×
Ad

ಪರಿಸರ ದಿನದ ಅಂಗವಾಗಿ ಸಾಲುಮರದ ತಿಮ್ಮಕ್ಕರೊಂದಿಗೆ ಸಾಗರೋತ್ತರ ಕನ್ನಡಿಗರಿಂದ ಸಂವಾದ

Update: 2021-06-09 15:24 IST

ಲಂಡನ್, ಜೂ.9: ಜಾಗತಿಕ ಪರಿಸರ ದಿನದ ಅಂಗವಾಗಿ ಹಿರಿಯ ಪರಿಸರವಾದಿ, ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ ಅವರೊಂದಿಗೆ ಸಾಗರೋತ್ತರ ಕನ್ನಡಿಗರು ಸಂವಾದ ಕಾರ್ಯಕ್ರಮ ನಡೆಸಿದರು. 

ಕಾರ್ಯಕ್ರಮದಲ್ಲಿ ಸಾಲುಮರದ ತಿಮ್ಮಕ್ಕ ಸಾಗರೋತ್ತರ ಕನ್ನಡಿಗರನ್ನ ಉದ್ದೇಶಿಸಿ ಮಾತನಾಡಿ, ತಾವು ಹಾಗೂ ತಮ್ಮ ಪತಿ ಮಾಡಿದ ಶ್ರಮವನ್ನ ಎಳೆ ಎಳೆಯಾಗಿ ವಿವರಿಸಿದರು.

'ಸತಿ ಪತಿಗಳೊಂದಾಗಿ ದೇಶಕ್ಕೆ ಒಳ್ಳೆಯದು ಮಾಡಿ. ನಿಮಗೆ ಎಲ್ಲ ಭಾಗ್ಯ ಸಿಗಲಿ ಎಂದು ಪಾರ್ವತಿ ಪರಮೇಶ್ವರನಲ್ಲಿ ಬೇಡಿಕೊಳ್ಳುತ್ತೇನೆ ಎಂದರು. ನನಗೆ ಅನೇಕ ಪ್ರಶಸ್ತಿಗಳು ಪುರಸ್ಕಾರಗಳು ಸಿಕ್ಕಿವೆ. ಅವುಗಳನ್ನು ಇಡಲು ಜಾಗ ಇಲ್ಲ. ಸಾಗರೋತ್ತರ ಕನ್ನಡಿಗರೆಲ್ಲಾ ಸೇರಿ ಒಂದು ಮ್ಯೂಸಿಯಮ್ ಕಟ್ಟಿಸಿ ಅಂದರು. ಇದಕ್ಕೆ ಸಾಗರೋತ್ತರ ಕನ್ನಡಿಗರು ಸಹಮತ ವ್ಯಕ್ತಪಡಿಸಿದರು. ಸಾಗರೋತ್ತರ ಕನ್ನಡಿಗರ ಸಂಘದ ಜಂಟಿ ಕಾರ್ಯದರ್ಶಿ ರವಿ ಮಹಾದೇವ ಅವರು 'ನಮ್ಮ ಸಂಘದಲ್ಲಿ ಚರ್ಚಿಸಿ ಪೂರಕವಾದ ಕೆಲಸ ಮಾಡಲು ಪ್ರಯತ್ನ ಮಾಡುತ್ತೇವೆ' ಎಂದು ಹೇಳಿದರು.

ಬಳಿಕ, ಸಾಗರೋತ್ತರ ಕನ್ನಡಿಗರ ಸಂಘದಿಂದ ಯುವ ಪರಿಸರವಾದಿ ವಿನೋದ ಕರ್ತವ್ಯ ಅವರಿಗೆ ಪ್ರಶಸ್ತಿ ಪತ್ರ ಮಾಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಭಾರತ ಸರ್ಕಾರದ ಅರಣ್ಯ ಮತ್ತು ಪರಿಸರ ಇಲಾಖೆಯ ನಿರ್ದೇಶಕ ಡಾ.ಎಸ್ ಗೌರಿ ಶಂಕರ್ ಅವರು, ಸಾಲುಮರದ ತಿಮ್ಮಕ್ಕನವರ ಸಾಧನೆಯ ಬಗ್ಗೆ ಮಾತನಾಡುತ್ತಾ 'ಅವರ ಕಾಯಕ ನನಗೆ ಚಿರಪರಿಚಿತ, ಇಂತಹ ಅಮ್ಮನ ಉಪಸ್ಥಿತಿಯಲ್ಲಿ ನಾನು ಭಾಗವಹಿಸಿದ್ದು ನನ್ನ ಭಾಗ್ಯ ಮತ್ತು ಅವರಲ್ಲಿ ನನ್ನ ಅಮ್ಮನನ್ನು ಕಾಣುತ್ತಿದ್ದೇನೆ ಎಂದು ಹೇಳಿದರು.

