ದೊರೆಸ್ವಾಮಿ ಐಕ್ಯ ಹೋರಾಟದ ಬಗ್ಗೆ ಸ್ಪಷ್ಟ ಕಲ್ಪನೆಯಿದ್ದ ಸೇನಾನಿ: ಬಂಜಗೆರೆ ಜಯಪ್ರಕಾಶ್

Update: 2021-06-08 16:30 GMT

ಬೆಂಗಳೂರು, ಜೂ.8: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ದೇಶದಲ್ಲಿ ನಡೆಯುತ್ತಿರುವ ಜಾಗತಿಕರಣ, ಖಾಸಗಿಕರಣ, ಉದಾರಿಕರಣವನ್ನು ರೈತ, ಕಾರ್ಮಿಕ, ದಸಂಸ, ಎಡಪಂಥೀಯ ಸೇರಿ ಐಕ್ಯ ಹೋರಾಟದಿಂದ ಮಾತ್ರ ಸೋಲಿಸಲು ಸಾಧ್ಯವೆಂಬ ಸ್ಪಷ್ಟ ನಿಲುವನ್ನು ಹೊಂದಿದ್ದ ಸೇನಾನಿಯಾಗಿದ್ದರೆಂದು ಚಿಂತಕ ಬಂಜಗೆರೆ ಜಯಪ್ರಕಾಶ್ ಅಭಿಪ್ರಾಯಿಸಿದ್ದಾರೆ.

ಮಂಗಳವಾರ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ವತಿಯಿಂದ ವೆಬಿನಾರ್ ನಲ್ಲಿ ಆಯೋಜಿಸಿದ್ದ ಜನಾಂದೋಲನಗಳ ಜೀವಾಳ ದೊರೆಸ್ವಾಮಿ ಅವರ ಶ್ರದ್ಧಾಂಜಲಿ ಹಾಗೂ ಸಂಕಲ್ಪ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, 1991-92ರ ನಂತರ ಗ್ಯಾಟ್ ಒಪ್ಪಂದ ಪರಿಣಾಮ ದೇಶದಲ್ಲಿ ಸಾಮ್ರಾಜ್ಯಶಾಹಿ ಶಕ್ತಿ ಪ್ರಬಲಗೊಳ್ಳುತ್ತಿತ್ತು. ಇದನ್ನು ವಿರೋಧಿಸಿ ರಾಜ್ಯದಲ್ಲಿ ರಚನೆಗೊಂಡ ಸಾಮ್ರಾಜ್ಯಶಾಹಿ ವಿರೋಧಿ ಒಕ್ಕೂಟದ ಅಧ್ಯಕ್ಷರಾದ ಎಚ್.ಎಸ್.ದೊರೆಸ್ವಾಮಿಯವರ ಕಾರ್ಯವಿಧಾನ, ಅವರ ವ್ಯಕ್ತಿತ್ವ ಹೋರಾಟಗಾರರಿಗೆ ಮಾದರಿಯಾಗಿತ್ತೆಂದು ಸ್ಮರಿಸಿದ್ದಾರೆ.

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಗಾಂಧಿವಾದಿಯಾಗಿದ್ದರೂ ತಮ್ಮ ಚಿಂತನೆಯನ್ನು ಯಾರ ಮೇಲೆಯೂ ಒತ್ತಾಯ ಪೂರ್ವಕವಾಗಿ ಹೇರುತ್ತಿರಲಿಲ್ಲ. ಎಲ್ಲ ಜನಪರ ಸಿದ್ಧಾಂತಗಳೊಂದಿಗೆ ಬೆಸೆದು ಹೋರಾಟಕ್ಕೆ ಮುಂದಾಗುತ್ತಿದ್ದ ಅಪರೂಪದ ಹೋರಾಟಗಾರರೆಂದು ಅವರು ಹೇಳಿದ್ದಾರೆ.

ಎಚ್.ಎಸ್.ದೊರೆಸ್ವಾಮಿಗೆ ಸಾಮ್ರಾಜ್ಯಶಾಹಿಗಳ ಸಮಸ್ಯೆ, ಅದರ ಶಕ್ತಿ ಬಗ್ಗೆ ಸ್ಪಷ್ಟ ಅರಿವಿತ್ತು. ಹೀಗಾಗಿ ಈ ಶಕ್ತಿಗಳ ವಿರುದ್ಧ ಹೋರಾಟಕ್ಕೆ ಐಕ್ಯ ಹೋರಾಟದಿಂದ ಸುದೀರ್ಘವಾದ ಹೋರಾಟ ಅಗತ್ಯವಿದೆ ಎಂಬ ಕಲ್ಪನೆ ಅವರಿಗಿತ್ತು. ಅದಕ್ಕೆ ಪೂರಕವಾಗಿಯೇ ಅವರು ತಮ್ಮ ಮನಸ್ಥಿತಿಯನ್ನು ಸುದೀರ್ಘ ಹೋರಾಟಕ್ಕೆ ಪೂರಕವಾಗಿ ರೂಪಿಸಿಕೊಂಡಿದ್ದರೆಂದು ಅವರು ತಿಳಿಸಿದ್ದಾರೆ.

