ಸಿಎಂ 'ರಾಜೀನಾಮೆ' ಹೇಳಿಕೆ: ಹೈಕಮಾಂಡ್ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಸಮಸ್ಯೆಗಳ ಚರ್ಚೆಗೆ ಭಿನ್ನರ ಪಟ್ಟು

Update: 2021-06-08 15:45 GMT

ಬೆಂಗಳೂರು, ಜೂ. 8: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ 'ರಾಜೀನಾಮೆ' ಹೇಳಿಕೆಯ ಹಿನ್ನೆಲೆಯಲ್ಲಿ ಶಾಸಕರ ಪರ-ವಿರೋಧ ಸಹಿ ಸಂಗ್ರಹದ ಬೆನ್ನಲ್ಲೆ ತಂತ್ರ-ಪ್ರತಿತಂತ್ರ ನಡೆಯುತ್ತಿದ್ದು, ಬಿಜೆಪಿಯಲ್ಲಿನ ಆಂತರಿಕ ಕಲಹ ನಿಲ್ಲುವ ಲಕ್ಷಣಗಳೇ ಗೋಚರಿಸುತ್ತಿಲ್ಲ.

ಬಿ.ಎಸ್.ಯಡಿಯೂರಪ್ಪನವರ 'ರಾಜೀನಾಮೆ, ಸಹಿ ಸಂಗ್ರಹ ಅಸ್ತ್ರ'ಕ್ಕೆ ಅಸಮಾಧಾನಿತ ಶಾಸಕರು ಹಾಗೂ ಮುಖಂಡರು 'ಶಾಸಕಾಂಗ ಪಕ್ಷದ ಸಭೆ' ಕರೆಯಬೇಕೆಂಬ ಪ್ರತ್ಯಾಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದು, ಹೈಕಮಾಂಡ್ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಶಾಸಕರ ಸಮಸ್ಯೆಗಳ ಚರ್ಚೆಗೆ ಪಟ್ಟು ಹಿಡಿಯಲು ತೆರೆಮರೆಯಲ್ಲೆ ಪ್ರಬಲ ರಣತಂತ್ರ ರೂಪಿಸಿದ್ದಾರೆಂದು ಗೊತ್ತಾಗಿದೆ.

ಈ ಮಧ್ಯೆ ಬಾಗಲಕೋಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, `ಬಿಜೆಪಿಯಲ್ಲಿ ಸಹಿ ಸಂಗ್ರಹ, ಒತ್ತಡ ಮತ್ತು ಒತ್ತಾಯದ ಪದ್ಧತಿಗಳು ಇಲ್ಲ. ಇಂತಹ ಸಹಿ ಸಂಗ್ರಹಗಳು ನಮ್ಮ ಪಕ್ಷದಲ್ಲಿ ನಡೆಯುತ್ತಿಲ್ಲ. ನಮಗೆ ಹೈಕಮಾಂಡ್ ಇದೆ, ರಾಷ್ಟ್ರೀಯ ನಾಯಕರು ಈ ಬಗ್ಗೆ ತೀರ್ಮಾನ ಮಾಡಲಿದ್ದಾರೆ. ವರಿಷ್ಠರು ಕೈಗೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ಬದ್ಧ' ಎಂದು ಪ್ರಕಟಿಸಿದ್ದಾರೆ.

ಈ ನಡುವೆ ಟ್ವೀಟ್ ಮಾಡಿರುವ ಆಡಳಿತ ಪಕ್ಷದ ಮುಖ್ಯ ಸಚೇತಕ ಹಾಗೂ ಕಾರ್ಕಳ ಕ್ಷೇತ್ರದ ಶಾಸಕ ವಿ.ಸುನೀಲ್ ಕುಮಾರ್, 'ಮೂರು ದಿನಗಳಿಂದ ಮಾಧ್ಯಮದಲ್ಲಿ ಬರುತ್ತಿರುವ ಹೇಳಿಕೆಗಳು ಪಕ್ಷದ ಹಿತದೃಷ್ಟಿಯಿಂದ ಒಳಿತಲ್ಲ. ಈ ಅಭಿಪ್ರಾಯಗಳೇ ಎಲ್ಲ ಶಾಸಕರ, ಕಾರ್ಯಕರ್ತರ ಅಭಿಪ್ರಾಯ ಆಗುವುದಿಲ್ಲ. ನಮ್ಮ ಅಭಿಪ್ರಾಯಗಳನ್ನು ಮಾಧ್ಯಮಗಳ ಮುಂದೆ ಹೇಳಲು ಸಾಧ್ಯವಿಲ್ಲವಾದ್ದರಿಂದ ಪಕ್ಷದ ವರಿಷ್ಠರು ಅಭಿಪ್ರಾಯ ಆಲಿಸಲು ಪ್ರತ್ಯೇಕ ವ್ಯವಸ್ಥೆ ಮಾಡಬೇಕು' ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರನ್ನು ಆಗ್ರಹಿಸಿದ್ದಾರೆ.

