×
Ad

''ವಾಟ್ಸಾಪ್ ಗ್ರೂಪ್ ಮೂಲಕ ಹೊರ ಜಿಲ್ಲೆ, ವಿದೇಶಗಳ ವೈದ್ಯರಿಂದ ಸೋಂಕಿತರಿಗೆ ಚಿಕಿತ್ಸೆ ಕುರಿತು ಸಲಹೆ''

Update: 2021-06-09 23:31 IST

ಚಿಕ್ಕಮಗಳೂರು, ಜೂ.9: ಕಡೂರು ತಾಲೂಕಿನಲ್ಲಿ ಐಸೋಲೇಷನಲ್ಲಿರುವ 500 ಕೊರೋನ ಸೋಂಕಿತರಿಗೆ ವಾಟ್ಸಾಪ್ ಮೂಲಕ ವೈದ್ಯಕೀಯ ಚಿಕಿತ್ಸೆಗೆ ಸಂಬಂಧಿಸಿದ ಸಲಹೆಗಳನ್ನು ಬೆಂಗಳೂರಿನ ವೈದ್ಯಕೀಯ ಕಾಲೇಜಿನ ವೈದ್ಯರ ತಂಡವೊಂದು ಪ್ರತಿದಿನ ನೀಡುತ್ತಿದೆ. ಬೆಂಗಳೂರಿನ ಡಾ.ನಾಗರಾಜ್ ನೇತೃತ್ವದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಈ ವಾಟ್ಸಾಪ್ ಗ್ರೂಪ್‍ನಲ್ಲಿದ್ದಾರೆ. ಅತೀಸೂಕ್ಷ್ಮ ಸ್ಥಿತಿಯಲ್ಲಿರುವ ಸೋಂಕಿತರಿಗೆ ಭಾರತದಲ್ಲಿ ವೈದ್ಯಕೀಯ ಶಿಕ್ಷಣ ಪಡೆದು ಅಮೇರಿಕದಲ್ಲಿ ವೈದ್ಯ ವೃತ್ತಿಯಲ್ಲಿರುವ 900ಕ್ಕೂ ಹೆಚ್ಚು ಮಂದಿ ಚಿಕಿತ್ಸೆಗೆ ಸಂಬಂಧಿಸಿದ ಸಲಹೆಗಳನ್ನು ನೀಡುತ್ತಿದ್ದಾರೆಂದು ಜಿಲ್ಲಾ ಸರ್ಜನ್ ಡಾ.ಮೋಹನ್‍ ಕುಮಾರ್ ತಿಳಿಸಿದ್ದಾರೆ.

ಬುಧವಾರ ಈ ಸಂಬಂಧ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ದೂರದಲ್ಲಿರುವ ವೈದ್ಯರಿಂದ ವಾಟ್ಸಾಪ್ ಮೂಲಕ ಸೋಂಕಿತರಿಗೆ ಚಿಕಿತ್ಸೆಗೆ ಸಂಬಂಧಿಸಿದ ಸಲಹೆ ಸೂಚನೆ ನೀಡಲು ಕೆಲ ವೈದ್ಯರು ಮುಂದೆ ಬಂದಿದ್ದರು. ಜಿಲ್ಲೆಯ ಕಡೂರು ತಾಲೂಕನ್ನು ಇದಕ್ಕೆ ಪ್ರಾಯೋಗಿಕವಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ವೈದ್ಯರಿಂದ ಸಲಹೆಗಳನ್ನು ಪಡೆಯುವ ನರ್ಸ್ ಗಳು ಚಿಕಿತ್ಸೆ ಮುಂದುವರಿಸುತ್ತಿದ್ದಾರೆ. ವೈದ್ಯರ ಚಿಕಿತ್ಸಾ ವಿಧಾನಗಳಿಗೆ ಸೋಂಕಿತರು ಸ್ಪಂದಿಸುತ್ತಿದ್ದಾರೆ ಎಂದು ಹೇಳಿದರು.

ಕಡೂರು ತಾಲೂಕಿನಲ್ಲಿ ಮೇ 27ರಿಂದ ಈ ರೀತಿಯ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ 650 ಸೋಂಕಿತರು ಚಿಕಿತ್ಸೆಯ ಸೌಲಭ್ಯಗಳನ್ನು ಪಡೆದುಕೊಂಡಿದ್ದಾರೆ. ಈ ವೈದ್ಯರ ತಂಡವು ಸೋಂಕಿತರನ್ನು ಮೊಬೈಲ್ ಮೂಲಕ ಸಂಪರ್ಕಿಸಿ ದೇಹದಲ್ಲಿ ಉಂಟಾಗುತ್ತಿರುವ ಏರುಪೇರುಗಳನ್ನು ತಿಳಿದುಕೊಳ್ಳುತ್ತಿದ್ದಾರೆ. ಸೋಂಕಿತರ ದೇಹದಲ್ಲಾಗುತ್ತಿರುವ ಸುಸ್ತು, ಯಾತನೆ, ಆಕ್ಸಿಜನ್, ಪಲ್ಸ್, ಸ್ಯಾಚುರೇಷನ್ ಕಡಿಮೆಯಾಗಿರುವುದನ್ನು ತಿಳಿದುಕೊಂಡು ಕೂಡಲೇ ತಾಲೂಕು ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡುತ್ತಿದ್ದು, ಈ ವೇಳೆ ನೀಡಬೇಕಾದ ಚಿಕಿತ್ಸೆಯ ಬಗ್ಗೆಯೂ ಹೇಳುತ್ತಿದ್ದಾರೆ. ಅದರಂತೆ ವೈದ್ಯರು, ಸಿಬ್ಬಂದಿ ಚಿಕಿತ್ಸೆ ನೀಡುತ್ತಿದ್ದಾರೆ ಎಂದರು.

