ಕೊರೋನದಿಂದ ತತ್ತರಿಸುತ್ತಿರುವ ಜನರನ್ನು ಬೆಲೆ ಏರಿಕೆ ನರಕಕ್ಕೆ ದೂಡುತ್ತಿರುವ ಕೆಟ್ಟ ಸರಕಾರ: ಸಿದ್ದರಾಮಯ್ಯ

Update: 2021-06-09 17:03 GMT

ಬೆಂಗಳೂರು, ಜೂ. 9: `ವಿದ್ಯುಚ್ಛಕ್ತಿ ದರಗಳನ್ನು ಎಪ್ರಿಲ್ 1ರಿಂದ ಅನ್ವಯವಾಗುವಂತೆ ಪ್ರತಿ ಯೂನಿಟ್‍ಗೆ ಸರಾಸರಿ 30 ಪೈಸೆಗಳಷ್ಟು ಹೆಚ್ಚಳಕ್ಕೆ ಸರಕಾರ ಅನುಮೋದನೆ ನೀಡಿರುವುದು ಕೊರೋನದಿಂದ ತತ್ತರಿಸುತ್ತಿರುವ ಜನರನ್ನು ಬೆಲೆ ಏರಿಕೆಯ ನರಕಕ್ಕೆ ದೂಡುತ್ತಿರುವ ಕೆಟ್ಟ ಸರಕಾರ ಇದಾಗಿದೆ. ವಿಪಕ್ಷಗಳ ಮುಖಂಡರ ಸಭೆ ಕರೆದು ವಿದ್ಯುಚ್ಛಕ್ತಿ ದರಗಳನ್ನು ಕಡಿಮೆ ಮಾಡುವುದು ಹೇಗೆ ಎಂದು ಸಲಹೆ ಪಡೆಯಬೇಕು. ಅಲ್ಲಿಯವರೆಗೆ ವಿದ್ಯುಚ್ಛಕ್ತಿ ದರಗಳನ್ನು ಹೆಚ್ಚಿಸಬಾರದು' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೋರಿದ್ದಾರೆ.

ಬುಧವಾರ ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು, `ಸರಾಸರಿ ಶೇ 3.84ರಷ್ಟು ಹೆಚ್ಚಿಸುವುದಾಗಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಪ್ರಕಟಣೆ ಹೊರಡಿಸಿದೆ. ಜತೆಗೆ ಕಳೆದ ವರ್ಷ ಹೆಚ್ಚಿಸಿದ್ದ ದರಗಳನ್ನು ಅನುಷ್ಠಾನ ಮಾಡಿರಲಿಲ್ಲ. ಹಾಗಾಗಿ ಈ ವರ್ಷ ದರಗಳನ್ನು ಹೆಚ್ಚಿಸಲಾಗಿದೆ ಎಂದೂ ಸುಳ್ಳು ಹೇಳಿದೆ. ದಾಖಲೆಗಳನ್ನು ಪರಿಶೀಲಿಸಿದಾಗ ರಾಜ್ಯದ ಎಲ್ಲ ಎಸ್ಕಾಂಗಳ ವ್ಯಾಪ್ತಿಯಲ್ಲೂ ಕಳೆದ ವರ್ಷವೂ ದರಗಳನ್ನು ಹೆಚ್ಚಿಸಲಾಗಿದೆ' ಎಂದು ದೂರಿದ್ದಾರೆ.

