×
Ad

ಲಾಕ್‍ಡೌನ್ ವೇಳೆ ಜಪ್ತಿ ಮಾಡಿದ್ದ ವಾಹನಗಳನ್ನು ಬಿಡುಗಡೆ ಮಾಡಲು ಹೈಕೋರ್ಟ್ ಆದೇಶ

Update: 2021-06-08 21:52 IST

ಬೆಂಗಳೂರು, ಜೂ.8: ಲಾಕ್‍ಡೌನ್ ಜಾರಿ ವೇಳೆ ಮಾರ್ಗಸೂಚಿ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜಪ್ತಿ ಮಾಡಲಾಗಿದ್ದ ವಾಹನಗಳನ್ನು ದಂಡ ಕಟ್ಟಿಸಿಕೊಂಡು ಬಿಡುವಂತೆ ಹೈಕೋರ್ಟ್ ಪೊಲೀಸರಿಗೆ ಆದೇಶಿಸಿದೆ.

ಸೀಝ್ ಮಾಡಲಾಗಿದ್ದ ವಾಹನಗಳ ಬಿಡುಗಡೆ ಬಗ್ಗೆ ಸೂಕ್ತ ನಿರ್ದೇಶನ ಕೋರಿ ರಾಜ್ಯ ಸರಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ನೀಡಿದೆ.

ವಾಹನಗಳ ಮಾಲಕರು ಕೋರ್ಟ್ ಗೆ ಬಂದು ಜನಸಂದಣಿ ಆಗುವುದು ಬೇಡ. ಜನ ಜಮಾವಣೆಯಾದರೆ ಮತ್ತೆ ಕೊರೋನ ಸೋಂಕು ಹಬ್ಬಲು ಕಾರಣವಾಗುತ್ತದೆ. ಹೀಗಾಗಿ, ವಾಹನಗಳ ಮಾಲಕರಿಂದ ದಂಡ ಕಟ್ಟಿಸಿಕೊಂಡು, ಬಾಂಡ್ ಬರೆಯಿಸಿಕೊಂಡು ಇಡೀ ರಾಜ್ಯದಲ್ಲಿ ಆಯಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲೇ ಕೇಸುಗಳನ್ನು ಇತ್ಯರ್ಥಪಡಿಸುವ ಅಧಿಕಾರವನ್ನು ನ್ಯಾಯಪೀಠವು ಪೊಲೀಸರಿಗೆ ನೀಡಿ ಆದೇಶಿಸಿತು. 

ಕೊರೋನ ಸೋಂಕನ್ನು ನಿಯಂತ್ರಿಸಲು ಜಾರಿಯಲ್ಲಿದ್ದ ಲಾಕ್‍ಡೌನ್ ವೇಳೆ ನಿಯಮ ಉಲ್ಲಂಘಿಸಿದವರಿಂದ ಪೊಲೀಸರು ಲಕ್ಷಾಂತರ ವಾಹನಗಳನ್ನು ಸೀಝ್ ಮಾಡಿದ್ದರು. ಇದರಿಂದ, ಠಾಣೆಗಳ ಆವರಣದಲ್ಲಿ ವಾಹನ ನಿಲುಗಡೆಗೆ ಸ್ಥಳವಿಲ್ಲದೇ ಸಮಸ್ಯೆಯಾಗಿತ್ತು. ಈ ಬಗ್ಗೆ ಸೂಕ್ತ ನಿರ್ದೇಶನ ಕೋರಿ ರಾಜ್ಯ ಸರಕಾರ ಹೈಕೋರ್ಟ್ ಮೆಟ್ಟಿಲೇರಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News