‘ಭಾರತ ಸಿಂಧೂರಿ’ ಹೆಸರಲ್ಲಿ ಸಿನಿಮಾ ಆಗಲಿದೆ ರೋಹಿಣಿ ಸಿಂಧೂರಿ ಜೀವನ ಚರಿತ್ರೆ

Update: 2021-06-09 13:24 GMT

ಮಂಡ್ಯ, ಜೂ.9: ರಾಜ್ಯದೆಲ್ಲೆಡೆ ಸುದ್ದಿಯಾಗಿರುವ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ದಾಸ್ ‘ಭಾರತ ಸಿಂಧೂರಿ’ಯಾಗಲಿದ್ದಾರೆ. ಹೌದು, ಮೈಸೂರಿನ ಡಿಸಿ ಹುದ್ದೆಯಲ್ಲಿ ಸುದ್ದಿ ಮಾಡಿ ಇದೀಗ ಮುಜರಾಯಿ ಇಲಾಖೆಗೆ ರಾಜಧಾನಿಗೆ ತೆರಳಿರುವ ರೋಹಿಣಿ ‘ಭಾರತ ಸಿಂಧೂರಿ’ ಹೆಸರಿನ ಮೂಲಕ ಮತ್ತೊಮ್ಮೆ ಸುದ್ದಿಗೆ ಗ್ರಾಸವಾಗಿದ್ದಾರೆ.

ಅನೇಕ ದಕ್ಷ ಅಧಿಕಾರಿಗಳ ಜೀವನಾಧಾರಿತ ಚಲನಚಿತ್ರಗಳು ಕನ್ನಡದ ಬೆಳ್ಳಿತೆರೆಯ ಮೇಲೆ ಮೂಡಿ ಬಂದಿದ್ದು, ಆ ಪಟ್ಟಿಗೆ ರೋಹಿಣಿ ಸೇರ್ಪಡೆಯಾಗುತ್ತಿದ್ದಾರೆ. ಮಂಡ್ಯದ ಸಾಹಿತಿ, ಪತ್ರಕರ್ತ ಕೃಷ್ಣಸ್ವರ್ಣಸಂದ್ರ ರೋಹಿಣಿ ಅವರ ಸಾಧನೆಯನ್ನು ತೆರೆಯ ಮೇಲೆ ತರುತ್ತಿದ್ದಾರೆ. ‘ಭಾರತ ಸಿಂಧೂರಿ’ ಟೈಟಲ್‍ನಲ್ಲಿ ರೋಹಿಣಿ ಕತೆ ತೆರೆಯ ಮೇಲೆ ಬರುತ್ತಿದ್ದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಟೈಟಲ್‍ಗೆ ಓಕೆ ಎಂದಿದೆ.

ಸಾಹಿತಿ ಕೃಷ್ಣಸ್ವರ್ಣಸಂದ್ರ ಈಗಾಗಲೇ ಉತ್ತಮ ಕತೆಗಾರರಾಗಿ ಕನ್ನಡ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಪ್ರಶಸ್ತಿ ಪುರಸ್ಕೃತ ಅವರ ‘ಗುಡ್ಡಿಬಾಡು’ ಕತೆಯನ್ನು ಆಧರಿಸಿ ಕನ್ನಡ, ತೆಲಗು, ತಮಿಳು ಭಾಷೆಗಳಲ್ಲಿ ಓಂಕಾರ್ ಪುರುಷೋತ್ತಮ ಅವರ ನಿರ್ದೇಶನದಲ್ಲಿ ನಿರ್ಮಾಣವಾಗಿರುವ ಸಿನಿಮಾ ತೆರೆಗೆ ಅಣಿಯಾಗಿದೆ. ತಮ್ಮ ಮಗ ನಾಯಕ ಆಗಿರುವ ‘ನೇಗಿಲ ಧರ್ಮ’ದ ಚಿತ್ರೀಕರಣ ಪೂರ್ಣಗೊಂಡಿದೆ. ಇದರ ಜತೆಗೆ ಕೃಷ್ಣ, ‘ಭಾರತ ಸಿಂಧೂರಿ’ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಫಿಲಂಸ್ ಬ್ಯಾನರ್ ನಡಿ ಕೃಷ್ಣ ಅವರು ಚಿತ್ರ ನಿರ್ಮಾಣ ಮಾಡುತ್ತಿದ್ದು, ಚಿತ್ರಕಥೆ, ನಿರ್ದೇಶನದ ಹೊಣೆಯನ್ನೂ ಹೊತ್ತಿದ್ದಾರೆ. ಮಂಡ್ಯದವರೇ ಆದ ಪಾಂಡವಪುರದ ಅಕ್ಷತಾ ಅಥವಾರ ಶ್ರಾವಣಿ ಅವರು ರೋಹಿಣಿ ಪಾತ್ರ ನಿರ್ವಹಿಸಲಿದ್ದು, ಉಳಿತ ಪಾತ್ರ ವರ್ಗ, ತಂತ್ರಜ್ಞರ ಆಯ್ಕೆ ನಡೆಯುತ್ತಿದೆ.

