ಒಂದೇ ಬಾರಿಗೆ ಅನ್‍ಲಾಕ್ ಮಾಡಿದರೆ ಕೋವಿಡ್ ಸಂಖ್ಯೆ ಹೆಚ್ಚಬಹುದು: ಡಾ.ಕೆ.ಸುಧಾಕರ್

Update: 2021-06-09 16:22 GMT

ಬೆಂಗಳೂರು, ಜೂ. 9: ಒಂದೇ ಬಾರಿಗೆ ಎಲ್ಲ ಚಟುವಟಿಕೆಗಳಿಗೆ ಅವಕಾಶ ನೀಡಿದರೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಬಹುದು. ಹೀಗಾಗಿ, ಒಂದೇ ಬಾರಿಗೆ ಅನ್‍ಲಾಕ್ ಮಾಡಲಾಗುವುದಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೆಲ ಚಟುವಟಿಕೆಗೆ ನಿರ್ಬಂಧ ಹೇರಿ, ಇನ್ನೂ ಕೆಲ ಚಟುವಟಿಕೆಗಳಿಗೆ ಅವಕಾಶ ನೀಡಬಹುದು. ಈ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ನೀಡುವ ಸಲಹೆಯನ್ನು ಮುಖ್ಯಮಂತ್ರಿಗೆ ತಿಳಿಸಲಾಗುವುದು ಎಂದರು.

ಮುಖ್ಯಮಂತ್ರಿ ಯಡಿಯೂರಪ್ಪನವರು ಎಲ್ಲರೊಂದಿಗೆ ಚರ್ಚಿಸಿ ಅನ್‍ಲಾಕ್ ಯಾವ ರೀತಿ ಇರಬೇಕೆಂದು ತೀರ್ಮಾನ ಮಾಡುತ್ತಾರೆ ಎಂದ ಅವರು, ಪಾಸಿಟಿವಿಟಿ ದರ ಶೇ.5 ಕ್ಕಿಂತ ಕಡಿಮೆ, 5 ಸಾವಿರಕ್ಕಿಂತ ಕಡಿಮೆ ಪ್ರಕರಣ ಇದ್ದರೆ ಅನ್‍ಲಾಕ್ ಮಾಡಬಹುದೆಂಬ ಅಭಿಪ್ರಾಯ ಇದೆ ಎಂದು ಸುಧಾಕರ್ ನುಡಿದರು.

ಮಹಾರಾಷ್ಟ್ರದಲ್ಲಿ ಪ್ರಕರಣ ಇಳಿಕೆಯಾದ ಬಳಿಕ ಅನ್‍ಲಾಕ್ ಕಡೆಗೆ ಹೋಗಿದ್ದಾರೆ. ಆ ರಾಜ್ಯಕ್ಕಿಂತ ಬಹಳ ಬೇಗ ನಮ್ಮಲ್ಲಿ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಚರ್ಚಿಸಲಿದ್ದಾರೆ. ಇನ್ನು, ಕೆಲ ದೇಶಗಳಲ್ಲಿ ಮೂರನೇ ಅಲೆಯಲ್ಲಿ ಮಕ್ಕಳಿಗೆ ತೀವ್ರ ಸಮಸ್ಯೆಯಾಗಿಲ್ಲ. ಅನೇಕ ಮಕ್ಕಳಿಗೆ ಮನೆ ಆರೈಕೆ ಮಾಡಲಾಗಿದೆ ಏಮ್ಸ್ ನಿರ್ದೇಶಕರು ಹೇಳಿದ್ದಾರೆ. ಆದರೂ ರಾಜ್ಯದಲ್ಲಿ ಮಕ್ಕಳ ವಿಚಾರದಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದರು.

ರಾಜ್ಯದಲ್ಲಿ ಕಪ್ಪು ಶಿಲೀಂಧ್ರದ 2,281 ಪ್ರಕರಣಗಳಿದ್ದು, 1,948 ಮಂದಿಗೆ ಚಿಕಿತ್ಸೆ ನೀಡುತ್ತಿದ್ದು, 102 ಮಂದಿ ಗುಣಮುಖರಾಗಿದ್ದಾರೆ ಎಂದ ಅವರು, ಇತ್ತೀಚೆಗೆ ಹುಬ್ಬಳ್ಳಿ ಕಿಮ್ಸ್ ಗೆ ಭೇಟಿ ನೀಡಿದ್ದಾಗ ಬೇರೆ ಸಚಿವರು ದೂರು ನೀಡಿದ್ದರು. ಆಗ ಸ್ಥಳದಲ್ಲೇ ತನಿಖೆಗೆ ಆದೇಶಿಸಿ ವರದಿ ನೀಡಲು ಸೂಚಿಸಲಾಗಿತ್ತು. ವರದಿ ಸಿದ್ಧವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ನನ್ನ ಬಳಿ ವರದಿ ಬಂದ ಕೂಡಲೇ ಕ್ರಮ ವಹಿಸುತ್ತೇನೆ ಎಂದು ಡಾ.ಸುಧಾಕರ್ ಸ್ಪಷ್ಟನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News