'ಎಚ್.ಟಿ ಗ್ರಾಹಕರು ಸಂಜೆ ಆರು ಗಂಟೆಯಿಂದ ಹತ್ತು ಗಂಟೆಯವರೆಗೆ ವಿದ್ಯುತ್ ಬಳಸಿದರೆ ಅವರಿಗೆ ಪ್ರತಿ ಯೂನಿಟ್‍ಗೆ 1 ರೂ.ದಂಡ ವಿಧಿಸುವುದಾಗಿ ಹೇಳಿದೆ. ಇದು ಸರಿಯಾದ ಕ್ರಮವಲ್ಲ. ರಾಜ್ಯದಲ್ಲಿ ಸುಮಾರು 30 ಸಾವಿರ ಮೆ.ವ್ಯಾ.ವಿದ್ಯುತ್ ಉತ್ಪಾದನೆ ಇದೆ. ಆದರೆ, ಇದೇ ಸಂದರ್ಭದಲ್ಲಿ ವಿದ್ಯುತ್ ಬಳಕೆ ಆಗುತ್ತಿರುವುದು ಕೇವಲ 8.5 ಸಾವಿರದಿಂದ 10 ಸಾವಿರ ಮೆ.ವ್ಯಾ. ಮಾತ್ರ. 3 ವರ್ಷಗಳಿಂದ ವಿದ್ಯುತ್ ಬಳಕೆ ಅಧೋಗತಿಗೆ ಇಳಿದಿದೆ. ಈ ಸಂದರ್ಭದಲ್ಲಿ ವಿದ್ಯುಚ್ಛಕ್ತಿ ಬಳಕೆಯನ್ನು ಉತ್ತೇಜಿಸಬೇಕಾದ ಅನಿವಾರ್ಯತೆ ಇದೆ. ರಾಜ್ಯದಲ್ಲಿ ಉತ್ಪಾದನೆ ಆಗುತ್ತಿರುವ ವಿದ್ಯುತ್ ಉತ್ಪಾದನೆಯಲ್ಲಿ ಮೂರನೇ ಎರಡು ಭಾಗದಷ್ಟು ಸೋಲಾರ್ ಮತ್ತು ಗಾಳಿ ಮೂಲದಿಂದ ಉತ್ಪಾದನೆ ಆಗುತ್ತಿದೆ. ಹಾಗಾಗಿ ವಿದ್ಯುತ್ ದರಗಳನ್ನು ಇಳಿಸಿ ಬಳಕೆಯನ್ನು ಪ್ರೋತ್ಸಾಹಿಸಬೇಕಾದ ಸರಕಾರ ಹೆಚ್ಚು ಬಳಸುತ್ತಿದ್ದಾರೆಂದು ದಂಡ ವಿಧಿಸುವುದು ಹಾಗೂ ಪದೇ ಪದೇ ದರಗಳನ್ನು ಹೆಚ್ಚಿಸುವುದನ್ನು ಮಾಡುತ್ತಿದೆ. ದರ ಏರಿಕೆಯಿಂದ ಕುಡಿಯುವ ನೀರಿನಿಂದ ಹಿಡಿದು ಎಲ್ಲದರ ಬೆಲೆಗಳೂ ಹೆಚ್ಚಾಗುತ್ತವೆ ಎಂದು ತಿಳಿಸಿದ್ದಾರೆ.

