ಡಿಸಿ ಆಗಿದ್ದಾಗ ಭೂ ಅಕ್ರಮದ ಬಗ್ಗೆ ಧ್ವನಿ ಎತ್ತದೆ ವರ್ಗಾವಣೆ ಬಳಿಕ ಆರೋಪ ಮಾಡುವುದೇಕೆ ?: ಸಾ.ರಾ.ಮಹೇಶ್
ಮೈಸೂರು, ಜೂ.9: ಮೈಸೂರಿನ ಹಲವು ರಾಜಕಾರಣಿಗಳ ಮೇಲೆ ಭೂ ಅಕ್ರಮದ ಆರೋಪ ಹೊರಿಸಿರುವ ನಿರ್ಗಮಿತ ಜಿಲ್ಲಾಧಿಕಾರಿ ಮುಖ್ಯಮಂತ್ರಿಗಳಿಗೆ ವರದಿ ಕೊಟ್ಟು ಬಹಿರಂಗಪಡಿಸಲಿ ಎಂದು ಶಾಸಕ ಸಾ.ರಾ.ಮಹೇಶ್ ವಾಗ್ದಾಳಿ ನಡೆಸಿದರು.
ನಗರದ ಅವರ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರೋಹಿಣಿ ಸಿಂಧೂರಿ ಮೈಸೂರಿನಲ್ಲಿ ಕಳೆದ 8 ತಿಂಗಳುಗಳಿಂದ ಜಿಲ್ಲಾಧಿಕಾರಿಗಳಾಗಿದ್ದರು. ಆಗ ಭೂ ಅಕ್ರಮದ ಬಗ್ಗೆ ಧ್ವನಿ ಎತ್ತದವರು ವರ್ಗಾವಣೆ ನಂತರ ಆರೋಪ ಮಾಡುತ್ತಿರುವುದು ಏಕೆ? ಒಂದು ವೇಳೆ ಭೂ ಒತ್ತುವರಿ ಆಗಿದ್ದರೆ ಬಹಿರಂಗಪಡಿಸಲಿ ಎಂದು ಆಗ್ರಹಿಸಿದರು.
ಆಂಧ್ರದ ಐಎಎಸ್ ಅಧಿಕಾರಿಗಳ ಲಾಬಿಯಿಂದ ಓರ್ವ ದಲಿತ ಐಎಎಸ್ ಅಧಿಕಾರಿಯನ್ನು ಕೇವಲ 28 ದಿನಗಳಲ್ಲಿ ವರ್ಗಾವಣೆ ಮಾಡಿಸಿದಿರಿ. ನಿಮ್ಮ ದರ್ಪ, ಅಹಂಕಾರದಿಂದ ಚಾಮರಾಜನಗರದಲ್ಲಿ ಆಕ್ಸಿಜನ್ ಸಿಗದೆ 28 ಜನ ಅಮಾಯಕರು ಬಲಿಯಾದರು. ಸರ್ಕಾರ ಇವರನ್ನು ವರ್ಗಾವಣೆ ಮಾಡದೆ ಸೇವೆಯಿಂದಲೇ ವಜಾಗೊಳಿಸಬೇಕಿತ್ತು ಎಂದು ಹೇಳಿದರು.
ರಾಜ್ಯದ ಸಿಎಂ, ಮುಖ್ಯ ಕಾರ್ಯದರ್ಶಿಗಳ ಮನೆಯಲ್ಲೇ ಈಜುಕೊಳ ಇಲ್ಲ, ಇವರು ಸರ್ಕಾರದ 28 ಲಕ್ಷ ರೂ.ನಲ್ಲಿ ಈಜುಕೊಳ ನಿರ್ಮಾಣ ಮಾಡಿಕೊಂಡಿದ್ದಾರೆ. ಹಾಗಾಗಿ ಇವರ ಮನೆಯ ತಿಂಗಳ ವಿದ್ಯುತ್ ಬಿಲ್ 50 ಸಾವಿರ ಬಂದಿದೆ. ಮುಖ್ಯಮಂತ್ರಿಗಳ ಮನೆಯಲ್ಲೂ ಇಷ್ಟೊಂದು ದೊಡ್ಡ ಮೊತ್ತದ ವಿದ್ಯುತ್ ಬಿಲ್ ಬರುವುದಿಲ್ಲ ಎಂದು ಆರೋಪಿಸಿದರು.
