×
Ad

ಕೇಂದ್ರ ಸರಕಾರದಿಂದ ತೆರಿಗೆ ಭಯೋತ್ಪಾದನೆ: ಕೃಷ್ಣ ಭೈರೇಗೌಡ ವಾಗ್ದಾಳಿ

Update: 2021-06-09 22:59 IST

ಬೆಂಗಳೂರು, ಜೂ.9: ದಿನೇ ದಿನೇ ಅಗತ್ಯ ವಸ್ತುಗಳ ಮೇಲೆ ತೆರಿಗೆ ಹೆಚ್ಚಳ ಮಾಡುತ್ತಿರುವ ಕೇಂದ್ರ ಸರಕಾರ ತೆರಿಗೆ ಭಯೋತ್ಪಾದನೆ ನೀತಿ ಅನುಸರಿಸುತ್ತಿದೆ ಎಂದು ಮಾಜಿ ಸಚಿವ ಕೃಷ್ಣ ಭೈರೇಗೌಡ ವಾಗ್ದಾಳಿ ನಡೆಸಿದ್ದಾರೆ.

ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಮೇಲಿನ ತೆರಿಗೆಯನ್ನು ನಿರಂತರವಾಗಿ ಹೆಚ್ಚಿಸುತ್ತಾ ಬಂದಿರುವ ಕೇಂದ್ರ ಸರಕಾರ ಸೆಂಚುರಿ ಬಾರಿಸಿದೆ. ಕೋವಿಡ್ ಸಂದರ್ಭದಲ್ಲಿ ತೈಲೋತ್ಪನ್ನಗಳ ಮೇಲೆ ಈ ಪ್ರಮಾಣದ ಸುಂಕ ವಿಧಿಸಿದರೆ ಜನಸಾಮಾನ್ಯರು ಬದುಕುವುದು ಹೇಗೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ 2014 ರಲ್ಲಿ ಕೇಂದ್ರದಲ್ಲಿ ಆಡಳಿತದಲ್ಲಿದ್ದಾಗ ಡೀಸೆಲ್‍ಗೆ 3.46 ರೂ. ತೆರಿಗೆ ಇದ್ದದ್ದು ಈಗ 31.80 ರೂ. ಹಾಗೂ ಪೆಟ್ರೋಲ್ ಮೇಲಿನ ತೆರಿಗೆ 9.20 ರು. ಇದ್ದದ್ದು 32.90 ರೂ. ಅಡುಗೆ ಅನಿಲ ಸಿಲಿಂಡರ್ ಬೆಲೆ 410 ರಿಂದ 820 ರೂ.ಬಂದಿದೆ ಎಂದು ತಿಳಿಸಿದರು.

ತೆರಿಗೆ ಸಂಗ್ರಹ ಬೂತ್ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಹೆಚ್ಚಾಗಿರುವುದರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳವಾಗಿದೆ ಎಂದು ಕೇಂದ್ರ ಸರಕಾರ ಸುಳ್ಳು ಹೇಳುತ್ತಿದೆ ಎಂದ ಅವರು, ಬೆಲೆ ಕಡಿಮೆ ಇದ್ದರೂ ಹೆಚ್ಚು ತೆರಿಗೆ ವಿಧಿಸಲಾಗುತ್ತಿದೆ. ಕಳೆದ 7 ವರ್ಷದಲ್ಲಿ 7 ಪಟ್ಟು ತೆರಿಗೆ ಹೆಚ್ಚಳ ಮಾಡಲಾಗಿದೆ. ಪೆಟ್ರೋಲ್ ಬಂಕ್‍ಗಳು ತೆರಿಗೆ ಸಂಗ್ರಹ ಬೂತ್‍ಗಳಾಗಿವೆ ಎಂದು ಆರೋಪಿಸಿದರು.

ಒಂದು ಲೀಟರ್ ಪೆಟ್ರೋಲ್ ದರ ನೇಪಾಳದಲ್ಲಿ 77.67 ರೂ., ಬಾಂಗ್ಲಾದಲ್ಲಿ 76.86, ಭೂತಾನ್‍ನಲ್ಲಿ 68.76, ಶ್ರೀಲಂಕಾದಲ್ಲಿ 59.64, ಪಾಕಿಸ್ತಾನದಲ್ಲಿ 51.61 ರು. ಇದ್ದರೂ ಭಾರತದಲ್ಲಿ ಶತಕ ಬಾರಿಸಲಾಗುತ್ತಿದೆ. ಅದು ಅಲ್ಲದೆ, ಶ್ರೀಮಂತರ ಕಾರ್ಪೋರೇಟ್ ತೆರಿಗೆ ಕಡಿತ ಮಾಡಿದ ಕೇಂದ್ರ ಸರಕಾರ, ಬಡವರು ಹೆಚ್ಚಾಗಿ ಬಳಸುವ ತೈಲೋತ್ಪನ್ನಗಳ ಮೇಲೆ ವಿಪರೀತ ತೆರಿಗೆ ವಿಧಿಸಿ ತೆರಿಗೆ ಭಯೋತ್ಪಾದನೆ ನೀತಿ ಅನುಸರಿಸುತ್ತಿದೆ ಎಂದು ದೂರಿದರು.

ಈ ಸಂದರ್ಭದಲ್ಲಿ ಶಾಸಕರಾದ ಪ್ರಿಯಾಂಕ್ ಖರ್ಗೆ, ರಿಝ್ವಾನ್ ಆರ್ಶದ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News