2020ರ ನ.6ರಂದು ನಾನು ಬರೆದ ಪತ್ರದಲ್ಲಿ `ಜಿಎಸ್‍ಟಿ, ನೋಟ್‍ಬ್ಯಾನ್ ಮತ್ತು ಕೊರೋನ ಸಂಕಷ್ಟಗಳಿಂದ ನಲುಗಿರುವ ಕೈಗಾರಿಕೆಗಳು, ವಾಣಿಜ್ಯೋದ್ಯಮಗಳು ಮತ್ತು ಜನರ ಮೇಲೆ ವಿದ್ಯುತ್ ಏರಿಕೆಯ ಬರೆಯನ್ನು ಹಾಕದೆ ಕಷ್ಟ ಕಾಲದಲ್ಲಿ ತೆರಿಗೆಯ ಹೊರೆಯನ್ನು ಇಳಿಸಿ, ಆರ್ಥಿಕತೆಗೆ ಚೈತನ್ಯ ನೀಡಬೇಕೆಂದು ಆಗ್ರಹಿಸಿದ್ದೆ. ಈ ಕುರಿತಂತೆ ಅಗತ್ಯ ಬಿದ್ದರೆ ವಿದ್ಯುಚ್ಛಕ್ತಿ ದರಗಳನ್ನು ಹೇಗೆ ಕಡಿಮೆ ಮಾಡಬಹುದು ಹಾಗೂ ಸಂಸ್ಥೆಗಳನ್ನು ಹೇಗೆ ಲಾಭದಾಯಕವಾಗಿ ನಡೆಸಬಹುದೆಂದು ಸಲಹೆಗಳನ್ನು ನೀಡಲು ಸಿದ್ದನಿದ್ದೇನೆ' ಎಂದು ತಿಳಿಸಿದ್ದೆ. ಆದರೆ ಸರಕಾರ ಪಂಚೇಂದ್ರಿಯಗಳನ್ನು ಕಳೆದುಕೊಂಡು ಜನರನ್ನು ಶತ್ರುಗಳೆಂದು ಭಾವಿಸಿ ಕಾರ್ಪೋರೇಟ್ ಕಂಪೆನಿಗಳನ್ನು ಓಲೈಸುವ ಗುಣ ಬೆಳೆಸಿಕೊಂಡಿರುವುದರಿಂದ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಮುಂತಾದ ಹಣದುಬ್ಬರವನ್ನು ನಿಯಂತ್ರಿಸುವ, ಜನರ ಹಿತವನ್ನು ರಕ್ಷಿಸುವ ಅಗತ್ಯ ವಸ್ತುಗಳ ಬೆಲೆಗಳನ್ನು ನಿಯಂತ್ರಣ ಮಾಡುತ್ತಿಲ್ಲ. ಬದಲಾಗಿ ಬೆಲೆಗಳನ್ನು ನಿರಂತರವಾಗಿ ಹೆಚ್ಚಿಸುತ್ತಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ಪೆಟ್ರೋಲ್ ಬೆಲೆ 100 ರೂ.ದಾಟಿದೆ. ಒಂದೂವರೆ ವರ್ಷದಿಂದ ಈಚೆಗೆ ಸುಮಾರು ಒಂದು ಲೀಟರ್ ಗೆ 30 ರೂ.ಗಳಷ್ಟು ಬೆಲೆ ಜಾಸ್ತಿ ಆಗಿದೆ. 2014 ರಲ್ಲಿ 400 ರೂ.ಗಳಿದ್ದ ಅಡುಗೆ ಅನಿಲದ ಸಿಲಿಂಡರ್ ಬೆಲೆ ಈಗ 850 ರೂ.ಆಗಿದೆ. ಅದಾನಿ ಮುಂತಾದ ಕಾರ್ಪೋರೇಟ್ ಕಂಪೆನಿಗಳು ಹಾಗೂ ಕೇಂದ್ರದ ಗ್ರಿಡ್‍ಗಳಿಂದ ರಾಜ್ಯ ಸರಕಾರ 38,594 ಮಿಲಿಯನ್ ಯೂನಿಟ್‍ಗಳನ್ನು ಖರೀದಿಸುತ್ತಿದೆ. ಆದರೆ ಬಳಕೆ ಮಾಡುತ್ತಿರುವುದು ಮಾತ್ರ ಕೇವಲ 19,921 ಮಿಲಿಯನ್ ಯೂನಿಟ್‍ಗಳು ಮಾತ್ರ. ಇದಕ್ಕಾಗಿ ರಾಜ್ಯ ಸರಕಾರ 4,388 ಕೋಟಿ ರೂ. ಪಾವತಿಸುತ್ತಿದೆ. ಆದರೆ, ಪಾವತಿಸಬೇಕಾಗಿರುವುದು ಕೇವಲ 1,787 ಕೋಟಿ ರೂ.ಮಾತ್ರ. ಇದೇ ರೀತಿ ಒಟ್ಟಾರೆಯಾಗಿ ಲೆಕ್ಕ ಹಾಕಿದರೆ ಎಲ್ಲ ಮೂಲಗಳಿಂದ ಪಾವತಿಸಬೇಕಾದ ಮೊತ್ತಕ್ಕಿಂತ 5,460 ಕೋಟಿ ರೂ.ಹೆಚ್ಚಿಗೆ ಪಾವತಿಸಲಾಗುತ್ತಿದೆ. ಜನರನ್ನು ಶೋಷಿಸಿ ಕಾರ್ಪೋರೇಟ್ ಕಂಪೆನಿಗಳನ್ನು ಉದ್ದಾರ ಮಾಡುವ ಕ್ರಮ ಇದು ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