ಅಲ್ಲಿನ ವೈದ್ಯರಿಂದ ಚಿಕಿತ್ಸೆಗೆ ಸಂಬಂಧಿಸಿದ ಮಾಹಿತಿ ದೊರೆತಾಕ್ಷಣ ಚಿಕಿತ್ಸೆ ಆರಂಭಗೊಳ್ಳುತ್ತಿದೆ. ಅತ್ಯಗತ್ಯ ಚಿಕಿತ್ಸೆ ಬೇಕಾದಲ್ಲಿ ಸೋಂಕಿತರನ್ನು ತಾಲೂಕು ಆಸ್ಪತ್ರೆಗೆ ಕರೆ ತರಲಾಗುತ್ತಿದೆ. ಇನ್ನೂ ಹೆಚ್ಚಿನ ಚಿಕಿತ್ಸೆ ಬೇಕಾದಲ್ಲಿ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಕರೆತರುವ ಮೂಲಕ ಚಿಕಿತ್ಸೆ ಮುಂದುವರಿಸಲಾಗುವುದು ಎಂದ ಅವರು, ವಾಟ್ಸಾಪ್ ಮೂಲಕ ರೋಗಿಗಳು ಮತ್ತು ತಾಲೂಕು, ಜಿಲ್ಲಾಸ್ಪತ್ರೆಗಳ ನಡುವೆ ಕೊಂಡಿಯಾಗಿ ದೂರದಲ್ಲಿರುವ ಹೊರ ದೇಶಗಳಲ್ಲಿರುವ ವೈದ್ಯರ ತಂಡವು ಕಾರ್ಯನಿರ್ವಹಿಸುತ್ತಿದೆ. ಇದು ಕಡೂರು ತಾಲೂಕಿನಲ್ಲಿರುವ ಕೊರೋನ ಸೋಂಕಿತರಿಗೆ ಹೆಚ್ಚಿನ ಚಿಕಿತ್ಸೆ ನೀಡಲು ಅನುಕೂಲವಾಗುತ್ತಿದೆ ಎಂದು ತಿಳಿಸಿದರು.

2.50 ಕೋ. ರೂ. ವೆಚ್ಚ ವೈದ್ಯಕೀಯ ಉಪಕರಣಗಳ ನೇರವು: ಕೊರೋನ ಸೋಂಕು ನಿಯಂತ್ರಣಕ್ಕಾಗಿ ದಾನಿಗಳು ಊಟ ನೀಡುವುದರೊಂದಿಗೆ 2.50 ಕೋಟಿ ರೂ. ವೆಚ್ಚದ ವೈದ್ಯಕೀಯ ಸಲಕರಣೆಗಳ ನೆರವು ನೀಡಿದ್ದಾರೆ. ಪತ್ತಿನ ಸಹಕಾರಿ ಸಂಘಗಳು, ಜೈನ್ ಸಂಘ, ಬ್ರಾಹ್ಮಣ ಮಹಾಸಭಾದವರು ಊಟ ನೀಡುತ್ತಿದ್ದಾರೆ. ಇದು 43 ಸಿಸ್ಟರ್‍ಗಳು, ನರ್ಸಿಂಗ್ ವಿದ್ಯಾರ್ಥಿಗಳಿಗೆ ಉಪಯೋಗವಾಗಿದೆ ಎಂದು ತಿಳಿಸಿದರು.

ಅಮೇರಿಕಾದಿಂದಲೂ ನೆರವು: ಅಮೇರಿಕದ ಕೆಆರ್‍ಐಎನ್‍ಸಿ, ಸಿಎಆರ್‍ಇ, ಐಎನ್‍ಸಿ ಸಂಸ್ಥೆಗಳಿಂದ ಹೆಚ್ಚುವರಿಯಾಗಿ ಮಲ್ಲೇಗೌಡ ಸಾರ್ವಜನಿಕ ಆಸ್ಪತ್ರೆಗೆ 20 ಆಕ್ಸಿಜನ್ ಕಾನ್ಸ್‍ಂಸ್ಟೇಟರ್ಸ್ ಬಂದಿವೆ. ಅವುಗಳಲ್ಲಿ ಕಡೂರು ಮತ್ತು ತರೀಕೆರೆಗೆ ತಲಾ 10 ಕಾನ್ಸ್‍ಂಟ್ರೇಟರ್ಸ್‍ಗಳನ್ನು ನೀಡಲಾಗಿದೆ ಎಂದು ಡಾ.ಮೋಹನ್‍ಕುಮಾರ್ ಹೇಳಿದರು

122 ಸೋಂಕಿತರಿಗೆ ಚಿಕಿತ್ಸೆ: ಜಿಲ್ಲಾಸ್ಪತ್ರೆಯಲ್ಲಿ 122 ಕೊರೋನಾ ಸೋಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇಲ್ಲಿ 28 ವೆಂಟಿಲೇಟರ್, 160 ಆಕ್ಸಿಜನ್ ಹಾಸಿಗಳಿದ್ದು, ಅದರಲ್ಲಿ 30 ಆಕ್ಸಿಜನ್ ಹಾಸಿಗೆಗಳು, 20 ಜನರಲ್ ಬೆಡ್‍ಗಳು ಖಾಲಿ ಇವೆ ಎಂದ ಅವರು, ಆಕ್ಸಿಜನ್‍ಹೊಂದಿರುವ ಬಸ್‍ನಿಂದ 56 ಸೋಂಕಿತರಿಗೆ ಅನುಕೂಲವಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News