ಅನೇಕ ದೇಶಗಳಲ್ಲಿ ವಾಸವಿರುವ ಸಾಗರೋತ್ತರ ಕನ್ನಡಿಗರು ಸಂವಾದದಲ್ಲಿ ಭಾಗವಹಿಸಿ ಡಾ.ಎಸ್ ಗೌರಿಶಂಕರ ಅವರಲ್ಲಿ ತಮಗಿರುವ ಪರಿಸರ ಕಾಳಜಿ, ಸರಕಾರದ ನೀತಿಗಳು, ಮತ್ತು ಸಲಹೆಗಳನ್ನ ಮುಕ್ತವಾಗಿ ಹಂಚಿಕೊಂಡರು. ಹಾಗೆಯೇ, ಸಾಗರೋತ್ತರ ಕನ್ನಡಿಗರು ಸಂಘದ ಕಾರ್ಯಕ್ರಮಗಳ ಬಗ್ಗೆ ಮುಕ್ತ ಕಂಠದಿಂದ ಶ್ಲಾಘಿಸಿ 'ಇನ್ನಷ್ಟು ಜನ ಭಾಗವಹಿಸಿಬೇಕು, ಇಂತಹ ಜನ ಪರ ವಿಚಾರಗಳು ಹೆಚ್ಚು ಹೆಚ್ಚು ಜನರಿಗೆ ಮುಟ್ಟಿಸಬೇಕು, ನಾಗರಿಕ ಪ್ರಜ್ಞೆ ಬೆಳೆಸಬೇಕು' ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಾಗರೋತ್ತರ ಕನ್ನಡಿಗರ ಸಂಘದ ಜಂಟಿ ಕಾರ್ಯದರ್ಶಿ ರವಿ ಮಹಾದೇವ, ಸಾಲುಮರದ ತಿಮ್ಮಕ್ಕನವರ ಮಾನಸ ಪುತ್ರ ಉಮೇಶ ಅವರ ಸಹಾಯದ ಬಗ್ಗೆ ಕೊಂಡಾಡಿದರು. ಬಳಿಕ ದೊರೆಸ್ವಾಮಿ ಸಿದ್ದಿಗೌಡ ರಚಿಸಿದ ಕವನವನ್ನು ಸಾಲುಮರದ ತಿಮ್ಮಕ್ಕ ಓದಿ ನುಡಿ ನಮನ ಅರ್ಪಿಸಿದರು.

ಸಾಗರೋತ್ತರ ಕನ್ನಡಿಗರ ಸಂಘದ ಖಜಾಂಜಿ ಬಸವ ಪಾಟೀಲ್‌ ಪ್ರಾಸ್ತಾವಿಕ ಮಾತನಾಡಿದರು. ಸಾಗರೋತ್ತರ ಕನ್ನಡಿಗರ ಸಂಘದ ಉಪಾಧ್ಯಕ್ಷ ಗೋಪಾಲ ಕುಲಕರ್ಣಿ ಅವರು ಪ್ರಶಸ್ತಿ ಪುರಸ್ಕೃತ ವಿನೋದ ಕರ್ತವ್ಯ ಅವರ ಬಗ್ಗೆ ಪರಿಚಯ ಮಾಡಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಸಿಕೊಟ್ಟರು.

ಸಾಗರೋತ್ತರ ಕನ್ನಡಿಗರ ಸಂಘದ ಅಧ್ಯಕ್ಷ ಚಂದ್ರಶೇಖರ್‌ ಲಿಂಗದಳ್ಳಿ ಅವರು ಡಾ.ಎಸ್ ಗೌರಿಶಂಕರ್ ಅವರನ್ನು ಸಂವಾದಕ್ಕೆ ಆಮಂತ್ರಿಸಿದರು. ಸಾಗರೋತ್ತರ ಕನ್ನಡಿಗರ ಸಂಘದ ಸಂಘಟನಾ ಕಾರ್ಯದರ್ಶಿ ಹೇಮೇಗೌಡ ಮಧು ಅವರು ಅನೇಕ ದೇಶಗಳಲ್ಲಿ ವಾಸವಿರುವ ಸಾಗರೋತ್ತರ ಕನ್ನಡಿಗರನ್ನ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News