ಅಂದಹಾಗೆ ಮೈಸೂರು ಡಿಸಿಯಾಗಿ ಸುದ್ದಿಯಾಗಿರುವ ಹಿನ್ನೆಲೆಯಲ್ಲಿ ರೋಹಿಣಿ ಸಿಂಧೂರಿ ಅವರ ಸಿನಿಮಾ ಮಾಡಲು ಕೃಷ್ಣ ಅವರು ಮುಂದಾಗಿದ್ದಾರೆ ಎಂಬುದು ಕಾಕತಾಳೀಯವಷ್ಟೆ. ಏಕೆಂದರೆ, ರೋಹಿಣಿ ಅವರು ಮಂಡ್ಯ ಜಿಪಂ ಸಿಇಒ ಆಗಿದ್ದ ವೇಳೆ ಮಾಡಿದ ಸಾಧನೆ ಹಿನ್ನೆಲೆಯಲ್ಲಿ ಚಿತ್ರ ಮಾಡುವ ಉದ್ದೇಶವಿತ್ತು. ಹಾಗಾಗಿ 2015ರಲ್ಲೇ ‘ಭಾರತ ಸಿಂಧೂರಿ’ ಸಿನಿಮಾ ಟೈಟಲ್ ರಿಜಿಸ್ಟರ್ ಮಾಡಿಸಿದ್ದರು. ಲಾಕ್‍ಡೌನ್, ಕಸಾಪ ಚುನಾವಣೆ ನಂತರ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ.

2014ರಲ್ಲಿ ಮಂಡ್ಯ ಜಿಪಂ ಸಿಇಒ ಆಗಿದ್ದ ರೋಹಿಣಿ ಸಿಂಧೂರಿ ಭಾರತ ಸರಕಾರದ ಸ್ವಚ್ಛ ಭಾರತ್ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದರು. ಹಳ್ಳಿ ಹಳ್ಳಿಗಳನ್ನು ಸುತ್ತಿ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಲು ಜಾಗೃತಿ ಮೂಡಿಸಿ ಬಹಿರ್ದೆಸೆ ಮುಕ್ತ ಜಿಲ್ಲೆಯಾಗಿಸಿ ಪ್ರಶಸ್ತಿಯನ್ನು ತಂದುಕೊಟ್ಟಿದ್ದರು. ನಂತರ, ಹಾಸನ, ಮೈಸೂರು ಜಿಲ್ಲಾಧಿಕಾರಿಯಾಗಿ ಗಮನ ಸೆಳೆದಿದ್ದಾರೆ.

(ನಿರ್ದೇಶಕ ಕೃಷ್ಣಸ್ವರ್ಣಸಂದ್ರ)

‘ರೋಹಿಣಿ ಅವರು ಮಂಡ್ಯ ಸಿಇಒ ಆಗಿದ್ದಾಗ ಒಂದು ವರ್ಷದಲ್ಲಿ ಮಾಡಿದ ಸಾಧನೆ ಸಿನಿಮಾದ ಮುಖ್ಯ ವಿಷಯವಾಗಿದ್ದು, ಅದರ ಸುತ್ತ ಚಿತ್ರಕತೆ ಹೆಣೆದಿದ್ದೇನೆ. ಸಂಸ್ಕೃತಿಯ ಜನನಿಯಾಗಿ, ತಾಯಿಯಾಗಿ, ತಂಗಿಯಾಗಿ, ಪತ್ನಿಯಾಗಿ ಎಲ್ಲಾ ಸ್ಥರದಲ್ಲೂ ಹೆಣ್ಣು ಮಗಳು ಅಗ್ರ ಸ್ಥಾನದಲ್ಲಿ ನಿಂತು ಬದುಕು ರೂಪಿಸುವುದೇ ಕಥೆಯ ಹಂದರವಾಗಿದೆ’ ಎನ್ನತ್ತಾರೆ ನಿರ್ದೇಶಕ ಕೃಷ್ಣಸ್ವರ್ಣಸಂದ್ರ.

‘ರೋಹಿಣಿ ಅವರು ಮಂಡ್ಯ ಸಿಇಒ ಆಗಿ ಮಾಡಿದ ಸಾಧನೆ ಒಂದು ಮಗ್ಗಲಾದರೆ, ನಂತರ, ಹಾಸನ, ಮೈಸೂರು ಜಿಲ್ಲಾಧಿಕಾರಿಯಾಗಿ ಮಾಡಿದ ಸಾಧನೆ ಮತ್ತೊಂದು ಮಗ್ಗಲು. ಹಾಸನ, ಮೈಸೂರು ಜಿಲ್ಲೆಯ ಅಧಿಕಾರಿಯಾಗಿ ಅವರ ಕಾರ್ಯವೈಖರಿ, ಅನುಭವಿಸಿದ ನೋವುಗಳನ್ನು ಆಧರಿಸಿ ಮತ್ತೊಂದು ಸಿನಿಮಾ ಮಾಡುವ ಉದ್ದೇಶವಿದೆ’ ಎಂದೂ ಅವರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News