ಇವರ ಮೇಲೆ ಆರೋಪಗಳು ಬರುತ್ತಿದ್ದಂತೆ ಸಾಮಾಜಿಕ ಕಾರ್ಯಕರ್ತನೊಬ್ಬನನ್ನು ಮುಂದಿಟ್ಟುಕೊಂಡು ಭೂ ಅಕ್ರಮದ ಹೆಸರಿನಲ್ಲಿ ಜಿಲ್ಲೆಯ ಹಲವು ರಾಜಕಾರಣಿಗಳನ್ನು ಹೆದರಿಸುವ ಕೆಲಸವನ್ನು ಮಾಡಿದರು. ಆದರೆ ಅದೆಲ್ಲಾ ನಡೆಯಲಿಲ್ಲ, ಮೈಸೂರಿನ ಜನ ಪ್ರಮಾಣಿಕತೆಗೆ ಹೆಸರು ವಾಸಿಯಾಗಿದ್ದಾರೆ. ಅಕ್ರಮ ನಡೆದಿದ್ದರೆ ಇವರೇ ತೆರವುಗೊಳಿಸಬೇಕಿತ್ತು. ಅದು ಬಿಟ್ಟು ಜನರ ಬಳಿ ಸಿಂಪತಿ ಗಿಟ್ಟಿಸುವ ಪ್ರಯತ್ನ ಮಾಡಿದರು. ಇವರೊಬ್ಬ ಸಿಂಗಮ್ ಅಲ್ಲ, ಸಿಂಗಲೀಕ ಅಧಿಕಾರಿ ಎಂದು ಕಿಡಿಕಾರಿದರು.
ಇವರು ಮಹಾನ್ ಸಾಧನೆ ಮಾಡಿದ್ದಾರೆ ಎಂದು ಸಿನಿಮಾ ಮಾಡಲು ಹೊರಟಿದ್ದಾರೆ. ಆ ಸಿನಿಮಾ ಹೊರ ಬರಲಿ. ಇವರು ರೈತನೊಬ್ಬನ ಐಎಎಸ್ ಅಧಿಕಾರಿ ಮಗನಿಗೆ 2015ರಲ್ಲಿ ಏನು ಮಾಡಿದರು ಎಂಬ ಸಿಬಿಐ ವರದಿಯ ಚಿತ್ರವನ್ನು ನಾವು ಜನತೆಗೆ ತೋರಿಸುತ್ತೇವೆ ಎಂದು ಹೇಳಿದರು. ನಾನು ಇವರು ಮೈಸೂರು ಜಿಲ್ಲಾಧಿಕಾರಿಯಾಗಿ ಬಂದ ದಿನದಿಂದಲೂ ವಿರೋಧ ಮಾಡುತ್ತಿದ್ದೇನೆ. ಈಕೆ ಮೈಸೂರು ಜಿಲ್ಲಾಧಿಕಾರಿಯಾಗಿ ಬರದಿದ್ದರೆ ಒಂದು ಸಾವಿರ ಮಂದಿ ಬದುಕುತ್ತಿದ್ದರು ಎಂದು ಹೇಳಿದರು.
ಚಾಮರಾಜನಗರದ ಕೋವಿಡ್-19 ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೆ 28 ಜನ ಸಾವನ್ನಪ್ಪಿದ ಘಟನೆಗೆ ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಯ ಇಬ್ಬರು ಜಿಲ್ಲಾಧಿಕಾರಿಗಳನ್ನು ಅಮಾನತುಗೊಳಿಸಬೇಕಿತ್ತು. ಆದರೆ ಸರ್ಕಾರ ಇವರನ್ನು ಅಧಿಕಾರಿಗಳಾಗಿ ಮುಂದುವರೆಸಿದ್ದರಿಂದ ತನಿಖಾ ವರದಿ ಧಿಕ್ಕು ತಪ್ಪಿತು ಎಂದು ಗಂಭೀರ ಆರೋಪ ಮಾಡಿದರು.
ಅಮಾಯಕ ಜನರ ಸಾವಿಗೆ ಎರಡು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಕಾರಣರಾಗಿರುವುದು ಮೇಲ್ನೋಟಕ್ಕೆ ತಿಳಿಯುತ್ತಿದೆ. ಸರ್ಕಾರ ತನಿಖೆಗೂ ಮೊದಲು ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಬೇಕಿತ್ತು. ಆದರೆ ಮೈಸೂರು ಜಿಲ್ಲಾಧಿಕಾರಿ ವರ್ಗವಾದ ನಂತರ ಅವರು ಡ್ರಗ್ ಕಂಟ್ರೋಲರ್ ಗೆ ಡಿಸ್ಮಿಸ್ ಮಾಡುವುದಾಗಿ ಹೇಳಿರುವ ಆಡಿಯೋ ಬಿಡುಗಡೆಗೊಳಿಸಲಾಗಿದೆ ಎಂದು ಹೇಳಿದರು.