ಚಿಕ್ಕಮಗಳೂರು: ಸಿನಿಮೀಯ ರೀತಿಯಲ್ಲಿ ಮನೆಯ ಮೇಲೆ ಗುಂಡಿನ ಸುರಿಮಳೆ; ಇಬ್ಬರು ಆರೋಪಿಗಳ ಬಂಧನ
ಚಿಕ್ಕಮಗಳೂರು, ಜೂ.9: ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರ ಹತ್ಯೆಯ ಉದ್ದೇಶದಿಂದ ಮನೆಯ ಮೇಲೆ ಬಂದೂಕಿನಿಂದ ಗುಂಡಿನ ಸುರಿಮಳೆ ಗೈದಿರುವ, ಮಲೆನಾಡನ್ನೇ ಬೆಚ್ಚಿಬೀಳಿಸುವ ಘಟನೆಯೊಂದು ತಾಲೂಕಿನ ಹೆಡದಾಳು ಗ್ರಾಮದಲ್ಲಿ ಇತ್ತೀಚೆಗೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಹೆಡದಾಳು ಗ್ರಾಮದಲ್ಲಿ ಈ ಸಿನೀಮೀಯ ರೀತಿಯ ಘಟನೆ ವರದಿಯಾಗಿದ್ದು, ಗ್ರಾಮದಲ್ಲಿ ಕಾಫಿ ಬೆಳೆಗಾರರಾಗಿರುವ ಚೇತನ್ ಕುಮಾರ್ ಎಂಬವರ ಮನೆಯ ಮೇಲೆ ಅದೇ ಗ್ರಾಮದ ಹೋಮ್‍ಸ್ಟೇ ಒಂದರ ಮಾಲಕ ಕಿರಣ್ ಎಂಬಾತ ಸಿಂಗಲ್ ಬ್ಯಾರಲ್ ಬಂದೂಕಿನಿಂದ ಗುಂಡಿನ ದಾಳಿ ನಡೆಸಿದ್ದಾನೆಂದು ತಿಳಿದು ಬಂದಿದೆ.
ಹೆಡದಾಳು ಗ್ರಾಮದಲ್ಲಿ ಹೋಮ್ ಸ್ಟೇ ನಡೆಸುತ್ತಿರುವ ಕಿರಣ್ ಹಾಗೂ ಮಂಜುನಾಥ್‍ಗೌಡ ಎಂಬವರ ಮಗ ಚೇತನ್‍ಕುಮಾರ್ ನಡುವೆ ಕೆಲ ವರ್ಷಗಳ ಹಿಂದೆ ಜಾಗ ಖರೀದಿ ವ್ಯವಹಾರ ನಡೆದಿದ್ದು, ಚೇತನ್ ಕುಮಾರ್ ಗೆ ಕಿರಣ್ ಜಾಗ ಖರೀದಿಗೆ 10 ಸಾವಿರ ರೂ. ಮುಂಗಡ ಹಣವನ್ನೂ ನೀಡಿದ್ದ. ನಂತರ ಈ ವ್ಯವಹಾರ ಮುಂದುವರಿಯದೆ, ಇದೇ ವಿಚಾರ ಸಂಬಂದ ಕಿರಣ್ ಹಾಗೂ ಚೇತನ್ ಕುಮಾರ್ ಕುಟುಂಬಸ್ಥರ ನಡುವೆ ವೈಮನಸ್ಸು ಬೆಳೆದಿತ್ತು ಎಂದು ತಿಳಿದು ಬಂದಿದೆ.
