ದಿಂಡು ಸೀಳಿ ಫಲ ನೀಡಿದ ಬಾಳೆಗಿಡ: ಪ್ರಕೃತಿ ವಿಸ್ಮಯಕ್ಕೆ ಬೆರಗಾದ ಗ್ರಾಮಸ್ಥರು

Update: 2021-06-08 18:00 GMT

ಮಡಿಕೇರಿ, ಜೂ.8: ಬಾಳೆಗಿಡಗಳು ಸಾಮಾನ್ಯವಾಗಿ ಎಲೆಗಳು ಚಿಗುರೊಡೆಯುವ ಜಾಗದಲ್ಲಿ ಗೊನೆ ಬಿಡುತ್ತವೆ. ಆದರೆ ಇಲ್ಲೊಂದು ಬಾಳೆಗಿಡ ದಿಂಡನ್ನೇ ಸೀಳಿಕೊಂಡು ಫಲ ನೀಡಿದ್ದು, ಅಚ್ಚರಿ ಮೂಡಿಸಿದೆ.

ಮಾಲ್ದಾರೆ ಗ್ರಾ.ಪಂ ವ್ಯಾಪ್ತಿಯ ಕಲ್ಲಳ್ಳ ಗ್ರಾಮದ ನಾರಾಯಣ ಗುರು ಗುಡಿ ಸಮೀಪದ ನಿವಾಸಿ ಚಾಮಿ ಅವರ ಪುತ್ರ ರಾಜನ್ ಎಂಬುವವರ ಮನೆಯಂಗಳದಲ್ಲಿ ಬೆಳೆಸಿರುವ ಬಾಳೆಗಿಡ ಈ ವಿಸ್ಮಯವನ್ನು ಮೂಡಿಸಿದೆ.

ಬಾಳೆಗಿಡ ಫಲ ನೀಡುವ ಕಾಲ ಕಳೆದರೂ ಗೊನೆ ಬಾರದೆ ಇರುವುದನ್ನು ಗಮನಿಸುತ್ತಲೇ ಇದ್ದ ರಾಜನ್ ಮನೆಯವರಿಗೆ ಒಂದು ಆಶ್ಚರ್ಯ ಕಾದಿತ್ತು. ಎಲೆಗಳು ಚಿಗುರೊಡೆಯುವ ಜಾಗವನ್ನು ಬಿಟ್ಟು ದಿಂಡನ್ನು ಸೀಳಿ ಗೊನೆ ಬಂದಿರುವುದು ಗೋಚರಿಸಿದೆ. ಕೃಷಿ ರಂಗಕ್ಕೆ ಸವಾಲಿನಂತಿರುವ ಪ್ರಕೃತಿಯ ಈ ವಿಸ್ಮಯವನ್ನು ನೋಡಲು ಸುತ್ತಮುತ್ತಲ ನಿವಾಸಿಗಳು ಹಾಗೂ ರೈತರು ಆಗಮಿಸುತ್ತಿದ್ದಾರೆ.

ಕಳೆದ ವರ್ಷ ಇದೇ ರಾಜನ್ ಅವರ ಮನೆಯ ಸಮೀಪದ ತೆಂಗಿನ ಗಿಡವೊಂದರಲ್ಲಿ ವಿಚಿತ್ರವಾದ ಹೂವಿನ ರೂಪದ ಹುಳುಗಳು ಕಾಣಿಸಿಕೊಂಡು ಆಶ್ಚರ್ಯ ಮೂಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News