಿಖೆಗೊಳಪಡಿಸಬೇಕು ಎಂದು ಒತ್ತಾಯ ಮಾಡಿದರು.
ಕೇಂದ್ರ ಸರಕಾರ ಜಾರಿಗೊಳಿಸುವ ಕಾರ್ಪೋರೇಟ್ ಕಂಪೆನಿಗಳ ಪರವಾದ ರೈತ ಹಾಗೂ ಕಾರ್ಮಿಕರ ಮತ್ತು ಗ್ರಾಹಕರ ವಿರೋಧಿಗಳಾದ ತಿದ್ದುಪಡಿ ಕೃಷಿ ಕಾಯ್ದೆಗಳು ಹಾಗೂ ಕಾರ್ಮಿಕ ಸಂಹಿತೆಗಳು, ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ-2020 ಸೇರಿದಂತೆ ಸಾರ್ವಜನಿಕ ರಂಗದ ಉದ್ದಿಮೆಗಳ ಖಾಸಗೀಕರಣವನ್ನು ತಡೆಯಬೇಕು ಎಂದು ಆಗ್ರಹಿಸಿದರು.
ಕಾರ್ಮಿಕರಿಗೆ ಲಾಕ್ ಡೌನ್ ಕಾಲಾವಧಿಯ ವೇತನ ಮತ್ತು ಉದ್ಯೋಗ ರಕ್ಷಿಸಲು ಅಗತ್ಯ ಆದೇಶ ಹೊರಡಿಸಿ ಜಾರಿಗೊಳಿಸಬೇಕು. ಉದ್ಯೋಗ ಖಾತ್ರಿಯನ್ನು ನಗರಗಳಿಗೆ ಹಾಗೂ 200 ದಿನಗಳಿಗೆ ವಿಸ್ತರಿಸಬೇಕು. ಕೂಲಿಯನ್ನು ಕೃಷಿ ರಂಗದ ವೇತನದಂತೆ 424 ರೂಗಳಿಗೆ ಹೆಚ್ಚಿಸಬೇಕು ಎಂದರು.
ಜೂ.15ರ ಪ್ರತಿಭಟನೆಯಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್ ವಾದಿ), ಭಾರತ ಕಮ್ಯುನಿಸ್ಟ್ ಪಕ್ಷ, ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯುನಿಸ್ಟ್), ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್ ವಾದಿ, ಲೆನಿನ್‍ವಾದಿ-ಲಿಬರೇಬರೇಷನ್), ಅಖಿಲ ಭಾರತ ಫಾರ್ವರ್ಡ್ ಬ್ಲಾಕ್, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ, ಸ್ವರಾಜ್ ಇಂಡಿಯಾ ಪಕ್ಷಗಳು ಪಾಲ್ಗೊಳ್ಳಲಿವೆ ಎಂದು ಮಾಹಿತಿ ನೀಡಿದರು.