×
Ad

ಕೋವಿಡ್ ಸಂಕಷ್ಟ, ಬೆಲೆ ಏರಿಕೆ ಬಿಸಿಯ ನಡುವೆ ವಿದ್ಯುತ್ ದರ ಏರಿಸಿದ ರಾಜ್ಯ ಸರಕಾರ

Update: 2021-06-09 18:37 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ. 9: ಕೋವಿಡ್ ಸಂಕಷ್ಟ, ಪೆಟ್ರೋಲ್, ಡಿಸೇಲ್ ಹಾಗೂ ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆಯೇ ರಾಜ್ಯ ಸರಕಾರ ಬುಧವಾರ ವಿದ್ಯುತ್ ಪ್ರತಿ ಯೂನಿಟ್‍ಗೆ ಸರಾಸರಿ 30 ಪೈಸೆಯಷ್ಟು ದರ ಏರಿಕೆ ಮಾಡಿ ಆದೇಶ ಹೊರಡಿಸಿದೆ.

ಪ್ರತಿ ಯೂನಿಟ್ ವಿದ್ಯುತ್ ದರವನ್ನು ಸರಾಸರಿ 30 ಪೈಸೆ ಏರಿಕೆ ಮಾಡಲಾಗಿದೆ. ಒಟ್ಟಾರೆ ಸರಾಸರಿ ಶೇ.3.84ರಷ್ಟು ವಿದ್ಯುತ್ ದರ ಹೆಚ್ಚಳವಾಗಿದೆ. ಎಪ್ರಿಲ್ 1 ರಿಂದಲೇ ಈ ಪರಿಷ್ಕೃತ ದರಗಳು ಜಾರಿಗೆ ಬಂದಿವೆ. ಮುಂದಿನ ಮೀಟರ್ ರೀಡಿಂಗ್ ವೇಳೆ ಈ ದರಗಳು ಅನ್ವಯವಾಗಲಿವೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಎಪ್ರಿಲ್ ಮತ್ತು ಮೇ ತಿಂಗಳ ದರ ಪರಿಷ್ಕರಣೆ ಬಾಕಿಯನ್ನು ಕೋವಿಡ್19 ಕಾರಣಕ್ಕೆ ಅಕ್ಟೋಬರ್ ಮತ್ತು ನವೆಂಬರ್ ನಲ್ಲಿ ವಸೂಲಿ ಮಾಡಲು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಆದೇಶಿಸಿದೆ. ಉಪ ಚುನಾವಣೆ, ಪಂಚಾಯತ್ ಚುನಾವಣೆ ಮತ್ತು ಕೋವಿಡ್-19 ಕಾರಣಕ್ಕೆ ದರ ಪರಿಷ್ಕರಣೆ ವಿಳಂಬವಾಗಿದೆ ಎಂದು ಆಯೋಗ ತಿಳಿಸಿದೆ.

ರಾಜ್ಯದ ವಿದ್ಯುತ್ ಸರಬರಾಜು ಕಂಪೆನಿಗಳು ಪ್ರತಿ ಯೂನಿಟ್‍ಗೆ 83 ಪೈಸೆಯಿಂದ 1.68 ರೂ.ವರೆಗೆ ಏರಿಕೆ ಮಾಡುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದವು. ಆದರೆ ಸರಕಾರ ಎಲ್ಲ ಸರಬರಾಜು ಕಂಪೆನಿಗಳಿಗೂ ಅನ್ವಯವಾಗುವಂತೆ ಸರಾಸರಿ ಪ್ರತಿ ಯೂನಿಟ್‍ಗೆ 30 ಪೈಸೆ ಹೆಚ್ಚಳ ಮಾಡಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News