ಶಿವಮೊಗ್ಗದಲ್ಲಿ ಪೆಟ್ರೋಲ್ ಗೆ 100 ರೂ.: ಡಿಸಿ ಕಚೇರಿ ಎದುರು ಅಣಕು ಪ್ರದರ್ಶನದ ಮೂಲಕ ಯುವ ಕಾಂಗ್ರೆಸ್ ಪ್ರತಿಭಟನೆ

Update: 2021-06-09 12:25 GMT

ಶಿವಮೊಗ್ಗ, ಜೂ.9: ತೈಲ ಬೆಲೆ ಏರಿಕೆ ಖಂಡಿಸಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಕ್ರಿಕೆಟ್ ಶತಕ ಬಾರಿಸುವ ಅಣಕು ಪ್ರದರ್ಶನದ ಮೂಲಕ ಪ್ರತಿಭಟನೆ ನಡೆಸಿದರು.

ಕೇಂದ್ರ ಸರ್ಕಾರ ಕೊರೋನ ಸಂಕಷ್ಟದ ನಡುವೆಯೂ ತೈಲ ಬೆಲೆಯನನ್ನು ಏರಿಸುವ ಮೂಲಕ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಿದೆ. ಅಚ್ಛೇ ದಿನಗಳ ಭರಸವೆ ಹುಸಿಯಾಗಿದೆ. ತೈಲ ಬೆಲೆ ಇಳಿಕೆಯಾಗಲಿದೆ ಎಂಬ ಜನ ನಂಬಿಕೆ ಹೊರಟು ಹೋಗಿದೆ. ನಿರಂತರವಾಗಿ ಬೆಲೆ ಏರಿಕೆಯಾಗಿ ಈಗ ಪೆಟ್ರೋಲ್ ಲೀಟರ್ ಗೆ 100 ರೂ. ದಾಟಿದೆ ಎಂದು ಪ್ರತಿಭಟನಾಕಾರರು ದೂರಿದರು.

ಯುಪಿಎ ಸರ್ಕಾರ ಇದ್ದಾಗ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 75 ಮತ್ತು ಡೀಸೆಲ್ ಬೆಲೆ 64 ರೂ. ಇತ್ತು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಇಳಿದಾಗಲೂ ಕೂಡ ಕೇಂದ್ರ ಸರ್ಕಾರ ಅವೈಜ್ಞಾನಿಕವಾಗಿ ತೈಲ ಬೆಲೆ ಏರಿಸಿದೆ. ಇದರಿಂದ ಅಗತ್ಯ ವಸ್ತುಗಳ ಬೆಲೆಯೂ ಗಗನಕ್ಕೇರಿದೆ. ಕೂಡಲೇ ಸರ್ಕಾರ ತೈಲ ಬೆಲೆ ಇಳಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಮುಖಂಡ ಸಿ.ಜಿ. ಮಧುಸೂದನ್, ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಕೆ. ಚೇತನ್, ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ವಿನಯ್ ಹಾಗೂ ಪ್ರಮುಖರಾದ ಗಿರೀಶ್, ಮೊಹಮ್ಮದ್ ನಿಹಾಲ್, ಬಾಲಾಜಿ, ವಿಜಯ್, ಚಂದೋಜಿರಾವ್, ಅಬ್ದುಲ್ ಸತ್ತಾರ್ ಮುಂತಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News