ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ: ಎಡಪಕ್ಷಗಳ ನೇತೃತ್ವದಲ್ಲಿ ಜೂ.15ಕ್ಕೆ ರಾಜ್ಯಾದ್ಯಂತ ಪ್ರತಿಭಟನೆ
ಬೆಂಗಳೂರು, ಜೂ. 9: ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ಬಡ ಕುಟುಂಬಗಳಿಗೆ ಹತ್ತು ಸಾವಿರ ರೂ.ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜೂ.15ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿವಾಸ, ಉಸ್ತುವಾರಿ ಸಚಿವರ ನಿವಾಸ ಹಾಗೂ ಎಲ್ಲ ಶಾಸಕರ ಮನೆ ಮುಂಭಾಗ ಎಡಪಕ್ಷಗಳ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಯು.ಬಸವರಾಜು ತಿಳಿಸಿದ್ದಾರೆ.
ಬುಧವಾರ ಆನ್‍ಲೈನ್ ಮೂಲಕ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೋವಿಡ್ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ. ಹಾಗೂ ಅವೈಜ್ಞಾನಿಕವಾಗಿ ಲಾಕ್‍ಡೌನ್‍ನ್ನು ಜನತೆಯ ಮೇಲೆ ಹೇರಲಾಗಿದೆ. ಇದರಿಂದ ಪರಿತಪಿಸುತ್ತಿರುವ ಬಡ ಜನತೆಗೆ ಸೂಕ್ತ ಪರಿಹಾರ ನೀಡವಂತೆ ನಿರಂತರವಾಗಿ ಮನವಿ ಮಾಡಿಕೊಳ್ಳಲಾಗಿದ್ದರೂ ನಿರ್ಲಕ್ಷ್ಯ ಮಾಡುತ್ತಾ ಬರಲಾಗಿದೆ ಎಂದು ಆರೋಪಿಸಿದ್ದಾರೆ.
ಕೋವಿಡ್ ಎರಡನೇ ಅಲೆಯನ್ನು ನಿಭಾಯಿಸುವಲ್ಲಿ ರಾಜ್ಯ ಸರಕಾರದ ವೈಫಲ್ಯದಿಂದಾಗಿ ರಾಜ್ಯದ ಬಡಜನತೆ ಸಂಪೂರ್ಣವಾಗಿ ನೆಲಕಚ್ಚಿದ್ದಾರೆ. ಈಗ ಕೋವಿಡ್ ಮೂರನೇ ಅಲೆಯ ಆತಂಕವೂ ಎದುರಾಗಿದೆ. ಹೀಗಾಗಿ ರಾಜ್ಯ ಹಾಗೂ ಕೇಂದ್ರ ಸರಕಾರ ರಾಜ್ಯದ ಬಡ ಕುಟುಂಬಗಳಿಗೆ 10 ಸಾವಿರ ರೂ.ಪರಿಹಾರ ಧನ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸಬೇಕು. ಹಾಗೂ ಕೋವಿಡ್ ಮೂರನೇ ಅಲೆಯನ್ನು ಸಮಪರ್ಕವಾಗಿ ನಿಭಾಯಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿ ಜೂ.15ರಂದು ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಿಪಿಐ ಮುಖಂಡ ಸಾತಿ ಸುಂದರೇಶ್ ಮಾತನಾಡಿ, ಕೋವಿಡ್‍ನಿಂದಾಗಿ ರಾಜ್ಯದ ಕೃಷಿ ಕೂಲಿಗಾರರು, ಆದಿವಾಸಿಗಳು ಬದುಕನ್ನು ಕಟ್ಟಿಕೊಳ್ಳಲು ಸಂಕಷ್ಟ ಅನುಭವಿಸುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರ ಮಾತ್ರ ಈ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ತೋರುತ್ತಿದೆ ಎಂದು ಟೀಕಿಸಿದ್ದಾರೆ.