ಅವಧಿ ಮುಗಿದಿರುವ ವಿದ್ಯುತ್ ಒಪ್ಪಂದಗಳನ್ನು ಕೂಡಲೇ ರದ್ದು ಮಾಡಿ ಎಂದು ನಾನು ಆಗ್ರಹಿಸಿದ್ದೆ. ಆ ಕುರಿತು ರಾಜ್ಯ ಸರಕಾರ ಇದುವರೆಗೂ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಅದೇ ರೀತಿ ಕೆಪಿಟಿಸಿಎಲ್ ವತಿಯಿಂದ ಸರಬರಾಜು ಮಾಡುವ ವಿದ್ಯುತ್‍ಗಾಗಿ 20 ಸಾವಿರ ರೂ.ಗಳನ್ನು ಹೆಚ್ಚು ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ. ರಾಜ್ಯದ ವಿದ್ಯುಚ್ಛಕ್ತಿ ಇಲಾಖೆಯು ಖರೀದಿ ಮಾಡುವ ಕಂಪೆನಿಗಳಿಗೆ ಉತ್ಪಾದನೆ ಮಾಡುವ ಸ್ಥಳದಿಂದಲೇ ಸರಬರಾಜು ಶುಲ್ಕವನ್ನು ಪಾವತಿಸುತ್ತಿದೆ. ಇದರಿಂದ ರಾಜ್ಯ ಸರಕಾರವು 3,037 ಕೋಟಿ ರೂ.ಗಿಂತಲೂ ಹೆಚ್ಚಿನ ಹಣವನ್ನು ಪಿಜಿಸಿಐಎಲ್ ಕಂಪೆನಿಗೆ ಪಾವತಿಸಲಾಗುತ್ತಿದೆ. ಆದರೆ, ಪಾವತಿಸಬೇಕಾಗಿರುವುದು 1,785 ಕೋಟಿ ರೂ. ಮಾತ್ರ. ಆದರೆ ಮಹಾರಾಷ್ಟ್ರ, ಪಂಜಾಬ್ ಮುಂತಾದ ರಾಜ್ಯಗಳು ತಮ್ಮ ರಾಜ್ಯದ ಗ್ರಿಡ್‍ಗಳಿಗೆ ಸರಬರಾಜು ಆದ ನಂತರದ ವಿದ್ಯುತ್‍ಗೆ ಮಾತ್ರ ಶುಲ್ಕವನ್ನು ಪಾವತಿಸುತ್ತಿವೆ.

ಜನ ವಿರೋಧಿಯಾದ ಮತ್ತು ಅದಕ್ಷವಾದ ಸರಕಾರ ಮಾತ್ರ ಉತ್ಪಾದನೆ ಮತ್ತು ಸರಬರಾಜುಗಳಲ್ಲಿನ ವೆಚ್ಚಗಳನ್ನು ವೈಜ್ಞಾನಿಕವಾಗಿ ನಿಭಾಯಿಸದೆ ವಿದ್ಯುತ್ ದರಗಳನ್ನು ಹೆಚ್ಚಿಸಿ ಜನರ ಮೇಲೆ ಬರೆ ಹಾಕಲು ಸಾಧ್ಯ' ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಅಧಿವೇಶನದಲ್ಲಿ ನಾನು ಅಕ್ಕ-ಪಕ್ಕದ ರಾಜ್ಯಗಳಿಗಿಂತ ಕರ್ನಾಟಕದಲ್ಲಿ 200 ರಿಂದ 400 ಪಟ್ಟು ಹೆಚ್ಚಿಗೆ ದರಗಳನ್ನು ವಿಧಿಸಲಾಗುತ್ತಿದೆ, ಇದನ್ನು ಕಡಿಮೆ ಮಾಡಿ ಎಂದು ಒತ್ತಾಯಿಸಿದ್ದೆ. ಆದರೆ, ಅದನ್ನೂ ಸಹ ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿಲ್ಲ. ಈಗಲೂ ಕಾಲ ಮಿಂಚಿಲ್ಲ. ವಿದ್ಯುಚ್ಛಕ್ತಿ ಕುರಿತಾದ ಪರಿಣತರು, ವಿರೋಧ ಪಕ್ಷಗಳ ಮುಖಂಡರ ಸಭೆಯನ್ನು ಕರೆದು ವಿದ್ಯುಚ್ಛಕ್ತಿ ದರಗಳನ್ನು ಕಡಿಮೆ ಮಾಡುವುದು ಹೇಗೆ ಎಂದು  ಸಲಹೆಗಳನ್ನು ಪಡೆಯಬೇಕು. ಅಲ್ಲಿಯವರೆಗೆ ವಿದ್ಯುಚ್ಛಕ್ತಿ ದರಗಳನ್ನು ಹೆಚ್ಚಿಸಬಾರದು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News