ಚಾತುವರ್ಣ ಜಾತಿ ಪದ್ಧತಿಯಿಂದ ದೇಶ ಹಾಳು: ಪ್ರೊ.ಎಸ್.ಜಿ.ಸಿದ್ದರಾಮಯ್ಯ

Update: 2021-06-09 12:30 GMT

ಬೆಂಗಳೂರು, ಜೂ. 9: ದೇಶದಲ್ಲಿ ಬೇರು ಬಿಟ್ಟಿರುವ ಚಾತುವರ್ಣ ಜಾತಿ ಪದ್ಧತಿ ಗೆದ್ದಲು ಉಳುವಿನಂತೆ ಇಡೀ ದೇಶವನ್ನೇ ಹಾಳು ಮಾಡುತ್ತಿದೆ ಎಂದು ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.

ಬುಧವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ದಲಿತ ಚೇತನ ಪ್ರೊ.ಬಿ.ಕೃಷ್ಣಪ್ಪರವರ 84ನೇ ಜನ್ಮದಿನದ ಅಂಗವಾಗಿ ಅಸಮಾನತೆ ಮುಕ್ತ-ಸೌಹಾರ್ದ ಭಾರತಕ್ಕಾಗಿ ಸಂಕಲ್ಪದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಜಾತಿ ಮುಕ್ತ ಬಹುತ್ವ ಭಾರತ ನಿರ್ಮಾಣ ಮಾಡಲು ನೈತಿಕ ಎಚ್ಚರ ಇರಬೇಕು ಹಾಗೂ ಅಂಬೇಡ್ಕರ್ ಚಿಂತನೆಗಳನ್ನು ಆಳವಾಗಿ ಅಳವಡಿಸಿಕೊಳ್ಳಬೇಕು. ಆದರೆ, ಕೆಲ ಅಕ್ಷರಸ್ಥರು ವ್ಯವಸ್ತೆಯ ಪರವಾಗಿದ್ದುಕೊಂಡು ಚಳವಳಿಗಳನ್ನು ನಾಶ ಮಾಡುತ್ತಿದ್ದಾರೆಂದು ಅವರು ತಿಳಿಸಿದ್ದಾರೆ.

ಪ್ರಜಾಪ್ರಭುತ್ವ ಮೌಲ್ಯಗಳನ್ನು ಸಂರಕ್ಷಿಸುವ ಕಡೆಗೆ ನಾವೆಲ್ಲರೂ ಒಗ್ಗೂಡಿ ಶ್ರಮಿಸಬೇಕಿದೆ. ಈ ನಿಟ್ಟಿನಲ್ಲಿ ದಲಿತ ಸಂಷರ್ಷ ಸಮಿತಿಯ ಸ್ಥಾಪಕ ಪ್ರೊ.ಬಿ.ಕೃಷ್ಣಪ್ಪರವರ ದೂರದರ್ಶಿತ್ವ ನಮಗೆ ಮಾದರಿಯಾಗಲಿ ಎಂದು ಅವರು ಆಶಿಸಿದ್ದಾರೆ.

ದಸಂಸ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ಪ್ರೊ.ಬಿ.ಕೆ.ಕೃಷ್ಣಪ್ಪ ಇಡೀ ಜೀವನ ಹೋರಾಟ ಮತ್ತು ಸಂಘರ್ಷದಿಂದ ಕೂಡಿತ್ತು. ಅವರ ಚಿಂತನೆ ಮತ್ತು ಹೋರಾಟದ ಮಾರ್ಗವನ್ನು ನಾವು ಅಳವಡಿಸಿಕೊಳ್ಳಬೇಕೆಂದು ತಿಳಿಸಿದ್ದಾರೆ.

ಸಂವಿಧಾನವನ್ನು ಉಳಿಸಿಕೊಳ್ಳುವಂತಹ ದೊಡ್ಡ ಸವಾಲು ನಮ್ಮ ಮುಂದಿದೆ. ನ್ಯಾಯಾಲಯಗಳ ತೀರ್ಪು ಸಹ ಇಂದು ಆತಂಕಕಾರಿಯಾಗಿದೆ. ಇಂತಹ ಆತಂಕದ ಸಂದರ್ಭದಲ್ಲಿ ದಸಂಸ ಕಾರ್ಯಕರ್ತರು ಪ್ರೊ.ಕೃಷ್ಣಪ್ಪ ಸೇರಿದಂತೆ ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆಯೋಣವೆಂದು ಅವರು ತಿಳಿಸಿದ್ದಾರೆ.

ಈ ವೇಳೆ ಇಂದಿರಾ ಕೃಷ್ಣಪ್ಪ, ರುದ್ರಪ್ಪ ಹನಗವಾಡಿ ಸೇರಿದಂತೆ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News