ಕರ್ನಾಟಕ ಸರಕಾರದ ವಾರ್ಷಿಕ ಬಜೆಟ್ ಎರಡು ಲಕ್ಷ ಕೋಟಿ ರೂ.ಗೂ ಹೆಚ್ಚು ಇದೆ. ಇಷ್ಟು ಹಣದಲ್ಲಿ ಕೋವಿಡ್ ಪರಿಹಾರ ನೀಡುವಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೀನಾಮೇಷ ಎಣಿಸುತ್ತಿದ್ದಾರೆ. ಆದರೆ, ಕೇಂದ್ರ ಸರಕಾರ ಕೋವಿಡ್‍ಗೆ 20 ಸಾವಿರ ಕೋಟಿರೂ. ಮೀಸಲಿಟ್ಟಿದ್ದಾರೆ. ಈ ಬಗ್ಗೆ ಕರ್ನಾಟಕ ಸರಕಾರ ಆದ್ಯತೆ ಮೇರೆಗೆ ಪರಿಗಣಿಸಬೇಕೆಂದು ಅವರು ತಿಳಿಸಿದ್ದಾರೆ.
ಎಸ್‍ಯುಸಿಐ ನಾಯಕಿ ಉಮಾ ಮಾತನಾಡಿ, ಕೋವಿಡ್ ವಿಷಯದಲ್ಲಿ ಪ್ರಧಾನಿ ಮೋದಿ ಸುಳ್ಳಿನ ಭರವಸೆ ನೀಡುತ್ತಿದ್ದಾರೆ. ವಾಸ್ತವದಲ್ಲಿ ಕೋವಿಡ್ ಲಸಿಕೆ ನೀಡುವಲ್ಲಿ, ಕೋವಿಡ್ ಪರಿಹಾರ ನೀಡುವಲ್ಲಿ ಸಂಪೂರ್ಣ ನಿರ್ಲಕ್ಷ್ಯ ತೋರಲಾಗುತ್ತಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶ್ರಮಿಕರಿಗೆ ಕೇವಲ ಎರಡು-ಮೂರು ಸಾವಿರ ರೂ. ನೀಡಿ ತೋರಿಕೆ ಪ್ರದರ್ಶನ ಮಾಡಲು ಹೊರಟ್ಟಿದ್ದಾರೆ. ಇದನ್ನು ಖಂಡಿಸಿ ಜೂ.15ರಂದು ಎಡಪಕ್ಷಗಳ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ನಾಡಿನ ಜನತೆ ಸಕ್ರೀಯವಾಗಿ ಪಾಲ್ಗೊಳ್ಳಬೇಕೆಂದು ತಿಳಿಸಿದ್ದಾರೆ.
ಈ ವೇಳೆ ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ ಶಿವಶಂಕರ್, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಮೋಹನ್‍ರಾಜ್, ಸಿಪಿಎಂನ ಬೆಂಗಳೂರು ದಕ್ಷಿಣ ಜಿಲ್ಲಾ ಕಾರ್ಯದರ್ಶಿ ಉಮೇಶ್ ಮತ್ತಿತರರಿದ್ದರು.
ಹಕ್ಕೋತ್ತಾಯಗಳು
-ಕೋವಿಡ್ ಸಂಕಷ್ಟದ ಹಿನ್ನೆಲೆಯಲ್ಲಿ ರಾಜ್ಯದ ಬಿಪಿಎಲ್ ಕಾರ್ಡ್‍ದಾರರಿಗೆ 10 ಸಾವಿರ ರೂ.ನೀಡಬೇಕು.
-ಕೋವಿಡ್ ವಾರಿಯರ್ಸ್ ಗೆ ಪಿಪಿಇ ಕಿಟ್ ಸೇರಿದಂತೆ ಅಗತ್ಯ ಸೌಲಭ್ಯ, ರಕ್ಷಣೆ ಒದಗಿಸಬೇಕು.
-ರಾಜ್ಯ ಸರಕಾರದ ಆಯವ್ಯಯದಲ್ಲಿ ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಾಗಿರುವ ಅನುದಾನವನ್ನು ದಲಿತ ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ ಹಾಕಬೇಕು.
-ಕೋವಿಡ್ ಮೂರನೇ ಅಲೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು.