ಹಿಂದೂ ದೇವಾಲಯಗಳ ಹಣ ಇತರ ಧಾರ್ಮಿಕ ಕೇಂದ್ರಗಳಿಗೆ ಬಳಕೆ ಆದೇಶಕ್ಕೆ ಸಚಿವ ಶ್ರೀನಿವಾಸ ಪೂಜಾರಿ ತಡೆ

Update: 2021-06-09 15:16 GMT

ಮಂಗಳೂರು, ಜೂ.9: ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯ ಅನುದಾನವನ್ನು ಇತರ ಧರ್ಮದ ಪ್ರಾರ್ಥನಾ ಕೇಂದ್ರಗಳಿಗೆ ತಸ್ತೀಕ್ (ಅನುದಾನ) ರೂಪದಲ್ಲಿ ನೀಡುವುದಕ್ಕೆ ಸಂಬಂಧಿಸಿದ ಆದೇಶಕ್ಕೆ ರಾಜ್ಯ ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ತಡೆ ನೀಡಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರುವ ಮುಂಚೆ ಇಲಾಖೆಯ ಮೂಲಕ ಮಂಜೂರಾಗುತ್ತಿರುವ ತಸ್ತೀಕ್ ಹಣವು ಇತರ ಧರ್ಮಗಳ ಪ್ರಾರ್ಥನಾ ಮಂದಿರಗಳಿಗೆ ಬಿಡುಗಡೆ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಸಚಿವರು, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಇಲಾಖೆಯ ಮೂಲಕ ಹಿಂದೂ ಧರ್ಮವನ್ನು ಹೊರತುಪಡಿಸಿ ಇತರ ಧರ್ಮಗಳಿಗೆ ಸಂಬಂಧಿಸಿ ಬಳಸುತ್ತಿರುವುದನ್ನು ತಡೆಹಿಡಿಯಲು ಸೂಚಿಸಿದ್ದಾರೆ.

ಧಾರ್ಮಿಕ ದತ್ತಿ ಇಲಾಖೆಯ ಅನುದಾನವನ್ನು ಇತರ ಧರ್ಮದ ಪ್ರಾರ್ಥನಾ ಕೇಂದ್ರಗಳಿಗೆ ಬಿಡುಗಡೆ ಮಾಡಲಾಗುತ್ತಿದೆ ಎಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಅಲ್ಲದೆ ಕೆಲವು ಹಿಂದುತ್ವ ಸಂಘಟನೆಗಳು ವಿರೋಧ ವ್ಯಕ್ತಪಡಿಸಿ ಸಚಿವರಿಗೆ ಮನವಿ ಸಲ್ಲಿಸಿತ್ತು. ಆ ಹಿನ್ನೆಲೆಯಲ್ಲಿ ಸಚಿವರು ಇದೀಗ ಹಳೆಯ ಅದೇಶಕ್ಕೆ ತಡೆ ನೀಡಿದ್ದಾರೆ.

ರಾಜ್ಯದಲ್ಲಿ 27 ಸಾವಿರಕ್ಕೂ ಹೆಚ್ಚು ಹಿಂದೂ ದೇವಸ್ಥಾನಗಳಿಗೆ ತಸ್ತೀಕ್ ನೀಡಲಾಗುತ್ತಿದೆ. ಅಂದರೆ ಸುಮಾರು 133 ಕೋ.ರೂ. ಸರಕಾರ ವಾರ್ಷಿಕ ಅನುದಾನ ಹಂಚುತ್ತಿದೆ. ಈ ಪೈಕಿ ಸುಮಾರು 764 ಇತರ ಧರ್ಮೀಯರ ಪ್ರಾರ್ಥನಾ ಮಂದಿರಗಳು ಇಲಾಖೆಯಿಂದ ತಸ್ತೀಕ್ ಪಡೆಯುತ್ತಿದೆ. ಸಚಿವರ ಸೂಚನೆ ಮೇರೆಗೆ ಇತರ ಧರ್ಮೀಯ ಪ್ರಾರ್ಥನಾ ಮಂದಿರಗಳಿಗೆ ಹಣ ಬಿಡುಗಡೆ ಮಾಡುವುದನ್ನು ನಿಲ್ಲಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಇಲಾಖೆಯ ಆಯುಕ್ತರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News