ಈ ಮಧ್ಯೆ ಇತ್ತೀಚೆಗೆ ಹೆಡದಾಳು ಗ್ರಾಮದಲ್ಲಿ ಕ್ರಿಕೆಟ್ ಆಟವಾಡುತ್ತಿದ್ದ ಸಂದರ್ಭ ಯುವಕರ ನಡುವೆ ಸಣ್ಣ ಗಲಾಟೆ ನಡೆದಿದೆ. ಈ ವೇಳೆ ಕೆಲ ಯುವಕರು ಹುಡುಗನೊಬ್ಬನಿಗೆ ಹಲ್ಲೆ ಮಾಡಿದ್ದಾರೆ. ಇದನ್ನು ಕಂಡ ಚೇತನ್ ಕುಮಾರ್ ಗಲಾಟೆ ಬಿಡಿಸಲು ಮುಂದಾಗಿದ್ದು, ಈ ವೇಳೆ ಸ್ಥಳದಲ್ಲಿ ಕಿರಣ್ ಜೊತೆ ಚೇತನ್ ಕುಮಾರ್ ಜಗಳವಾಡಿದ್ದಾನೆ. ಅಲ್ಲದೇ ಈ ಘಟನೆ ಸಂಬಂಧ ಕಿರಣ್‍ಕುಮಾರ್ ಸಾಮಾಜಿಕ ಜಾಲತಾಣಗಳಲ್ಲಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಪೋಸ್ಟ್ ಹಾಕಿದ್ದು, ಈ ಪೋಸ್ಟ್ ಗೆ ಪ್ರತಿಕ್ರಿಯಿಸಿ ಚೇತನ್ ಕುಮಾರ್ ಅವರ ಸಹೋದರನೂ ಪೋಸ್ಟ್, ಕಾಮೆಂಟ್ ಹಾಕಿದ್ದಾರೆ. ಇದು ಕಿರಣ್‍ನನ್ನು ಕೆರಳಿಸಿದ್ದು, ಚೇತನ್ ಕುಮಾರ್ ಕುಟುಂಬಸ್ಥರಿಗೆ ಕರೆ ಮಾಡಿ ಕೊಲೆ ಮಾಡುವ ಬೆದರಿಕೆಯನ್ನೂ ಹಾಕಿದ್ದಾನೆಂದು ತಿಳಿದು ಬಂದಿದೆ.
ಇದೇ ವಿಚಾರ ಸಂಬಂಧ ಕಳೆದ ಶುಕ್ರವಾರ ರಾತ್ರಿ 12ರ ಹೊತ್ತಿನಲ್ಲಿ ಮದ್ಯ ಸೇವಿಸಿದ್ದ ಕಿರಣ್ ಕುಮಾರ್ ತಮ್ಮ ಸಂಬಂಧಿ ನಾಗೇಶ್ ಗೌಡ ಎಂಬವರಲ್ಲಿ ಶಿಕಾರಿಗೆಂದು ಸಿಂಗಲ್ ಬ್ಯಾರಲ್‍ನ ಬಂದೂಕನ್ನು ಕೇಳಿ ಪಡೆದಿದ್ದಾನೆ. ಬಂದೂಕು ಪಡೆದವನೇ ಸೀದಾ ಚೇತನ್ ಕುಮಾರ್ ಮನೆ ಎದುರು ಆಗಮಿಸಿದ ಮನೆಯಲ್ಲಿದ್ದವರನ್ನು ಹೊರಗೆ ಬರುವಂತೆ ಬೆದರಿಕೆ ಹಾಕಿದ್ದಾನೆ. ಕಿರಣ್ ಕೈಯಲ್ಲಿ ಬಂದೂಕು ಇರುವುದನ್ನು ಗಮನಿಸಿದ ಚೇತನ್ ಕುಮಾರ್ ಹಾಗೂ ಅವರ ತಂದೆ ಮಂಜನಾಥ್‍ಗೌಡ, ತಾಯಿ, ಸಹೋದರ, ಪತ್ನಿ ಹಾಗೂ ಮಗ ಮನೆಯಿಂದ ಹೊರಬಾರದೇ ಬಾಗಿಲು ಹಾಕಿಕೊಂಡು ಮನೆಯೊಳಗೆ ಉಳಿದುಕೊಂಡಿದ್ದಾರೆ.