ಪರಿಸರ ಹೋರಾಟಗಾರ ಕಲ್ಕುಳಿ ವಿಠಲ್ ಹೆಗಡೆ ಮಾತನಾಡಿ, ಮಲೆನಾಡಿನಲ್ಲಿ 1997ರಲ್ಲಿ ಸರಕಾರ ಜಾರಿ ಮಾಡಲು ಉದ್ದೇಶಿಸಿದ್ದ ರಾಷ್ಟ್ರೀಯ ಉದ್ಯಾಯವನದ ವಿರುದ್ಧ ಹೋರಾಟದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಭಾಗವಹಿಸುವ ಮೂಲಕ ಹೋರಾಟಗಾರರಿಗೆ ಸ್ಫೂರ್ತಿಯಾಗಿದ್ದರೆಂದು ಸ್ಮರಿಸಿದ್ದಾರೆ.

ಎಚ್.ಎಸ್.ದೊರೆಸ್ವಾಮಿಗೆ ಚಳವಳಿಗಾರರ ಆರೋಗ್ಯದ ಮೇಲೆ ಕಾಳಜಿ ವಹಿಸುತ್ತಿದ್ದರು. ಅವರು ಚಳವಳಿಗಾರರನ್ನು ಕುಟುಂಬದ ಸದಸ್ಯರಂತೆ ನಡೆಸಿಕೊಳ್ಳುತ್ತಿದ್ದರು. ಹೀಗಾಗಿ ಅವರ ಆಶಯಗಳನ್ನು ನಾವೆಲ್ಲರೂ ಈಡೇರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗೋಣವೆಂದು ಅವರು ಹೇಳಿದ್ದಾರೆ.

ಹೋರಾಟಗಾರ ದೊಡ್ಡಿಪಾಳ್ಯ ನರಸಿಂಹಮೂರ್ತಿ ಮಾತನಾಡಿ, ಬಿಎಂಐಸಿ(ಬೆಂಗಳೂರು-ಮೈಸೂರು ಕಾರಿಡಾರ್ ಯೋಜನೆ) ಯೋಜನೆಯಿಂದ ರೈತರಿಗೆ, ಕಾರ್ಮಿಕರು ಸೇರಿದಂತೆ ಇಡೀ ರಾಜ್ಯಕ್ಕೆ ಎದುರಾಗಬಹುದಾದ ಸಂಕಷ್ಟಗಳನ್ನು ಬಹುಬೇಗ ಅರಿತುಕೊಂಡ ಎಚ್.ಎಸ್.ದೊರೆಸ್ವಾಮಿ, ಐಕ್ಯ ಹೋರಾಟದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದರೆಂದು ತಿಳಿಸಿದ್ದಾರೆ.

ಈ ವೇಳೆ ಕರ್ನಾಟಕ ಜನಶಕ್ತಿಯ ನೂರ್ ಶ್ರೀಧರ್, ಶಾಸಕ ಎ.ಟಿ.ರಾಮಸ್ವಾಮಿ, ಕುಮಾರ ಸಮತಳ ಸೇರಿದಂತೆ ಹಲವರು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಮಲೆನಾಡಿನಲ್ಲಿ ಆದಿವಾಸಿಗಳನ್ನು ಒಕ್ಕಲೆಬ್ಬಿಸುವುದಿಲ್ಲವೆಂದು ಸರಕಾರ ಭರವಸೆ ನೀಡಿದೆ. ಆದರೆ, ಆದಿವಾಸಿಗಳ ಇಂದಿನ ಪರಿಸ್ಥಿತಿ ಶೋಚನೀಯವಾಗಿದೆ. ಇಡೀ ಮಲೆನಾಡಿಗೆ ಸರಕಾರ ಜಾರಿ ಮಾಡುತ್ತಿರುವ ಬೇರೆ ಬೇರೆ ಪರಿಸರ ಯೋಜನೆಗಳಾದ ಜೈವಿಕ ಉದ್ಯಾನವನ ಯೋಜನೆ, ಕಸ್ತೂರಿ ರಂಗನ್ ವರದಿ, ಸೂಕ್ಷ್ಮ ವಲಯ ಸೇರಿದಂತೆ ವಿವಿಧ ಯೋಜನೆಗಳಿಂದಾಗಿ ಇಲ್ಲಿನ ಜನತೆ ಸದಾ ಆತಂಕದಿಂದ ಜೀವನ ಸವೆಸುತ್ತಿದ್ದಾರೆ.

-ಕಲ್ಕುಳಿ ವಿಠಲ್‍ಹೆಗಡೆ, ಪರಿಸರ ಹೋರಾಟಗಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News