ಭೂ ಅಕ್ರಮದ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಕ್ಕೆ ಷಡ್ಯಂತ್ರದಿಂದ ವರ್ಗಾವಣೆ: ರೋಹಿಣಿ ಸಿಂಧೂರಿ ಆರೋಪ

Update: 2021-06-09 15:44 GMT

ಮೈಸೂರು,ಜೂ.9: ಕೆ.ಆರ್.ನಗರದ ಶಾಸಕ ಸಾ.ರಾ.ಮಹೇಶ್ ಅವರು ಮೈಸೂರು ನಗರದ ದಟ್ಟಗಳ್ಳಿಯಲ್ಲಿ ನಿರ್ಮಾಣ ಮಾಡಿರುವ ಸಾ.ರಾ.ಕಲ್ಯಾಣ ಮಂಟಪವು ರಾಜಕಾಲುವೆ ಮೇಲೆ ನಿರ್ಮಾಣ ಮಾಡಲಾಗಿದೆ. ನಾನು ಈ ಭೂ ಅಕ್ರಮದ ವಿರುದ್ಧ ಕ್ರಮ ಜರುಗಿಸಲು ಮುಂದಾಗಿದ್ದರಿಂದಲೇ ನನ್ನ ವಿರುದ್ಧ ಷಡ್ಯಂತ್ರ ಮಾಡಿ ವರ್ಗಾವಣೆ ಮಾಡಲಾಯಿತು ಎಂದು ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಗಂಭೀರ ಆರೋಪ ಮಾಡಿದ್ದಾರೆ.

ಶಾಸಕ ಸಾ.ರಾ.ಮಹೇಶ್ ಅವರ ಒಡೆತನದ ಸಾರಾ ಕಲ್ಯಾಣ ಮಂಟಪವು ಅಕ್ರಮವಾಗಿ ರಾಜಕಾಲುವೆ ಮೇಲೆ ನಿರ್ಮಾಣವಾಗಿದೆ. ಅದರ ವಿರುದ್ಧ ಕ್ರಮ ಜರುಗಿಸಲು ಮುಂದಾದ ಹಿನ್ನೆಲೆಯಲ್ಲಿ ನಾನು ವರ್ಗಾವಣೆಯಾದ ನಂತರವೂ ಸಾ.ರಾ.ಮಹೇಶ್ ಅವರು ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಅವರು ಹೇಳಿರುವುದಾಗಿ ವರದಿಯಾಗಿದೆ.

ಅವರ ಅಕ್ರಮಗಳ ಬಗ್ಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಬಾರದು ಎಂದು ಹೆದರಿಸುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ. ಇದರ ಉದ್ದೇಶವೂ ಇದೇ ಆಗಿದೆ. ಇವರ ಆರೋಪಗಳಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ರಾಜಕಾರಣಿಗಳ ಜೊತೆ ಸೇರಿಕೊಂಡು ಶಿಲ್ಪನಾಗ್ ನನ್ನ ವಿರುದ್ಧ ಷಡ್ಯಂತ್ರ ನಡೆಸಿದರು. ನನ್ನನ್ನು ವರ್ಗಾವಣೆ ಮಾಡುವುದೇ ಇವರ ಗುರಿಯಾಗಿತ್ತು. ಆ  ಹಿನ್ನಲೆಯಲ್ಲಿ ಶಿಲ್ಪಾನಾಗ್ ಬಳಸಿಕೊಂಡು ಇವರು ನನ್ನ ವರ್ಗಾವಣೆಗೆ ಮುಂದಾದರು. ಹಲವು ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಳ್ಳಲಾಗಿದೆ ಎಂದು ರೋಹಿಣಿ ಸಿಂಧೂರಿ ಆರೋಪ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News