ಇದರಿಂದ ಮತ್ತಷ್ಟು ಆಕ್ರೋಶಗೊಂಡ ಕಿರಣ್ ಬಂದೂಕು ಎತ್ತಿಕೊಂಡು ಸಿನಿಮೀಯ ರೀತಿಯಲ್ಲಿ ಮನೆಯ ಮೇಲೆ ಮನಬಂದಂತೆ ಗುಂಡಿನ ಸುರಿಮಳೆ ಗರೆದಿದ್ದಾನೆ. ಮನೆ ಮುಂದೆ ನಿಂತಿದ್ದ ಕಾರಿನ ಮೇಲೂ ಗುಂಡು ಹಾರಿಸಿದ್ದಾನೆ. ಮನೆಯ ಬಾಗಿಲಿಗೆ ಗುರಿ ಇಟ್ಟು ಪದೇ ಪದೇ ಗುಂಡು ಹಾರಿಸಿದ್ದಾನೆ. ಬಾಗಿಲು ಸೀಳಿಕೊಂಡು ಬಂದ ಬಂದೂಕಿನ ಗೊಂಡೊಂದು ಮನೆಯ ಹಿಂಬದಿಯ ಗೋಡೆಗೆ ಬಿದ್ದಿದ್ದು, ಈ ವೇಳೆ ಕಿಟಕಿ ಬಳಿ ನಿಂತಿದ್ದ ಚೇತನ್ ಅವರ ತಾಯಿ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ. ಮನೆಯಲ್ಲಿನ ಕಿರುಚಾಟ ಕೇಳಿಸಿಕೊಂಡ ಕಿರಣ್ ಗುಂಡೇಟಿನಿಂದ ಮನೆಯಲ್ಲಿದ್ದವರು ಸತ್ತಿದ್ದಾರೆಂದು ಭಾವಿಸಿ ರಾತ್ರೋರಾತ್ರಿ ಗ್ರಾಮ ತೊರೆದಿದ್ದಾನೆಂದು ತಿಳಿದು ಬಂದಿದೆ.
ಬಳಿಕ ಪೊಲೀಸರಿಗೆ ಕರೆ ಮಾಡಿದ್ದರಿಂದ ಚಿಕ್ಕಮಗಳೂರು ಡಿವೈಎಸ್ಪಿ ಪ್ರಭು ಸೇರಿದಂತೆ ಮಲ್ಲಂದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಕಿರಣ್‍ಗೆ ಕರೆ ಮಾಡಿದ್ದು, ಕಿರಣ್ ಅಷ್ಟರಲ್ಲಾಗಲೇ ನಾಪತ್ತೆಯಾಗಿದ್ದ ಎಂದು ತಿಳಿದು ಬಂದಿದೆ. ಚೇತನ್ ಕುಮಾರ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಿರಣ್‍ನನ್ನು ಬಂಧಿಸಲು ಬಲೆ ಬೀಸಿದ್ದು, ಎರಡು ದಿನಗಳ ನಂತರ ಆರೋಪಿ ಕಿರಣ್ ಶಿವಮೊಗ್ಗ ಜಿಲ್ಲೆಯಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಮಂಗಳವಾರ ಮಲ್ಲಂದೂರು ಪೊಲೀಸರು ಹೆಮ್ಮಕ್ಕಿ ಗ್ರಾಮದ ಲೋಹಿತ್ ಎಂಬಾತನನ್ನು ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪದ ಮೇರೆಗೆ ಬಂಧಿಸಿದ್ದಾರೆ. ಬಂದೂಕು ನೀಡಿದ್ದ ನಾಗೇಶ್‍ಗೌಡ ಎಂಬವರು ತಲೆ ಮರೆಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿಗೆ ಬಿಜೆಪಿ ಕಾರ್ಯಕರ್ತರ ಸಾಥ್, ಪ್ರಕರಣ ಮುಚ್ಚಿ ಹಾಕಲು ಯತ್ನ: ಆರೋಪ
