ಸಿಎಂ ಸ್ಥಾನದ ಆಕಾಂಕ್ಷಿಗಳು ಪಂಕ್ಚರ್ ಆದ, ಇಂಧನ ಇಲ್ಲದ ಬಸ್ ಹತ್ತಿದ್ದಾರೆ: ಸಚಿವ ಆರ್.ಅಶೋಕ್

Update: 2021-06-09 14:13 GMT

ಬೆಂಗಳೂರು, ಜೂ. 9: `ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಾಗಿರುವ ಕೆಲವರು ಖಾಲಿ ಇಲ್ಲದ ಕುರ್ಚಿಗೆ ಟವಲ್ ಹಾಕಿದ್ದಾರೆ. ಅಲ್ಲದೆ, ಇವರು ಪಂಕ್ಚರ್ ಆದ ಮತ್ತು ಇಂಧನ ಇಲ್ಲದ ಬಸ್ ಹತ್ತಿದ್ದು, ಆ ಬಸ್ಸು ಹೊರಡುವುದಿಲ್ಲ' ಎಂದು ಕಂದಾಯ ಸಚಿವ ಆರ್.ಅಶೋಕ್ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಬುಧವಾರ ಇಲ್ಲಿನ ನಿಮ್ಹಾನ್ಸ್ ಕನ್ವೆನ್ಷನ್ ಸೆಂಟರ್ ನಲ್ಲಿ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, `ನಿಂತಲ್ಲೆ ನಿಂತ ಬಸ್ಸಿನ ಸೀಟಿಗೆ ಟವಲ್ ಹಾಕಿದರೆ ಏನು ಪ್ರಯೋಜನ' ಎಂದು ಲೇವಡಿ ಮಾಡಿದರು.

`ಬಿಜೆಪಿ ಪಂಕ್ಚರ್ ಆಗಿರುವ ಬಸ್ಸೇ' ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಆರ್.ಅಶೋಕ್, `ಬಿಜೆಪಿ ಪಂಕ್ಚರ್ ಆದ ಬಸ್ ಅಲ್ಲ, ಮುಖ್ಯಮಂತ್ರಿ ಆಗಲು ಹೊರಟಿರುವವರ ಬಸ್ಸುಗಳ ಸ್ಥಿತಿ ಹೇಳಿದ್ದೇನೆ. ಯಡಿಯೂರಪ್ಪ ನಮ್ಮ ನಾಯಕರು. ಇನ್ನೆರಡೂ ವರ್ಷ ಅವರೇ ಮುಖ್ಯಮಂತ್ರಿ ಆಗಿರಲಿದ್ದು, ಪೂರ್ಣ ಅವಧಿ ಅವರೇ ಮುಖ್ಯಮಂತ್ರಿ' ಎಂದು ಸ್ಪಷ್ಟಪಡಿಸಿದರು.

ಸಿಎಂ ರೇಸ್‍ನಲ್ಲಿ ನಾನಿಲ್ಲ: `ನಾನು ಮುಖ್ಯಮಂತ್ರಿ ರೇಸ್‍ನಲ್ಲಿ ಇಲ್ಲ. ರೇಸ್ ಕುದುರೆ ಹಿಂದೆ ಓಡುವ ಜಾಯಮಾನವೂ ನನ್ನದಲ್ಲ. ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದ ಬಸ್ಸು ಚೆನ್ನಾಗಿದೆ, ಅದರ ಕುರ್ಚಿಯೂ ಸರಿ ಇದೆ, ಬಸ್ಸು ಸರಿಯಾದ ವೇಗದಲ್ಲಿ ಓಡುತ್ತಿದೆ. ನಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಲ್ಲ. ಆದರೆ, ಭವಿಷ್ಯದ ಬಗ್ಗೆ ನನಗೆ ಗೊತ್ತಿಲ್ಲ. ಎಂದು ಅಶೋಕ್ ಸ್ಪಷ್ಟನೆ ನೀಡಿದರು.

ಬಿಜೆಪಿಯ ಚಿಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಏಕೆ? ಕಾಂಗ್ರೆಸ್ ಪಕ್ಷದಲ್ಲೆ ಸಾಕಷ್ಟು ತಿಕ್ಕಾಟ, ಗೊಂದಲಗಳಿವೆ. ಚುನಾವಣೆಗೂ ಮೊದಲೇ ಮುಖ್ಯಮಂತ್ರಿ ಅಭ್ಯರ್ಥಿಯಾರಾಗಬೇಕೆಂಬ ಬಗ್ಗೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಸಂಘರ್ಷ ಏರ್ಪಟ್ಟಿದ್ದು ಮೊದಲು ಅದನ್ನು ಅವರು ಬಗೆಹರಿಸಿಕೊಳ್ಳಲಿ ಎಂದು ಸಚಿವ ಅಶೋಕ್ ಸಲಹೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News