ಈ ಹಿಂದೆಯೂ ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಹಿರಿಯ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಬೆಲ್ಲದ್, `ಶಾಸಕಾಂಗ ಪಕ್ಷದ ಸಭೆ ಕರೆಯಬೇಕು' ಎಂದು ಒತ್ತಾಯಿಸಿದ್ದರು. ಇದೀಗ ಸುನೀಲ್ ಕುಮಾರ್ ಅವರೂ ಧ್ವನಿಗೂಡಿಸಿದ್ದು, ಬಿಜೆಪಿಯಲ್ಲಿ ಏನು ನಡೆಯುತ್ತಿದೆ ಎಂಬ ಗೊಂದಲ ರಾಜಕೀಯ ವಲಯ ಸೇರಿದಂತೆ ಸಾರ್ವಜನಿಕರಲ್ಲಿ ದಟ್ಟವಾಗಿದೆ.

'ಅಧಿಕಾರವಿದ್ದಾಗ ನೋವು, ತಮ್ಮ ವ್ಯಕ್ತಿಗತ ಭಾವನೆಗಳನ್ನು ವ್ಯಕ್ತಪಡಿಸುವುದು ಸಹಜ. ಅದಕ್ಕಾಗಿ ಈಗಾಗಲೇ ಒಂದು ತಂಡವನ್ನು ರಚನೆ ಮಾಡಿದ್ದೇವೆ. ರಾಜಕೀಯ ಯೋಚನೆ ಮತ್ತು ಯೋಜನೆ ಬಗ್ಗೆ ಪ್ರತಿ ತಿಂಗಳು ಆ ಸಮಿತಿ ಸಭೆ ಸೇರಿ ಚರ್ಚೆ ನಡೆಸಲಿದೆ. ಪಕ್ಷದ ಶಿಸ್ತುನ್ನು ಯಾರೂ ಉಲ್ಲಂಘನೆ ಮಾಡುವಂತಿಲ್ಲ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಟ್ಟಪ್ಪಣೆ ಮಾಡಿದ್ದಾರೆ.

ಭಿನ್ನ ಶಾಸಕರು, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಷಯ ಹೊರತುಪಡಿಸಿ ಆಡಳಿತದಲ್ಲಿ `ಸಿಎಂ ಪುತ್ರ ವಿಜಯೇಂದ್ರ ಹಸ್ತಕ್ಷೇಪ ನಡೆಸುತ್ತಿದ್ದು, ಅದಕ್ಕೆ ಕಡಿವಾಣ ಹಾಕಬೇಕು' ಎಂದು ಆಗ್ರಹಿಸಿ ಶಾಸಕಾಂಗ ಪಕ್ಷದ ಸಭೆಗೆ ಪಟ್ಟು ಹಿಡಿದಿದ್ದಾರೆ. ಇದು ಕೋವಿಡ್ ಸಂಕಷ್ಟದ ನಡುವೆ ವರಿಷ್ಠರಿಗೆ ಬಿಸಿ ತುಪ್ಪವಾಗಿದ್ದು, ಕೋವಿಡ್ ಲಾಕ್‍ಡೌನ್ ತೆರವುಗೊಳಿಸಿದ ಬಳಿಕ ಸಭೆ ನಡೆಸುವ ಸಾಧ್ಯತೆಗಳಿಗೆ ಎಂದು ಹೇಳಲಾಗುತ್ತಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ನೀಡುತ್ತೇನೆಂದು ಹೇಳಿಲ್ಲ. ಹೈಕಮಾಂಡ್ ಸೂಚಿಸಿದರೆ ರಾಜೀನಾಮೆ ಕೊಡುತ್ತೇನೆಂದು ಹೇಳಿದ್ದಾರೆ. ಇದು ಒಬ್ಬ ಆದರ್ಶ ಕಾರ್ಯಕರ್ತನ ಲಕ್ಷಣ. ಎಲ್ಲ ಕಾರ್ಯಕರ್ತರಿಗೆ ಪ್ರೇರಣೆಯಾಗುವಂತೆ ಹೇಳಿಕೆಯನ್ನು ಅವರು ನೀಡಿದ್ದಾರೆ. ನಮ್ಮ ಪಕ್ಷ ವಿಭಿನ್ನವಾಗಿರುವಂತಹ ಪಕ್ಷ. ನಾವೆಲ್ಲರೂ ಹಿರಿಯರು ಏನು ಸೂಚನೆ ನೀಡುವರೋ ಅದನ್ನ ಪಾಲಿಸುತ್ತೇವೆ. ಆದರೆ, ನಾಯಕತ್ವ ಬದಲಾವಣೆ ಬಗ್ಗೆ ಎಲ್ಲೂ ಚರ್ಚೆಯಾಗಿಲ್ಲ. ಶಾಸಕಾಂಗ ಪಕ್ಷದ ಸಭೆ, ಕೋರ್ ಕಮಿಟಿ ಸೇರಿದಂತೆ ಎಲ್ಲಿಯೂ ಚರ್ಚೆಯಾಗಿಲ್ಲ'

-ನಳಿನ್ ಕುಮಾರ್ ಕಟೀಲು, ಬಿಜೆಪಿ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News