ಚೇತನ್ ಕುಮಾರ್ ಅವರ ಮನೆಯ ಮೇಲೆ ಗುಂಡಿನ ದಾಳಿ ನಡೆಸಿದ ಬಳಿಕ ಕಿರಣ್ ಹೆಮ್ಮಕಿ ಗ್ರಾಮದ ನಿವಾಸಿ, ಬಿಜೆಪಿ ಕಾರ್ಯಕರ್ತ ಲೋಹಿತ್ ಎಂಬಾತನ ಸಹಾಯ ಪಡೆದು ಕಾರಿನಲ್ಲಿ ಆಗುಂಬೆ ಕಡೆ ಪರಾರಿಯಾಗಿದ್ದ ಎನ್ನಲಾಗಿದೆ. ಈತನೊಂದಿಗೆ ಮತ್ತೋರ್ವ ಬಿಜೆಪಿ ಕಾರ್ಯಕರ್ತನೂ ಭಾಗಿಯಾಗಿದ್ದಾನೆಂದು ಹೇಳಲಾಗುತ್ತಿದ್ದು, ಬಿಜೆಪಿ ಕಾರ್ಯಕರ್ತರು ಕಳಸ ಭಾಗದ ವ್ಯಕ್ತಿಗೆ ಸೇರಿ ಕಾರೊಂದನ್ನು ಪಡೆದು ಕಾರಿನಲ್ಲಿ ಕಿರಣ್‍ನನ್ನು ಬೇರೆಡೆಗೆ ಪರಾರಿಯಾಗಲು ಸಹಕಾರ ನೀಡಿದ್ದರೆನ್ನಲಾಗುತ್ತಿದೆ. ಸದ್ಯ ಈ ಕಾರು ನಾಪತ್ತೆಯಾಗಿದೆ. ಈ ಸಂಬಂಧ ಹೆಮ್ಮಕ್ಕಿ ಗ್ರಾಮದ ಪ್ರಭಾವಿ ಬಿಜೆಪಿ ಮುಖಂಡರು ಹಾಗೂ ಕೆಲವು ಬಿಜೆಪಿ ಜನಪ್ರತಿನಿಧಿಗಳು ತಮ್ಮ ಪಕ್ಷದ ಕಾರ್ಯಕರ್ತರ ಪರ ಬ್ಯಾಟಿಂಗ್ ಮಾಡಿದ್ದು, ಪ್ರಕರಣವನ್ನು ಮುಚ್ಚಿ ಹಾಕಲು ಪೊಲೀಸರು ಹಾಗೂ ಚೇತನ್‍ಕುಮಾರ್ ಕುಟುಂಬಸ್ಥರ ಮೇಲೆ ಒತ್ತಡ ಹೇರಿದ್ದರೆಂದು ಆರೋಪಿಸಲಾಗಿದೆ.
ಕಿರಣ್ ಹಾಗೂ ತನ್ನ ಕುಟುಂಬಸ್ಥರ ನಡುವೆ ಜಾಗ ಖರೀದಿ ಸಂಬಂಧ ಮಾತುಕತೆ ನಡೆದಿದ್ದು, ನಂತರ ಈ ವ್ಯವಹಾರ ಅರ್ಧಕ್ಕೆ ನಿಂತಿತ್ತು. ಈ ಸಂಬಂಧ ಕಿರಣ್ ನಮ್ಮ ವಿರುದ್ಧ ವೈಮನಸ್ಸು ಬೆಳೆಸಿಕೊಂಡಿದ್ದ. ಇತ್ತೀಚೆಗೆ ಕ್ರಿಕೆಟ್ ಪಂದ್ಯಾವಳಿ ಸಂದರ್ಭ ನಡೆದ ಗಲಾಟೆಯಲ್ಲಿ ಜಗಳ ಬಿಡಿಸಲು ನಾವು ಹೋಗಿದ್ದೆವು. ಈ ಸಂದರ್ಭ ಕಿರಣ್ ನನ್ನ ಮೇಲೆ ಜಗಳಕ್ಕೆ ಬಂದಿದ್ದ. ಈ ವಿಚಾರ ಸಂಬಂಧ ತನ್ನ ಕುಟುಂಬಸ್ಥರ ವಿರುದ್ಧ ಧ್ವೇಷ ಸಾಧಿಸಿದ್ದಾನೆ. ಫೇಸ್‍ಬುಕ್, ವಾಟ್ಸಪ್ ಗಳಲ್ಲಿ ಅವಾಚ್ಯ ಶಬ್ಧ ಬಳಸಿ ಪೋಸ್ಟ್, ಕಮೆಂಟ್ ಹಾಕಿದ್ದ. ನಾವು ಇದನ್ನು ಪ್ರಶ್ನಿಸಿದಾಗ ಕೊಲೆ ಬೆದರಿಕೆ ಹಾಕಿದ್ದ. ಆದರೆ ನಾವು ಕೊಲೆ ಮಾಡುವಷ್ಟು ಮುಂದುವರಿಯುತ್ತಾನೆಂದು ಊಹೆ ಮಾಡಿರಲಿಲ್ಲ ಎಂದು ಮನೆ ಮಾಲಕ ಚೇತನ್ ಕುಮಾರ್ ತಿಳಿಸಿದ್ದಾರೆ.
