×
Ad

ರವಿ ಚೆನ್ನಣ್ಣನವರ್ ಸೇರಿದಂತೆ ಹಲವು ಐಪಿಎಸ್ ಅಧಿಕಾರಿಗಳ ವರ್ಗಾವಣೆ

Update: 2021-06-09 18:23 IST
ರವಿ ಚೆನ್ನಣ್ಣನವರ್

ಬೆಂಗಳೂರು, ಜೂ. 9: ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಚೆನ್ನಣ್ಣನವರ್ ಸೇರಿದಂತೆ ಹಲವು ಐಪಿಎಸ್ ಅಧಿಕಾರಿಗಳನ್ನು ರಾಜ್ಯ ಸರಕಾರ ವರ್ಗಾವಣೆಗೊಳಿಸಿ ಬುಧವಾರ ಆದೇಶ ಹೊರಡಿಸಿದೆ.

ರವಿ ಚೆನ್ನಣ್ಣನವರ್ ಅವರನ್ನು ಬೆಂಗಳೂರು ಗ್ರಾಮಾಂತರ ಎಸ್ಪಿ ಹುದ್ದೆಯಿಂದ ವರ್ಗಾವಣೆಗೊಳಿಸಿ ಸಿಐಡಿ ವಿಭಾಗದ ಬೆಂಗಳೂರು ಎಸ್ಪಿಯಾಗಿ ನೇಮಿಸಲಾಗಿದೆ. ಉಡುಪಿಯ ಕರಾವಳಿ ಕಾವಲು ಪೊಲೀಸ್(ಸಿಎಸ್‍ಪಿ) ಎಸ್ಪಿ ಆರ್.ಚೇತನ್ ಅವರನ್ನು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕ ಮಾಡಲಾಗಿದೆ.

ಕೋಲಾರ ಜಿಲ್ಲಾ ಎಸ್ಪಿ ಕಾರ್ತಿಕ್ ರೆಡ್ಡಿ ಅವರನ್ನು ಬೆಂಗಳೂರು ಎಸ್ಪಿ(ವೈರ್‍ಲೆಸ್) ಆಗಿ, ಬೆಂಗಳೂರಿನ ಅಪರಾಧ ತನಿಖಾ ಇಲಾಖೆಯ ರಾಹುಲ್ ಕುಮಾರ್ ಶಹಾಪೂರ್ವದ್ ಅವರನ್ನು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ನೇಮಕ ಮಾಡಿದೆ.

ದಾವಣಗೆರೆ ಜಿಲ್ಲೆಯ ಎಸ್ಪಿ ಹನುಮಂತರಾಯ ಅವರನ್ನು ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ಇನ್ನು, ಮೈಸೂರು ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಆಗಿರುವ ಡಾ.ಎ.ಎನ್.ಪ್ರಕಾಶ್ ಗೌಡ ಅವರನ್ನು ಬೆಂಗಳೂರು ಆಂತರಿಕ ಭದ್ರತಾ ವಿಭಾಗಗಕ್ಕೆ ವರ್ಗಾವಣೆ ಮಾಡಲಾಗಿದೆ.

ಅದೇ ರೀತಿ, ಹಾವೇರಿ ಜಿಲ್ಲೆಯ ಎಸ್ಪಿ ಕೆ.ಜಿ.ದೇವರಾಜು ಅವರನ್ನು ಬೆಂಗಳೂರು ಸಿಐಡಿ ವಿಭಾಗದ ಎಸ್ಪಿಯಾಗಿ, ಮೈಸೂರಿನ ಎಸ್ಪಿ ಸಿ.ಬಿ.ರಿಷ್ಯಂತ್ ಅವರನ್ನು ದಾವಣಗೆರೆ ಜಿಲ್ಲೆ ಎಸ್ಪಿಯಾಗಿ ವರ್ಗಾಯಿಸಲಾಗಿದೆ. ಕಲಬುರ್ಗಿ ಜಿಲ್ಲೆಯ ಡಿಸಿಪಿ ಡಿ.ಕಿಶೋರ್ ಬಾಬು ಅವರು ಕೋಲಾರ ಜಿಲ್ಲೆಯ ಎಸ್ಪಿಯಾಗಿ ವರ್ಗಾವಣೆಗೊಂಡಿದ್ದಾರೆ.

ತುಮಕೂರಿನ ಎಸ್ಪಿ ಡಾ.ಕೆ.ವಂಶಿ ಕೃಷ್ಣಾ ಅವರನ್ನು ಬೆಂಗಳೂರು ಗ್ರಾಮಾಂತರ ಎಸ್ಪಿಯಾಗಿ, ಬೆಂಗಳೂರಿನ ಆಂತರಿಕ ಭದ್ರತಾ ಇಲಾಖೆಯ ಎಸ್ಪಿ ಪ್ರದೀಪ್ ಗುಂಟಿ ಅವರನ್ನು ಮೈಸೂರು ನಗರದ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿ ವರ್ಗಾವಣೆ ಮಾಡಲಾಗಿದೆ.

ಬೆಂಗಳೂರಿನ(ವೈರ್‍ಲೆಸ್) ಎಸ್ಪಿ ಎ.ಶ್ರೀನಿವಾಸುಲು ಅವವರನ್ನು ಕಲಬುರ್ಗಿ ಜಿಲ್ಲೆಯ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿ ವರ್ಗಾವಣೆ ಮಾಡಲಾಗಿದೆ ಎಂದು ಆದೇಶದ ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News