ಕಳೆದ ಶುಕ್ರವಾರ ರಾತ್ರಿ ನಮ್ಮ ಮನೆಯ ಮೇಲೆ ಮನಬಂದಂತೆ ಗುಂಡು ಹಾರಿಸಿ ಕೊಲೆ ಮಾಡಲು ಯತ್ನಿಸಿದ್ದಾನೆ. ನಾವು ಮನೆ ಬಾಗಿಲು ತೆರೆಯದಿದ್ದಾಗ ಮನೆ ಮೇಲೆ ಗುಂಡು ಹಾರಿಸಿದ್ದಾನೆ. ಮನೆಯ ಬಳಿ ಇದ್ದ ಕಾರಿಗೂ ಗುಂಡು ಹಾರಿಸಿದ್ದಾನೆ. ಮನೆ ಬಾಗಿಲಿಗೆ ಹೊಡೆದ ಗುಂಡೊಂದು ಮನೆಯ ಹಿಂಬದಿಯಿಂದ ಹೊರ ಹೋಗಿದೆ. ಅಂದು ಮನೆಯಲ್ಲಿ ನಮ್ಮ ಮನೆಯ ಎಲ್ಲ ಸದಸ್ಯರೂ ಇದ್ದೆವು. ನಾವು ಸ್ಪಲ್ಪ ಯಾಮಾರಿದ್ದರೂ ಮನೆಯಲ್ಲಿ ಐದು ಹೆಣ ಬೀಳುತ್ತಿತ್ತು. ಮಲ್ಲಂದುರೂ ಪೊಲೀಸರಿಗೆ ದೂರು ನೀಡಿದ್ದೇವೆ. ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಮನೆಯ ಮೇಲೆ ಗುಂಡು ಹಾರಿಸುವುದನ್ನು ಸಿನಿಮಾದಲ್ಲಿ ನೋಡಿದ್ದೆವು. ಈಗ ಕಣ್ಣೆದುರೇ ನಡೆದಿರುವುದರಿಂದ ನಮ್ಮ ಮನೆಯವರು ಮಾನಸಿಕವಾಗಿ ಕುಗ್ಗಿದ್ದಾರೆ. ಶಾಕ್‍ನಿಂದ ಇನ್ನೂ ಹೊರ ಬಂದಿಲ್ಲ. ಈ ಕೃತ್ಯ ಎಸಗಿದ ಕಿರಣ್ ವಿರುದ್ಧ ಪೊಲೀಸರು ಕಠಿಣ ಕಾನೂನು ಕ್ರಮವಹಿಸಬೇಕು ಎಂದು ಚೇತನ್ ಕುಮಾರ್ ಒತ್ತಾಯಿಸಿದ್ದಾರೆ.
ಹೆಡದಾಳು ಗ್ರಾಮದ ಕಿರಣ್ ಕುಮಾರ್ ಎಂಬಾತ ಅದೇ ಗ್ರಾಮದ ಮಂಜುನಾಥ್‍ಗೌಡ ಎಂಬವರ ಮನೆ ಮೇಲೆ ಬಂದೂಕಿನಿಂದ ಗುಂಡಿನ ದಾಳಿ ನಡೆಸಿದ್ದ. ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ. ಮನೆಯಲ್ಲಿದ್ದವರು ಎಚ್ಚರ ತಪ್ಪಿದ್ದರೆ 5 ಹೆಣ ಬೀಳುತ್ತಿತ್ತು. ಪ್ರಕರಣದಲ್ಲಿ ಹೆಡದಾಳು ಗ್ರಾಮದ ಕಿರಣ್, ಹೆಮ್ಮಕ್ಕಿಯ ಲೋಹಿತ್ ಎಂಬವರನ್ನು ಬಂಧಿಸಲಾಗಿದೆ. ಬಂದೂಕಿನ ಮಾಲಕ ನಾಗೇಶ್‍ಗೌಡ ತಲೆ ಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಿದ್ದೇವೆ.
- ಪ್ರಭು, ಡಿವೈಎಸ್ಪಿ, ಚಿಕ್ಕಮಗಳೂರು